
- ಕೈಕೊಟ್ಟ ವಿದ್ಯುತ್ । ಮೊಬೈಲ್ ಟಾರ್ಚ್ ಬೆಳಕಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿದ ವೈದ್ಯರು
ಕಲಬುರಗಿ (ಜ.30): ಏನಕೇನ ಹಲವು ಸ್ವರೂಪದ ಅಪಸವ್ಯ ಹಾಗೂ ರಗಳೆಗಳಿಂದಲೇ ಸುದ್ದಿಗೆ ಗ್ರಾಸವಾಗುವ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ರಾತ್ರಿ ಏಕಾಏಕಿ ವಿದ್ಯುತ್ ಕೈ ಕೊಟ್ಟ ಪರಿಣಾಮ ವೈದ್ಯರು ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಕಾರ್ಯನಿರ್ವಹಿಸಿದ ಘಟನೆ ನಡೆದಿದೆ.
ಗುಲ್ಬರ್ಗ ಇನ್ಸ್ಟಿಟ್ಯೂಟ್‍ಆಫ್ ಮೆಡಿಕಲ್ ಸೈನ್ಸ್ (ಜಿಮ್ಸ್) ಆಸ್ಪತ್ರೆಯ ತಾಯಿ ಮಕ್ಕಳ ವಿಭಾಗದಲ್ಲಿ ವಿದ್ಯುತ್ ಕೈ ಕೊಟ್ಟಿದ್ದರಿಂದ ವಿಭಾಗದ ವೈದ್ಯರು ಹಾಗೂ ಸಿಬ್ಬಂದಿ ಕತ್ತಲಲ್ಲೇ ರಾತ್ರಿ ಪಾಳಿಯ ಚಟುವಟಿಕೆ ನಿರ್ವಹಿಸಬೇಕಾಯಿತು. ಈ ಮಧ್ಯೆ, ಸಾವಿರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜಿಮ್ಸ್ ಆಸ್ಪತ್ರೆಯಲ್ಲಿ ಬ್ಯಾಟರಿ ಆಧಾರಿತ ತಾತ್ಕಾಲಿಕ ವಿದ್ಯುತ್ ಪೂರೈಕೆ ವ್ಯವಸ್ಥೆ (ಇನ್ವರ್ಟರ್) ಬಳಸಿಕೊಳ್ಳುವವರೆಗೆ ವೈದ್ಯರು ಹಾಗೂ ಸಿಬ್ಬಂದಿ ತಮ್ಮ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ: Watch | ಶಸ್ತ್ರ ಚಿಕಿತ್ಸೆ ವೇಳೆ ಕೈಕೊಟ್ಟ ವಿದ್ಯುತ್; ಆಪರೇಷನ್ ಅರ್ಧಕ್ಕೆ ನಿಲ್ಲಿಸಿದ ವೈದ್ಯರು!
ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವೈದ್ಯರು ತಮ್ಮ ಸಹಾಯಕರ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಫ್ಯಾನ್‌ಗಳು ಕಾರ್ಯನಿರ್ವಹಿಸದ ಕಾರಣ ಸೊಳ್ಳೆಗಳ ಕಾಟದಿಂದಾಗಿ ನವಜಾತ ಶಿಶುಗಳು ಹಾಗೂ ಬಾಣಂತಿಯರು ಹೆಚ್ಚು ತೊಂದರೆ ಅನುಭವಿಸಿದರು. ಮತ್ತೊಂದೆಡೆ, ಗರ್ಭಿಣಿ ಮತ್ತು ಬಾಣಂತಿಯರ ಸಂಬಂಧಿಕರು ತಮ್ಮ ಮೊಬೈಲ್ ಟಾರ್ಚ್ ಬೆಳಕನ್ನು ಒದಗಿಸಿದ್ದರಿಂದ ಕರ್ತವ್ಯನಿರತ ವೈದ್ಯರು ಹಾಗೂ ನರ್ಸ್‌ಗಳು ಅರೆಬೆಳಕಿನಲ್ಲಿ ಪರದಾಡುತ್ತಲೇ ಕೆಲಸ ನಿರ್ವಹಿಸಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಜಿಮ್ಸ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಡಾ.ಶಿವಕುಮಾರ್, ಜಿಮ್ಸ್ ಆಸ್ಪತ್ರೆಯ ಜನರಲ್ ವಿಭಾಗದಲ್ಲಿ ಕಳೆದ ರಾತ್ರಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಿದ್ದು ನಿಜ, ಸಮಸ್ಯೆ ಸರಿಪಡಿಸಲಾಗಿದೆ. ಯಾವುದೇ ತೊಂದರೆ ಆಗದೆ ಎಲ್ಲವೂ ಸುಸೂತ್ರವಾಗಿ ನಡೆದಿದೆ.
ಇದನ್ನೂ ಓದಿ: ಕಲಬುರಗಿ ಪಾಲಿಕೆ ಆಯುಕ್ತರ ನಕಲಿ ಸಹಿ ಮಾಡಿ ವಂಚನೆ: ಕಮಿಷನರ್ ಪಿಎ, ಮಾಜಿ ಕಾರ್ಪೋರೇಟರ್ ಪುತ್ರ ಸೇರಿ ಐವರ ಬಂಧನ
ರಾಜ್ಯದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲರ ತವರು ಜಿಲ್ಲೆ ಕಲಬುರಗಿಯಲ್ಲಿರುವ ಜಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ ಸೇರಿದಂತೆ ಹಲವು ರಗಳೆಗಳು ಘಟಿಸಿ ಸಾರ್ವಜನಿಕರು ಭಯಭೀತರಾಗುವಂತಾಗಿದೆ. ಸಚಿವರು ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ