
ಬೆಂಗಳೂರು(ಏ.24): ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ಅಡಚಣೆಯಿಲ್ಲದೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಸರಬರಾಜು ಮಾಡಲು ದಿನದ 24 ಗಂಟೆಯೂ ಸೂಪರ್ ಮಾರ್ಕೆಟ್ ತೆರೆಯಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತು ವಕೀಲರಾದ ಸಂಧ್ಯಾ ಯು.ಪ್ರಭು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸೂಪರ್ ಮಾರ್ಕೆಟ್ ದಿನದ 24 ಗಂಟೆಯೂ ತೆರೆಯುವುದು ಸರ್ಕಾರದ ನೀತಿ ನಿರ್ಣಯವಾಗಿದೆ. ಆದ್ದರಿಂದ ಆ ಆದೇಶದಲ್ಲಿ ಕಾನೂನಿನ ತೊಡಕಿದೆ ಎಂದು ನ್ಯಾಯಾಲಯಕ್ಕೆ ಅನಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ಮನವಿ ಪುರಸ್ಕರಿಸಲು ನಿರಾಕರಿಸಿತು.
ಕೊರೋನಾ ಆತಂಕ: ಎಂತಹ ಸಂದಿಗ್ಧ ಪರಿಸ್ಥಿತಿ ಎದುರಿಸಲು ಸಜ್ಜಾಗಿ, ಡಿಸಿಎಂ
ಅಲ್ಲದೆ, ಸಾರ್ವಜನಿಕರಿಗೆ ದಿನಸಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ಯಾವುದೇ ಅಡಚಣೆಯಿಲ್ಲದೇ ಸರಬರಾಜು ಮಾಡುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಸದ್ಯ ನೆಲೆಸಿರುವ ಪರಿಸ್ಥಿತಿ ನೋಡಿದರೆ ದಿನಸಿ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್ ತೆರೆಯುವ ಸಮಯವನ್ನು ಸರ್ಕಾರದ ಇಲಾಖೆಗಳು ನಿರ್ಧಾರ ಕೈಗೊಳ್ಳಬಹುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಇತರೆ ನಿಯಮಗಳನ್ನು ಪಾಲನೆ ಮಾಡಲು ಸರ್ಕಾರ ನಿರ್ದೇಶನ ನೀಡಬಹುದು. ಹೀಗಾಗಿ, ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ತಬ್ಲೀಘಿಗಳಿಗೆ ರಕ್ಷಣೆ ನೀಡಿದ ಆರೋಪ: ಶಾಸಕ ಜಮೀರ್ ವಿರುದ್ಧ ದೂರು
ಸೂಪರ್ ಮಾರ್ಕೆಟ್ ದಿನ 24 ಗಂಟೆಯೂ ತೆರೆದಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಜನ ಮಾರ್ಕೆಟ್‌ಗೆ ಭೇಟಿ ನೀಡಿ, ಮಾರಾಟಕ್ಕೆ ಇಟ್ಟಿರುವ ವಸ್ತುಗಳನ್ನು ಮುಟ್ಟಬಹುದು. ಇದರಿಂದ ಅವರಿಗೆ ಕೋವಿಡ್-19 ಹರಡಬಹುದು. ಹೀಗಾಗಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ