ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದುಗೊಳಿಸಿ ಸರಕಾರ ಆದೇಶಿಸಿದೆ. ಆಪಾದಿತರನ್ನು ಬಿಟ್ಟು , ಉಳಿದವರಿಗೆ ಮರುಪರೀಕ್ಷೆ ಬರೆಯಲು ಅವಕಾಶವಿದೆ.
ಬೆಂಗಳೂರು(ಎ.29): ಪಿಎಸ್‌ಐ ನೇಮಕಾತಿ ಹಗರಣದ (PSI Recruitment Scam) ಕಿಂಗ್‌ಪಿನ್ ದಿವ್ಯಾ ಹಾಗರಗಿ (Divya Hagaragi) ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದುಗೊಳಿಸಿ ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ. ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ,ಮರು ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ (Minister Araga jnanendra ) ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಯಾರೇ ಇರಲಿ ಎಷ್ಟೇ ಪ್ರಭಾವಿಗಳು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ತೀವಿ. ಅವರನ್ನು ಹೆಡೆಮುರಿ ಕಟ್ತೀವಿ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಒಟ್ಟು 54289 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಇದ್ದ ಆಪಾದಿತರನ್ನು ಬಿಟ್ಟು , ಉಳಿದವರಿಗೆ ಮರುಪರೀಕ್ಷೆ (Reexam) ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಘಟನೆ ಹಿನ್ನೆಲೆ: ನೇಮಕಾತಿ ಅಕ್ರಮದ ಬಗ್ಗೆ ‘ಕನ್ನಡಪ್ರಭ’ ಏಷ್ಯಾನೆಟ್ ಸುವರ್ಣನ್ಯೂಸ್ ಸರಣಿ ವರದಿಗಳನ್ನು ಪ್ರಕಟಿಸಿ, ಸರ್ಕಾರದ ಗಮನ ಸೆಳೆದಿತ್ತು. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಸೇರಿದಂತೆ ಹಿರಿಯ ಸದಸ್ಯರು ಈ ವರದಿಗಳನ್ನು ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದ್ದರು.
ಇತ್ತ ರಾಜ್ಯದ ವಿವಿಧೆಡೆಯ ನೊಂದ ಅಭ್ಯರ್ಥಿಗಳೂ ನೇಮಕಾತಿ ಅಕ್ರಮ ಕುರಿತು, ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಧಾರವಾಡ ಸೇರಿದಂತೆ ಹಲವೆಡೆ ನೊಂದ ಅಭ್ಯರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದರಲ್ಲದೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ತನಿಖೆಗೆ ಆಗ್ರಹಿಸಿದ್ದರು.
ಸಿಐಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ್ದ ಹಾಗರಗಿ: 18 ದಿನದಿಂದ ದಿವ್ಯಾ ಎಲ್ಲಿದ್ರು? ಇಂಚಿಂಚು ಮಾಹಿತಿ ಇಲ್ಲಿದೆ
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಕುರಿತು ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಕ್ರಿಯಿಸಿದ್ದ ಗೃಹ ಸಚಿವರು, ಪಿಎಸ್‌ಐ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್ ಉಪಕರಣಗಳನ್ನು ಬಳಸಿ ಸಹಾಯ ಮಾಡುತ್ತಿದ್ದ ಅಕ್ರಮ ಕೂಟದ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಲಾಗಿದೆ ಎಂದಿದ್ದರು. ಆದರೆ ಸಚಿವರು ಹೇಳಿದಂತೆ ಅ.3, 2021ರಂದು ನಡೆದ ಪಿಎಸ್‌ಐ ಲಿಖಿತ ಪರೀಕ್ಷೆ ವೇಳೆ ಯಾವುದೇ ದಾಳಿ ನಡೆದಿರಲಿಲ್ಲ. ಬದಲಾಗಿ ಅ.24ರಂದು ನಡೆದ ಕಾನ್ಸ್‌ಟೇಬಲ್ ಪರೀಕ್ಷೆಯ ಮುನ್ನಾದಿನ (ಅ.23, 2021) ಕಲಬುರಗಿ ಹಾಗೂ ಬೆಳಗಾವಿ ವಿಭಾಗದಲ್ಲಿ ದಾಳಿ ನಡೆದಿತ್ತು. ಎಲೆಕ್ಟ್ರಾನಿಕ್ ಸಾಧನ, ಬ್ಲೂಟೂತ್ ಬಳಸಿ ಪರೀಕ್ಷೆಯಲ್ಲಿ ನಕಲು ಮಾಡುವ ಯತ್ನಕ್ಕಿಳಿದಿದ್ದ 9 ಜನರನ್ನು ಕಲಬುರಗಿಯಲ್ಲಿ ಪೊಲೀಸರು ಬಂಧಿಸಿದ್ದರು(ಅಪರಾಧ ಸಂಖ್ಯೆ: 23/2021). ಲಾಡ್ಜ್‌ವೊಂದರಲ್ಲಿ ತಂಗಿದ್ದ ಇವರ ಮೇಲೆ ದಾಳಿ ನಡೆಸಿದಾಗ, ಬ್ಲೂಟೂತ್ ಡಿವೈಸ್, ಮೈಕ್ರೋಫೋನ್ ಮತ್ತು ಸಿಮ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಸದನದಲ್ಲಿ ಉತ್ತರಿಸುವಾಗ ಗೃಹಸಚಿವರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ವಾಸ್ತವಾಂಶದ ಮಾಹಿತಿ ನೀಡದೆ ದಾರಿ ತಪ್ಪಿಸುವ ಯತ್ನ ನಡೆಸಿದ್ದರು ಎಂಬಿತ್ಯಾದಿ ಮಾತುಗಳು ಕೇಳಿ ಬಂದಿತ್ತು.
HRP Land Scam ಹಾಸನ ಡಿಸಿಯಿಂದ 800 ಎಕರೆ ಭೂ ಮಂಜೂರಾತಿ ರದ್ದು
ಏ.9ರಂದು ಬೆಂಗಳೂರು ಸಿಐಡಿ ಅಧಿಕಾರಿಗಳು ಕಲಬುರಗಿಗೆ ಬಂದು ಪರೀಕ್ಷಾ ಅಕ್ರಮವಾಗಿದೆ ಎಂದು ದೂರು ಸಲ್ಲಿಸಿ ಸೇಡಂನ ನಿವಾಸಿ, ಎಎಸ್‌ಐ ಪುತ್ರ ವಿರೇಶ ಎಂಬಾತನ ಉತ್ತರ ಪತ್ರಿಕೆಯ ಬೆನ್ನು ಬಿದ್ದು, ವಿಚಾರಣೆ ನಡೆಸಿದ್ದರ ಬೆನ್ನಲ್ಲೇ ಮೋಸದಾಟ ಬಯಲಾಗುತ್ತಾ ಹೋಯ್ತು.
ಕಲಬುರಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಪರೀಕ್ಷಾ ಕೇಂದ್ರದಲ್ಲಿ ನಡೆದಂತಹ ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ಸೇಡಂನ ವಿರೇಶ ಕೇವಲ 21 ಪ್ರಶ್ನೆಗಳಿಗೆ ಸರಿ ಉತ್ತರ ಬರೆದಿದ್ದ. ಆದಾಗ್ಯೂ, ಫಲಿತಾಂಶದಲ್ಲಿ ಆತನಿಗೆ 100 ಪ್ರಶ್ನೆಗಳಿಗೂ ಸರಿ ಉತ್ತರ ಎಂದು ಅಂಕ ನೀಡಲಾಗಿತ್ತು. ಆತ ಪರೀಕ್ಷೆ ಬರೆದಿದ್ದ ವೇಳೆ ಪಡೆದಿದ್ದ ಓಎಂಆರ್ ಶೀಟ್ ದೃಢೀಕರಣ ಪ್ರತಿ ತೆಗೆದು ನೋಡಿದಾಗ ಅಲ್ಲಿದ್ದದ್ದು ಕೇವಲ 21 ಸರಿ ಉತ್ತರ. ನೇಮಕಾತಿಯ ಹಂತದಲ್ಲಿ ಓಂಎಂಆರ್ ಶೀಟ್ ನೋಡಿದರೆ ನೂರಕ್ಕೆ ನೂರು ಸರಿ ಉತ್ತರ ವಿರೇಶ ಬರೆದದ್ದು ಹೇಗೆ? ಇದೇ ಅಕ್ರಮದ ಪರಾಕಾಷ್ಟೆಎಂದು ತನಿಖಾಧಿಕಾರಿಗಳು ಬೆರಗಾಗಿದ್ದರು.