ಲೋಕಸಭೆ ಚುನಾವಣೆಗೆ ರಾಜ್ಯ ಆಯೋಗದಿಂದ ಸಿದ್ಧತೆ

By Kannadaprabha NewsFirst Published Jan 14, 2024, 7:47 AM IST
Highlights

2019 ರಲ್ಲಿ ಲೋಕಸಭೆ ಚುನಾವಣೆಯನ್ನು ಮಾ.10 ರಂದು ಘೋಷಿಸಲಾಗಿದ್ದು, ಏ.11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಮೇ 23 ರಂದು ಎಣಿಕೆ ಮಾಡಲಾಯಿತು. ಅಂತೆಯೇ ಈ ಬಾರಿಯೂ ಮಾರ್ಚ್‌ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದ್ದು, ಏಪ್ರಿಲ್‌-ಮೇ ತಿಂಗಳ ಅವಧಿಯಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. 

ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು(ಜ.14):  ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ಚುನಾವಣೆ ಕದನಕ್ಕೆ ತೆರೆಮರೆಯಲ್ಲಿ ತಾಲೀಮು ಆರಂಭಿಸಿರುವುದರ ಜತೆಗೆ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗವು ಸಹ ಸಿದ್ಧತೆಯಲ್ಲಿ ಕಾರ್ಯೋನ್ಮುಖವಾಗಿದೆ.

Latest Videos

ಕೇಂದ್ರ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಯು ಲೋಕಸಭಾ ಚುನಾವಣೆಗೆ ಮಾನವ ಸಂಪನ್ಮೂಲ ನಿಯೋಜನೆ ಸಂಬಂಧ ಕಾರ್ಯಪ್ರವೃತ್ತವಾಗಿದ್ದು, ಈ ಬಾರಿಯ ಲೋಕಸಭೆ ಚುನಾವಣೆಗೆ ಕಾರ್ಯ ನಿರ್ವಹಿಸಲು ಮೂರೂವರೆ ಲಕ್ಷಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲು ಕ್ರಮ ಕೈಗೊಂಡಿದೆ. ಈ ಪೈಕಿ 15 ಸಾವಿರಕ್ಕೂ ಹೆಚ್ಚು ಮಂದಿ ವಿವಿಧ ಹಂತದ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಹೆಚ್ಚುವರಿಯಾಗಿ 500 ರಿಂದ ಒಂದು ಸಾವಿರ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಿಕೊಳ್ಳಲಾಗುತ್ತದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ 2024: ಪ್ರಿಯಾಂಕಾ ಕೊಪ್ಪಳದಿಂದ ಸ್ಪರ್ಧೆ?

ಚುನಾವಣೆ ಘೋಷಣೆಗೂ ಮೂರು ತಿಂಗಳ ಮುನ್ನ ಚುನಾವಣಾ ಆಯೋಗವು ಸಿದ್ಧತೆ ಕಾರ್ಯ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಕಾರ್ಯಗಳು ಪ್ರಾರಂಭವಾಗಿವೆ. ಮಾನವ ಸಂಪನ್ಮೂಲ ಕ್ರೋಢೀಕರಣ ಪ್ರಮುಖ ಘಟ್ಟವಾಗಿರುವ ಕಾರಣ ಆಯೋಗವು ಸಿಬ್ಬಂದಿಯ ನಿಯೋಜನೆಗೆ ಆದ್ಯತೆಯ ಮೇರೆಗೆ ಮುಂದಾಗಿದೆ. ಫೆಬ್ರವರಿ ತಿಂಗಳ ವೇಳೆಗೆ ಸಿಬ್ಬಂದಿ ನಿಯೋಜನೆ ಕಾರ್ಯ ಪೂರ್ಣಗೊಳ್ಳಲಿದೆ. ಚುನಾವಣೆ ಕಾರ್ಯಕ್ಕೆ ಪೊಲೀಸರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಯಾಗಲಿದ್ದಾರೆ. ಇನ್ನುಳಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ.

2019 ರಲ್ಲಿ ಲೋಕಸಭೆ ಚುನಾವಣೆಯನ್ನು ಮಾ.10 ರಂದು ಘೋಷಿಸಲಾಗಿದ್ದು, ಏ.11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಮೇ 23 ರಂದು ಎಣಿಕೆ ಮಾಡಲಾಯಿತು. ಅಂತೆಯೇ ಈ ಬಾರಿಯೂ ಮಾರ್ಚ್‌ ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವ ನಿರೀಕ್ಷೆ ಇದ್ದು, ಏಪ್ರಿಲ್‌-ಮೇ ತಿಂಗಳ ಅವಧಿಯಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ. 

ರಾಜ್ಯದಲ್ಲಿ ಈ ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದು, ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳನ್ನೇ ಬಹುತೇಕ ನಿಯೋಜನೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚುವರಿಯಾಗಿ ಇತರೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ತರಬೇತಿ ನೀಡಲಾಗುತ್ತದೆ. ಈ ಬಾರಿ ಮೂರೂವರೆ ಲಕ್ಷಕ್ಕೂ ಅಧಿಕ ಸಿಬ್ಬಂದಿ ನಿಯೋಜನೆಯಾಗಲಿದ್ದಾರೆ. ಮತಗಟ್ಟೆ ಅಧಿಕಾರಿಗಳು, ತಾಲೂಕು ಮಟ್ಟದ ಚುನಾವಣಾಧಿಕಾರಿಗಳು, ಜಿಲ್ಲಾಮಟ್ಟದ ಚುನಾವಣಾಧಿಕಾರಿಗಳು ಸೇರಿದಂತೆ ವಿವಿಧ ಹಂತದಲ್ಲಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಸಿಎಂ, ಡಿಸಿಎಂ ಲೋಕಸಭೆಗೆ ಸ್ಪರ್ಧಿಸಿ ಮಾದರಿಯಾಗಲಿ: ಸಿ.ಟಿ.ರವಿ

ದೆಹಲಿಯಲ್ಲಿ ಸಭೆ:

ಈ ನಡುವೆ, ಕೇಂದ್ರ ಚುನಾವಣಾ ಆಯೋಗವು ಎರಡು ದಿನಗಳ ಸಭೆಯನ್ನು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಜತೆ ಸಭೆ ನಡೆಸುತ್ತಿದೆ. ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಸಭೆ ನಡೆಸುತ್ತಿದ್ದು, ರಾಜ್ಯಗಳಲ್ಲಿನ ಸಿದ್ಧತೆ ಕುರಿತು ಮಾಹಿತಿ ಕ್ರೋಢೀಕರಿಸುವ ಕಾರ್ಯ ಪ್ರಾರಂಭಿಸಿದೆ. ಅಲ್ಲದೇ, ಕೇಂದ್ರ ಚುನಾವಣಾ ಆಯೋಗವು ರಾಜ್ಯಗಳಿಗೆ ಭೇಟಿ ಲೋಕಸಭೆ ಚುನಾವಣೆಗೆ ಸಿದ್ಧತೆ ಕಾರ್ಯವನ್ನು ಪರಿಶೀಲನೆ ಕಾರ್ಯ ಆರಂಭಿಸಿದೆ. ಶೀಘ್ರದಲ್ಲಿಯೇ ರಾಜ್ಯಕ್ಕೂ ಕೇಂದ್ರದ ತಂಡ ಆಗಮಿಸಲಿದೆ ಎನ್ನಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಸೇರಿದಂತೆ ಹಿರಿಯ ಚುನಾವಣಾಧಿಕಾರಿಗಳು ಸಹ ದೆಹಲಿಗೆ ಪ್ರಯಾಣಿಸಿದ್ದು, ಕೇಂದ್ರ ಚುನಾವಣಾ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ, ಚುನಾವಣೆ ಘೋಷಣೆಗೂ ಮುನ್ನ ಮುಖ್ಯ ಚುನಾವಣಾಧಿಕಾರಿ ಕಚೇರಿ ವತಿಯಿಂದ ಇವಿಎಂ ಜಾಗೃತಿ ಮೂಡಿಸುವ ಕಾರ್ಯ ಮಾಡುವ ಸಾಧ್ಯತೆ ಇದೆ. ರಾಜ್ಯವ್ಯಾಪಿ ಜಾಗೃತಿ ಅಭಿಯಾನ ನಡೆಯಲಿದೆ. ಇದರಲ್ಲಿ ಮತದಾರರು, ರಾಜಕೀಯಪಕ್ಷಗಳು, ಮಾಧ್ಯಮದವರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ. ಈ ವೇಳೆ ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

click me!