ಖಾಸಗಿ ಆಡಳಿತ ಮಂಡಳಿಗಳ ಒತ್ತಡಕ್ಕೆ ಕಡೆಗೂ ಮಣಿದಿರುವ ರಾಜ್ಯ ಸರ್ಕಾರ ಆರ್ಥಿಕವಾಗಿ ಸಬಲರಾಗಿರುವ ಪೋಷಕರಿಂದ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ವಸೂಲಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಬೆಂಗಳೂರು(ಏ.24): ಖಾಸಗಿ ಆಡಳಿತ ಮಂಡಳಿಗಳ ಒತ್ತಡಕ್ಕೆ ಕಡೆಗೂ ಮಣಿದಿರುವ ರಾಜ್ಯ ಸರ್ಕಾರ ಆರ್ಥಿಕವಾಗಿ ಸಬಲರಾಗಿರುವ ಪೋಷಕರಿಂದ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ವಸೂಲಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಬೋಧಕ, ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಪೋಷಕರಿಂದ ಮುಂದಿನ ಶೈಕ್ಷಣಿಕ ವರ್ಷದ ಶುಲ್ಕ ವಸೂಲಿಗೆ ಅವಕಾಶ ನೀಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಆದೇಶ ಹೊರಡಿಸಿದೆ.
ರಜೆಗೆ ಊರಿಗೆ ಬಂದಿದ್ದ ಯೋಧ ಉಸಿರಾಟದ ತೊಂದರೆಯಿಂದ ಸಾವು
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು, ಶುಲ್ಕ ಪಾವತಿ ಮಾಡಲಾಗದ ಸ್ಥಿತಿಯಲ್ಲಿರುವ ಪೋಷಕರು ಹಾಗೂ ಸದ್ಯದ ಮಟ್ಟಿಗೆ ಶುಲ್ಕ ಪಾವತಿಸಲು ನಿರಾಕರಿಸುವ ಪೋಷಕರಿಂದ ಒತ್ತಾಯಪೂರ್ವಕವಾಗಿ ಶುಲ್ಕ ವಸೂಲಿ ಮಾಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ವೇಳೆ ಪೋಷಕರ ಮೇಲೆ ಒತ್ತಡ ಹೇರಿದರೆ ಸಂಬಂಧಪಟ್ಟಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ನೀಡಿದ್ದ ಸರ್ಕಾರ:
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಾರಂಭವಾಗುವ ತನಕ ದಾಖಲಾತಿ ಮಾಡಿಕೊಳ್ಳುವಂತಿಲ್ಲ ಮತ್ತು ಶುಲ್ಕ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿದರೆ ಶಾಲೆಗಳ ಮಾನ್ಯತೆ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಖಾಸಗಿ ಶಾಲೆಗಳ ಕೃತಜ್ಞತೆ:
ಪೋಷಕರಿಂದ ಶುಲ್ಕ ವಸೂಲಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಖಾಸಗಿ ಶಾಲೆಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಯಾವುದೇ ಶಾಲೆಗಳು ಒತ್ತಡ ಹೇರಿ ಶುಲ್ಕ ವಸೂಲಿ ಮಾಡಬಾರದು ಎಂದು ಶಿಕ್ಷಣ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ.