ವಾಹನಗಳಿಗೆ ಪ್ಯಾನಿಕ್ ಬಟನ್ ಎಲ್​ವಿಟಿ ಕಡ್ಡಾಯ; ಖಾಸಗಿ ವಾಹನ ಮಾಲೀಕರ ವಿರೋಧ!

By Kannadaprabha NewsFirst Published Dec 1, 2023, 6:03 AM IST
Highlights

ಸಾರ್ವಜನಿಕ ಸೇವೆ ನೀಡುವ ಖಾಸಗಿ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ಡಿ. 1ರಿಂದ ಜಿಪಿಎಸ್‌ ರೀತಿಯ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿ) ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಸರ್ಕಾರದ ಈ ಕ್ರಮಕ್ಕೆ ಖಾಸಗಿ ವಾಹನ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು (ಡಿ.1): ಸಾರ್ವಜನಿಕ ಸೇವೆ ನೀಡುವ ಖಾಸಗಿ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ಡಿ. 1ರಿಂದ ಜಿಪಿಎಸ್‌ ರೀತಿಯ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿ) ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಸರ್ಕಾರದ ಈ ಕ್ರಮಕ್ಕೆ ಖಾಸಗಿ ವಾಹನ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಆದೇಶದಂತೆ ಮಹಿಳಾ ಸುರಕ್ಷತೆ ದೃಷ್ಟಿಯಿಂದಾಗಿ ದೇಶದ ಎಲ್ಲ ಸಾರ್ವಜನಿಕ ಸೇವೆ ನೀಡುವ ಖಾಸಗಿ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆ ಕಡ್ಡಾಯವಾಗಿಸಲಾಗಿದೆ. ಅದರಂತೆ ರಾಜ್ಯ ವ್ಯಾಪ್ತಿಯ ವಾಹನಗಳು ಡಿ. 1ರಿಂದ 2024ರ ನ. 30ರೊಳಗೆ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆ ಮಾಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಆದೇಶಿಸಿದೆ. ಅಲ್ಲದೆ, ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸುವುದಕ್ಕೆ ಖಾಸಗಿ ಸಂಸ್ಥೆಯನ್ನೂ ಗುರುತಿಸಲಾಗಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಖಾಸಗಿ ವಾಹನ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ವಾಹನ ಅಳವಡಿಸುವ ನೂತನ ವ್ಯವಸ್ಥೆ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

Latest Videos

 

ಅಬಕಾರಿ ಹಗರಣದ ಬಳಿಕ 'ಪ್ಯಾನಿಕ್‌ ಬಟನ್‌ ಸ್ಕ್ಯಾಮ್‌' ಬಲೆಯಲ್ಲಿ ಸಿಲುಕಿದ ದೆಹಲಿಯ ಆಪ್‌ ಸರ್ಕಾರ?

ಯಾವುದೇ ಮಾಹಿತಿಯಿಲ್ಲದೆ ಅಳವಡಿಕೆ ಮಾಡಲಾಗದು:

ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚಿನ ಬಸ್, ಟ್ಯಾಕ್ಸಿ ಸೇರಿದಂತೆ ಇನ್ನಿತರ ಸಾರ್ವಜನಿಕ ಸೇವೆ ನೀಡುವ ಖಾಸಗಿ ವಾಹನಗಳು ಹಾಗೂ ರಾಷ್ಟ್ರೀಯ ರಹದಾರಿ ಹೊಂದಿರುವ ಸರಕು ಸಾಗಣೆ ವಾಹನಗಳಿವೆ. ಅವುಗಳೆಲ್ಲವಕ್ಕೂ ಇದೀಗ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಬೇಕಿದೆ. ಆದರೆ, ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಿದ ನಂತರ ಅದರ ಮಾಹಿತಿ ಯಾರ ಬಳಿಗೆ ತಲುಪಲಿದೆ ಹಾಗೂ ಅದರ ನಿರ್ವಹಣೆಯ ಬಗೆ ಹೇಗೆ ಎಂಬ ಮಾಹಿತಿಯನ್ನು ಖಾಸಗಿ ವಾಹನ ಮಾಲೀಕರಿಗೆ ನೀಡಿಲ್ಲ. ಹೀಗಾಗಿ ತಮ್ಮ ವಾಹನಗಳ ಮಾಹಿತಿ ದುರುಪಯೋಗವಾಗುವುದಿಲ್ಲ ಎಂಬ ಬಗ್ಗೆ ಸಾರಿಗೆ ಇಲಾಖೆ ಸ್ಪಷ್ಟಪಡಿಸಬೇಕು. ಅಲ್ಲಿಯವರೆಗೆ ತಾವು ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಸಾಧನಗಳ ದರದ ಬಗ್ಗೆ ತಗಾದೆ:

ಸಾಮಾನ್ಯವಾಗಿ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆ 5 ಸಾವಿರ ರು.ಗಿಂತ ಕಡಿಮೆಯಾಗಲಿದೆ. ಆದರೆ, ಸಾರಿಗೆ ಇಲಾಖೆ 7,599 ರು. ನಿಗದಿ ಮಾಡಿದ್ದು, ವಾಹನ ಮಾಲೀಕರಿಗೆ ಹೊರೆಯಾಗಲಿದೆ. ಹೀಗಾಗಿ ದರ ಕಡಿಮೆ ಮಾಡಬೇಕು ಎಂದೂ ಖಾಸಗಿ ವಾಹನ ಮಾಲೀಕರು ಆಗ್ರಹಿಸುತ್ತಿದ್ದಾರೆ.

 

ಸಾರಿಗೆ ವಾಹನಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯ: ಸಂಪುಟ ನಿರ್ಧಾರ

ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಖಾಸಗಿ ವಾಹನ ಮಾಲೀಕರು ಮತ್ತು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ವಾಹನಗಳ ಸಂಚಾರದ ಮಾಹಿತಿ ಪಡೆದ ನಂತರ ಅದು ಎಲ್ಲಿಗೆ ರವಾನೆಯಾಗುತ್ತದೆ, ಅದರ ನಿರ್ವಹಣೆ ಹೇಗೆ ಎಂಬ ಮಾಹಿತಿಯನ್ನು ಸಾರಿಗೆ ಇಲಾಖೆ ನಮಗೆ ನೀಡಿಲ್ಲ. ಜತೆಗೆ ಸಾಧನಗಳ ಬೆಲೆಯೂ ಹೆಚ್ಚಿದ್ದು, ಅದು ವಾಹನ ಮಾಲೀಕರಿಗೆ ಹೊರೆಯಾಗಲಿದೆ. ಆ ಬಗ್ಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು.

ನಟರಾಜ್‌ ಶರ್ಮಾ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ

ಕೇಂದ್ರ ಸರ್ಕಾರ ಆದೇಶದಂತೆ ಖಾಸಗಿ ಸಾರ್ವಜನಿಕ ಸೇವೆ ನೀಡುವ ವಾಹನಗಳಿಗೆ ವಿಎಲ್‌ಟಿ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಸೂಚಿಸಲಾಗಿದೆ. ಯಾವುದೇ ಯೋಜನೆಯಾದರೂ ಆರಂಭದಲ್ಲಿ ವಿರೋಧ ವ್ಯಕ್ತವಾಗುತ್ತದೆ. ಅದನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು

ಯೋಗೀಶ್‌, ಸಾರಿಗೆ ಆಯುಕ್ತ

click me!