ಪ್ರಧಾನಿ ಮೋದಿ ರೀತಿ ನಾವೂ ದುಡಿಯೋಣ : ಸಿಎಂ ಬಸವರಾಜ ಬೊಮ್ಮಾಯಿ

By Kannadaprabha News  |  First Published Sep 17, 2021, 12:07 PM IST
  •  ಎಲ್ಲರಿಗೂ ಆಹಾರ, ಆಶ್ರಯ, ಆರೋಗ್ಯ ಮತ್ತು ಅಕ್ಷರ ಜ್ಞಾನ ಒದಗಿಸುವ ಕಾಯಕವನ್ನು ಯಶಸ್ವಿಯಾಗಿ ಕೈಗೊಂಡ ದೂರದೃಷ್ಟಿಯ ನಾಯಕ ನರೇಂದ್ರ ಮೋದಿ.
  •  ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸುವ ಅವರ ಕ್ರಮಗಳು, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನಾಂದಿ ಹಾಡಿತು.
  •  ದೇಶದ ಉನ್ನತಿಗಾಗಿ ನಿರಂತರ ಶ್ರಮಿಸುವ, ಯುವಕರಲ್ಲಿ ದೇಶಾಭಿಮಾನ, ದೇಶಕ್ಕಾಗಿ ಮಿಡಿಯುವ ಮನಸ್ಸನ್ನು ಬೆಳೆಸುವ ಅವರ ಪರಿ ಅನನ್ಯವಾದುದು.

 ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನ ಇಂದು ಆಗಿದ್ದು ಅವರ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಶೇಷ ಲೇಖನ

Tap to resize

Latest Videos

2001ರಲ್ಲಿ ಅನಿವಾರ್ಯ ಸಂದರ್ಭದಲ್ಲಿ ಗುಜರಾತಿನಲ್ಲಿ ರಾಜಕೀಯ ಪಲ್ಲಟಗಳಾದಾಗ ಶಾಸಕರಾಗದೆ ನೇರವಾಗಿ ಮುಖ್ಯಮಂತ್ರಿಯಾದವರು ನರೇಂದ್ರ ಮೋದಿ. ಅವರ ಬಗ್ಗೆ, ಅವರ ಆಡಳಿತದ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ ನಂತರದ ಎರಡು ವರ್ಷಗಳಲ್ಲಿ ಎಲ್ಲರೂ ಹುಬ್ಬೇರಿಸುವಂತೆ ಆಡಳಿತ ನೀಡಿ, ಗುಜರಾತ್‌ ಮಾದರಿಯನ್ನು ಪ್ರಚುರಪಡಿಸಿದರು. ಅವರು ಮಾಡಿದ ವೈಚಾರಿಕ, ಸಾಮಾಜಿಕ ಮತ್ತು ಅಭಿವೃದ್ಧಿಯ ಕ್ರಾಂತಿ ಎಲ್ಲರೂ ಗುಜರಾತಿನತ್ತ ನೋಡುವಂತೆ ಮಾಡಿತು.

ಪಿಎಂ ಮೋದಿಗೆ ಸಿಕ್ಕ ಉಡುಗೊರೆ, ಸ್ಮರಣಿಕೆಗಳ ಇ-ಹರಾಜು: ನಮಾಮಿ ಗಂಗೆಗೆ ಹಣ ಬಳಕೆ!

ಮುಂದೆ 2014ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಅಭೂತಪೂರ್ವ ಗೆಲುವು ಸಾಧಿಸಿ ದೇಶದಲ್ಲಿ ಅಧಿಕಾರಕ್ಕೆ ಬಂತು. ಯಾವುದೇ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡದೆ ಬದ್ಧತೆ, ಪ್ರಾಮಾಣಿಕತೆ, ದಕ್ಷತೆಯಿಂದ ಕಾರ್ಯನಿರ್ವಹಿಸಿದ ಮೋದಿ ಅವರು ದೇಶದ ಪ್ರಗತಿಗೆ ಹೊಸ ಚೈತನ್ಯ ತುಂಬಿದರು. ಭಾರತದ ರಕ್ಷಣೆ ಹಾಗೂ ಆಂತರಿಕ ಭದ್ರತೆಗೆ ಅತಿ ಹೆಚ್ಚಿನ ಮಹತ್ವ ನೀಡಿದ ಅವರು ಜನರ ಮೇಲೆ ಪರಿಣಾಮ ಬೀರುವ ಸಣ್ಣ ವಿಷಯಗಳ ಕುರಿತೂ ಗಮನ ಹರಿಸಿದರು.

ಬಡವರು, ದುರ್ಬಲ ವರ್ಗದವರ ಬದುಕನ್ನು ಇನ್ನಷ್ಟುಸಹನೀಯಗೊಳಿಸಲು ಅವರು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. ಕಾರ್ಯಕ್ರಮಗಳನ್ನು ನಿಗದಿತ ಕಾಲಮಿತಿಯಲ್ಲಿ ಮಿಷನ್‌ ಮೋಡ್‌ನಲ್ಲಿ ಜಾರಿಗೊಳಿಸಿದರು. ಆ ಮೂಲಕ, ಜನರ ಬದುಕಿನಲ್ಲಿ ಸ್ಪಷ್ಟಬದಲಾವಣೆ ತರುವ ಅವರ ಸಂಕಲ್ಪಶಕ್ತಿ ಅಪೂರ್ವವಾದುದು ಎಂಬುದನ್ನು ನಿರೂಪಿಸಿದರು. ಸ್ವಚ್ಛ ಭಾರತ, ಗ್ರಾಮೀಣ ವಿದ್ಯುದೀಕರಣ, ಕೌಶಲ್ಯಾಭಿವೃದ್ಧಿ, ಉಜ್ವಲಾ ಯೋಜನೆ, ಜಲಜೀವನ ಮಿಷನ್‌ ಮೊದಲಾದ ಕಾರ್ಯಕ್ರಮಗಳು ಜನರ ಸುಗಮ ಜೀವನಕ್ಕೆ ಕೊಡುಗೆ ನೀಡಿವೆ. ಜನಧನ ಯೋಜನೆ, ಕಿಸಾನ್‌ ಸಮ್ಮಾನ್‌ ಯೋಜನೆ, ಆಯುಷ್ಮಾನ್‌ ಭಾರತ್‌, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ಬಡವರ ಬದುಕಿಗೆ ಹೊಸ ಚೈತನ್ಯ ನೀಡಿದೆ. ಒನ್‌ ನೇಷನ್‌-ಒನ್‌ ರೇಷನ್‌ ಕಾರ್ಡ್‌ ಕಾರ್ಯಕ್ರಮದಡಿ ಬಡವರು ಉದ್ಯೋಗ ನಿಮಿತ್ತ ದೇಶದ ಯಾವ ಮೂಲೆಗೆ ತೆರಳಿದರೂ, ಅವರಿಗೆ ಆಹಾರ ಭದ್ರತೆ ಒದಗಿಸಲಾಗುತ್ತಿದೆ.

ಸೆ.26ರ ಮನ್‌ ಕಿ ಬಾತ್‌ಗೆ ನಿಮ್ಮ ಸಲಹೆ, ಸೂಚನೆ ಆಹ್ವಾನಿಸಿದ ಪಿಎಂ ಮೋದಿ!

ಎಲ್ಲರಿಗೂ ಆಹಾರ, ಆಶ್ರಯ, ಆರೋಗ್ಯ ಮತ್ತು ಅಕ್ಷರ ಜ್ಞಾನ ಒದಗಿಸುವ ಕಾಯಕವನ್ನು ಯಶಸ್ವಿಯಾಗಿ ಕೈಗೊಂಡ ದೂರದೃಷ್ಟಿಯ ನಾಯಕ ನರೇಂದ್ರ ಮೋದಿ. ಸಂಘಟನೆಗಾಗಿ ದುಡಿದು, ತಳಹಂತದಿಂದ ದೇಶದ ಪ್ರಧಾನಿಯಾಗಿ ಬೆಳೆದ ಮೋದಿ ಅವರ ಸಾಧನೆ ಇತರರಿಗೆ ಸ್ಫೂರ್ತಿದಾಯಕ. ಸ್ಪಷ್ಟವಿಚಾರ, ದಿಟ್ಟನಿಲುವು ಹಾಗೂ ದಕ್ಷ ಆಡಳಿತ ಅವರ ಹೆಗ್ಗುರುತು. ಸದಾ ಜನಸಂಪರ್ಕ ಹೊಂದಲು ಅವರು ಕಂಡುಕೊಂಡ ಹೊಸ ಮಾರ್ಗ ‘ಮೈ ಗವ್‌’  ಎಂಬ ಡಿಜಿಟಲ್‌ ವೇದಿಕೆ. ಸರ್ಕಾರದ ಕಾರ್ಯಕ್ರಮ ರೂಪಿಸುವಲ್ಲಿ ಜನರ ಅಭಿಪ್ರಾಯಗಳು, ವಸ್ತುಸ್ಥಿತಿಯನ್ನು ಪರಿಗಣಿಸಲು, ಜನರ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು ಈ ವೇದಿಕೆ ಪರಿಣಾಮಕಾರಿ ಪಾತ್ರ ವಹಿಸಿದೆ.

ದೇಶದ ಬಾಹ್ಯಾಕಾಶ ಯೋಜನೆಗಳು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳ ಸಾಧಕರಿಗೆ ಮೋದಿ ಅವರು ನೀಡಿದ ಉತ್ತೇಜನ ಅನನ್ಯವಾದುದು. ಭಾರತದ ಚಂದ್ರಯಾನ, ಮಂಗಳ ಯಾನ ಮೊದಲಾದ ಕಾರ್ಯಕ್ರಮಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸ್ಥಾನ ಇನ್ನಷ್ಟುಉನ್ನತಿಗೇರುವಂತೆ ಮಾಡಿದವು.

ಅದೇ ರೀತಿ ಟೋಕಿಯೋ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಹಿಂದೆಂದಿಗಿಂತಲೂ ಉತ್ತಮ ಸಾಧನೆಯನ್ನು ಭಾರತದ ಕ್ರೀಡಾಪಟುಗಳು ತೋರಿದ್ದಾರೆ. ಮೋದಿ ಅವರು ಈ ಕ್ರೀಡಾಪಟುಗಳನ್ನು ಹುರಿದುಂಬಿಸಿದ ರೀತಿ, ಸೋತವರ ಪ್ರಯತ್ನವನ್ನು ಗುರುತಿಸಿ, ಬೆನ್ನು ತಟ್ಟುವ ಪರಿ ದೇಶದ ಯುವಜನರು ಕ್ರೀಡೆಯತ್ತ ಹೆಚ್ಚಿನ ಒಲವು ತೋರಲು ಪ್ರೇರಣೆ ನೀಡುತ್ತಿದೆ.

ಅತ್ಯಂತ ಸೂಕ್ಷ್ಮಮತಿಗಳಾದ ಅವರು ಅಹಮದಾಬಾದ್‌ನಲ್ಲಿ ಕಲುಷಿತಗೊಂಡಿದ್ದ ಸಬರಮತಿ ನದಿಯನ್ನು ಸ್ವಚ್ಛಗೊಳಿಸಿ, ಅಹಮದಾಬಾದ್‌ ನಗರವನ್ನು ಸ್ವಚ್ಛ ನಗರವಾಗಿ ಅಭಿವೃದ್ಧಿಪಡಿಸಿದರು. ಅದೇ ರೀತಿ ಮರಳುಗಾಡಿನ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದರು. ಎಲ್ಲ ರಾಜ್ಯಗಳು ವಿದ್ಯುತ್‌ ಕೊರತೆಯಿಂದ ಕಂಗೆಟ್ಟಕಾಲದಲ್ಲಿ ಗುಜರಾತನ್ನು ಹೆಚ್ಚುವರಿ ವಿದ್ಯುತ್‌ ಉತ್ಪಾದಕ ರಾಜ್ಯವಾಗಿ ರೂಪಿಸಿದ್ದು ಅವರ ಹೆಗ್ಗಳಿಕೆ. ಆ ಮೂಲಕ ಗುಜರಾತಿನ ಔದ್ಯೋಗೀಕರಣ, ಆರ್ಥಿಕ ಬೆಳವಣಿಗೆ, ಕೃಷಿ ವಲಯದ ಅಭಿವೃದ್ಧಿಗೆ ಒತ್ತು ನೀಡಿದರು. ವನವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯ ಒದಸುವ ಯೋಜನೆಗಳನ್ನು ಜಾರಿಗೆ ತಂದರು. ಪ್ರವಾಸೋದ್ಯಮ ಕ್ಷೇತ್ರದಲ್ಲೂ ಗುಜರಾತನ್ನು ಮುಂಚೂಣಿಗೆ ತಂದವರು ಮೋದಿ.

ದೇಶದಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾದಾಗ ಲಾಕ್‌ಡೌನ್‌ ಘೋಷಿಸಿ, ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರೋಗ್ಯ ವ್ಯವಸ್ಥೆ ಸುಧಾರಿಸಲು ಕೈಗೊಂಡ ಕ್ರಮಗಳು ಅನನ್ಯವಾದುವು. ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸುವ ಅವರ ಕ್ರಮಗಳು, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ನಾಂದಿ ಹಾಡಿತು. ಸ್ವದೇಶಿ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇಂದು ವಿಶ್ವದಲ್ಲಿ ಅತಿ ಹೆಚ್ಚು ಲಸಿಕೆ ಪ್ರಮಾಣ ಹೊಂದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಮೋದಿ ಅವರ ದೂರದರ್ಶಿತ್ವ ಹಾಗೂ ಕಾರ್ಯತತ್ಪರತೆಗೆ ಕೈಗನ್ನಡಿಯಾಗಿದೆ.

ಕೋವಿಡ್‌ ಸಂಕಷ್ಟದ ಕಾಲದಲ್ಲೂ ಆರ್ಥಿಕತೆ ಹಳಿ ತಪ್ಪದಂತೆ ಪ್ರಧಾನಿ ಮೋದಿ ಅವರು ಎಚ್ಚರ ವಹಿಸಿದರು. ಅದರ ಪರಿಣಾಮವಾಗಿ ಇಂದು ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆಯೂ ಭಾರತ ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಮೇಕ್‌ ಇನ್‌ ಇಂಡಿಯಾ, ಡಿಜಿಟಲ್ ಆರ್ಥಿಕತೆ, ರಸ್ತೆ, ವಿಮಾನ ನಿಲ್ದಾಣಗಳ ಜೊತೆಗೆ ಮೊದಲ ಬಾರಿಗೆ ಜಲಸಾರಿಗೆ ಯೋಜನೆಗಳನ್ನೂ ರೂಪಿಸುವ ಮೂಲಕ ದೇಶದ ಪ್ರಗತಿಗೆ ಹೊಸ ಸ್ವರೂಪ ಒದಗಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತ ವಿಶ್ವಗುರುವಿನ ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಮೋದಿ ಅವರ ವಿದೇಶಾಂಗ ನೀತಿ ಪರಿಣಾಮಕಾರಿಯಾಗಿದೆ. ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ಭಾರತಕ್ಕೆ ಸಿಗಲು ಅವರ ಕಾರ್ಯತಂತ್ರಗಳೇ ಕಾರಣ.

ಮೋದಿ ಕಾರ್ಯಶೈಲಿ, ಬದ್ಧತೆ ಹಾಗೂ ದಕ್ಷತೆ ಅನುಕರಣೀಯ. ದೇಶದ ಉನ್ನತಿಗಾಗಿ ನಿರಂತರ ಶ್ರಮಿಸುವ, ಯುವಕರಲ್ಲಿ ದೇಶಾಭಿಮಾನ, ದೇಶಕ್ಕಾಗಿ ಮಿಡಿಯುವ ಮನಸ್ಸನ್ನು ಬೆಳೆಸುವ ಅವರ ಪರಿ ಅನನ್ಯವಾದುದು. ಮೋದಿ ಅವರ ಜನ್ಮದಿನವಾದ ಇಂದು ಅವರ ಸಮರ್ಪಣಾ ಭಾವ, ಕಾರ್ಯದಕ್ಷತೆ, ಬದ್ಧತೆಯನ್ನು ನಮ್ಮ ಜೀವನದಲ್ಲಿ ಅಳವಡಿಸುವ ಸಂಕಲ್ಪ ಮಾಡುವ ದಿನ ಇದು ಎಂಬುದು ನನ್ನ ನಂಬಿಕೆ. ಪ್ರಧಾನಿ ಮೋದಿ ಅವರಿಗೆ ಮನದಾಳದಿಂದ ಜನ್ಮದಿನದ ಶುಭಾಶಯಗಳು.

click me!