ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಎಂದ್ರೆ ಪೋಷಕರು ಮೂಗು ಮುರಿಯುವುದೇ ಜಾಸ್ತಿ. ಸ್ಥಿತಿ ಹೀಗಿರುವಾಗ ಶಾಲೆಯ ಕಟ್ಟಡವೇ ಕುಸಿಯುವ ಭೀತಿ ಇದ್ದರೆ ಯಾವ ಪೋಷಕರು ತಾನೆ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸುತ್ತಾರೆ ಹೇಳಿ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜ.12): ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಎಂದ್ರೆ ಪೋಷಕರು ಮೂಗು ಮುರಿಯುವುದೇ ಜಾಸ್ತಿ. ಸ್ಥಿತಿ ಹೀಗಿರುವಾಗ ಶಾಲೆಯ ಕಟ್ಟಡವೇ ಕುಸಿಯುವ ಭೀತಿ ಇದ್ದರೆ ಯಾವ ಪೋಷಕರು ತಾನೆ ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸುತ್ತಾರೆ ಹೇಳಿ. ಈಗಾಗಲೇ ರಾಜ್ಯದ ವಿವಿಧೆಡೆ ಶಾಲಾ ಕಟ್ಟಡಗಳು ಕುಸಿದು ಬಿದ್ದಿರುವ ಘಟನೆಗಳು ನಮ್ಮ ಕಣ್ಣಮುಂದಿವೆ. ಅಂತಹದ್ದೇ ಸ್ಥಿತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕಿರಂಗದೂರು ಸರ್ಕಾರಿ ಶಾಲೆಗೆ ಬಂದೊದಗಿದೆ. ಹೌದು 1924 ರಲ್ಲಿ ಬ್ರಿಟೀಷ್ ಸರ್ಕಾರ ನಿರ್ಮಾಣ ಮಾಡಿದ್ದ ಶಾಲಾ ಕಟ್ಟಡ ಶತಮಾನದ ಹೊಸ್ತಿಲಿನಲ್ಲಿ ನಿಂತಿದೆ. ಬರೋಬ್ಬರಿ ನೂರು ವರ್ಷಗಳನ್ನು ಪೂರೈಸುತ್ತಿರುವ ಈ ಕಟ್ಟಡ ಇಂದು ಬಹುತೇಕ ಶಿಥಿಲಗೊಂಡಿದೆ.
undefined
ಶಾಲಾ ಕಟ್ಟಡದಲ್ಲಿ ಒಟ್ಟು 8 ಕೊಠಡಿಗಳಿದ್ದು, ಅಷ್ಟು ಕೊಠಡಿಗಳು ಶಿಥಿಲಗೊಂಡಿವೆ. ಅದರಲ್ಲೂ ಎರಡು ಕೊಠಡಿಗಳ ಸ್ಥಿತಿಯಂತು ಯಾವಾಗ ಕುಸಿದು ಬೀಳುವವೋ ಎನ್ನುವ ಆತಂಕದಲ್ಲೇ ವಿದ್ಯಾರ್ಥಿ, ಶಿಕ್ಷಕರು ಶಾಲೆಯಲ್ಲಿ ಇರಬೇಕಾಗಿದೆ. ತರಗತಿಗಳ ಕೊಠಡಿಗಳ ಕಿಟಕಿ ಬಾಗಿಲುಗಳು ಗೆದ್ದಲು ತಿಂದು ಮುರಿದು ಬೀಳುತ್ತಿವೆ. ಅಷ್ಟೇ ಏಕೆ ಛಾವಣಿಯ ತೊಲೆ ಹಾಗೂ ಜತ್ತಗಿಗಳು ಗೆದ್ದಲು ಹಿಡಿದು ಮುರಿದು ಬೀಳುವ ಸ್ಥಿತಿ ತಲುಪಿದೆ. ಹೀಗಾಗಿ ಇಡೀ ಕಟ್ಟಡದ ಮೇಲ್ಛಾವಣಿಯೇ ಬೀಳುವ ಹಂತ ತಲುಪಿವೆ. ಹೀಗಾಗಿಯೇ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಭಯಪಡುವಂತೆ ಆಗಿದೆ. ಶಾಲಾ ಶಿಕ್ಷಕರು ಮರದ ಬಡಿಗೆಗಳನ್ನು ಹೆಂಚುಗಳಿಗೆ ಆಸರೆಯಾಗಿ ನಿಲ್ಲಿಸಿ ಅವು ಬೀಳದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ಸಂಸದ ಪ್ರಜ್ವಲ್‌ರ ವಿಡಿಯೋ ಇದೆ, ಸಮಯ ಬಂದಾಗ ಬಿಡುಗಡೆ: ಬಿಜೆಪಿ ವಕ್ತಾರ ದೇವರಾಜೇಗೌಡ
ಶಾಲಾ ಕಟ್ಟಡ ಹೀಗೆ ಬಹುತೇಕ ಶಿಥಿಲಗೊಳ್ಳುವುದಕ್ಕೂ ಮೊದಲು ಈ ಶಾಲೆಯಲ್ಲಿ ಕಳೆದ ಕೆಲವು ವರ್ಷಗಳ ಹಿಂದಿನವರೆಗೂ 450 ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಆದರೀಗ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳ ಸಂಖ್ಯೆ ಕೇವಲ 42 ಕ್ಕೆ ಕುಸಿದಿದೆ. ಕಿರಂಗದೂರು ಗ್ರಾಮದಲ್ಲಿ ಮುಂಗಾರಿನ ಸಂದರ್ಭ ಅತೀ ಹೆಚ್ಚು ಗಾಳಿ, ಮಳೆ ಸುರಿಯುತ್ತದೆ. ಕಿಟಕಿ, ಬಾಗಿಲು ಗೆದ್ದಲು ತಿಂದು ಅವುಗಳು ಮುರಿದು ಹೋಗಿವೆ. ಅನಿವಾರ್ಯವಾಗಿ ವಿದ್ಯಾರ್ಥಿ, ಶಿಕ್ಷಕರೇ ಕಿಟಕಿಗಳಿಗೆ ಪ್ಲಾಸ್ಟಿಕ್ ಕಟ್ಟಿ ಗಾಳಿಯಿಂದ ರಕ್ಷಣೆ ಪಡೆಯುತ್ತಿದ್ದಾರೆ. ಆದರೆ ಅವುಗಳು ಇಲ್ಲಿ ಬೀಸುವ ತೀವ್ರ ಗಾಳಿಗೆ ಹರಿದು ಚಿಂದಿಯಾಗಿವೆ.
ಪಾಠೋಪಕರಣಗಳನ್ನು ಶಿಥಿಲಾವಸ್ಥೆಗೊಂಡಿರುವ ಕೊಠಡಿಯಲ್ಲೇ ಇರಿಸಲಾಗಿದೆ. ಇಷ್ಟೆಲ್ಲಾ ಶಿಥಿಲಗೊಂಡು ಅಪಾಯದಲ್ಲಿರುವ ಕೊಠಡಿಯಲ್ಲೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಬಿಸಿಯೂಟದ ಅಡುಗೆ ಮನೆಯ ಕೊಠಡಿ ಸಮೀಪದ ಹೋಗಬೇಕಾದರೆ ಕಟ್ಟಡ ಬಹುತೇಕ ಬಿರುಕುಬಿಟ್ಟಿದೆ. ಒಂದೆಡೆಯಿಂದ ಕುಸಿದು ಬೀಳುತ್ತಿದೆ. ಗೋಡೆಗಳು ಬಿರುಕುಬಿಟ್ಟಿದ್ದು ಯಾವಾಗ ಬೇಕಾದರೂ ಕುಸಿದು ಬೀಳುವ ಆತಂಕವಿದೆ. ಇಷ್ಟೆಲ್ಲಾ ಸಮಸ್ಯೆಗಳಿರುವುದರಿಂದ ಯಾವುದೇ ಪೋಷಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಶಾಲೆಯಲ್ಲಿ ಓದಿದ ಎಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತಿಯಾಗಿದ್ದಾರೆ.
ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ಎಚ್.ಡಿ.ರೇವಣ್ಣ
ಆದರೆ ಇಂದು ಸೌಲಭ್ಯಗಳ ಕೊರತೆಯಿಂದ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಇಲಾಖೆ ಗಮನಹರಿಸುತ್ತಿಲ್ಲ. ಹೀಗಾದರೆ ಪೋಷಕರು ಏತಕ್ಕಾಗಿ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಾರೆ ಎಂದು ಗ್ರಾಮಸ್ಥರಾದ ಗೌತಮ್ ಹಾಗೂ ಪೊನ್ನಪ್ಪ ಅವರ ಆರೋಪ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅನುದಾನ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಆ ಕೆಲಸ ಆಗುತ್ತಿಲ್ಲ. ನಮ್ಮ ಪಂಚಾಯಿತಿಯಿಂದ ಶೇ 5 ರಷ್ಟು ಅನುದಾನವನ್ನು ಶಾಲೆಗೆ ಕೊಡುತ್ತಿದ್ದೇವೆ. ಹೆಚ್ಚಿನ ಅನುದಾನ ತಂದು ಶಾಲೆಯ ಅಭಿವೃದ್ಧಿಗೆ ಕ್ಷೇತ್ರದ ಶಾಸಕರಾದ ಮಂತರ್ ಗೌಡ ಅವರು ಗಮನಹರಿಸಲಿ ಎಂದು ಪಂಚಾಯಿತಿ ಅಧ್ಯಕ್ಷೆ ತಾರಾ ಸುಧೀರ್ ಒತ್ತಾಯಿಸಿದ್ದಾರೆ.