ಶಂಕಿತ ಉಗ್ರರ ಮನೆ, ತುಂಗಾ-ನೇತ್ರಾವತಿ ನದಿಗಳ ಬಳಿ ಸ್ಥಳ ಮಹಜರು
ಶಿವಮೊಗ್ಗ/ಮಂಗಳೂರು(ಸೆ.22): ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ಈಗಾಗಲೇ ಬಂಧಿಸಿರುವ ಶಿವಮೊಗ್ಗದ ಸಿದ್ದೇಶ್ವರ ನಗರದ ಸೈಯದ್ ಯಾಸಿನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಅವರನ್ನು ತೀವ್ರ ತನಿಖೆ ನಡೆಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮಹಮ್ಮದ್ ಶಾರೀಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಬಂಧಿತ ಆರೋಪಿತರು ಒಂದು ಗುಪ್ತ ಜಾಲವನ್ನು ಸೃಷ್ಟಿಮಾಡಿಕೊಂಡು ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದರು ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.
ಸ್ಥಳ ಮಹಜರು:
ಸಿದ್ದೇಶ್ವರ ನಗರದಲ್ಲಿರುವ ಸಯ್ಯದ್ ಯಾಸಿನ್‌ನನ್ನು ಆತನ ಮನೆಗೆ ಕರೆತಂದು ಪೊಲೀಸರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿದರು. ಅಲ್ಲದೇ ಯಾಸಿನ್ ಮನೆ ಸಮೀಪ ಗುರುಪುರದ ತುಂಗಾ ನದಿ ದಂಡೆ ಬಳಿ ಕರೆದೊಯ್ದು ಮಹಜರು ನಡೆಸಿದ್ದಾರೆ. ಯಾಸಿನ್, ಶಾರೀಕ್ ಹಾಗೂ ಮಾಜ್ ಬಾಂಬುಗಳನ್ನು ತಯಾರಿಸಿ ಪ್ರಯೋಗಕ್ಕಾಗಿ ತುಂಗಾ ನದಿಗೆ ಎಸೆಯುತ್ತಿದ್ದರು ಎಂದು ತನಿಖೆ ವೇಳೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ಸ್ಥಳ ಮಹಜರು ನಡೆಸಿದರು. ಅಲ್ಲದೇ ಬಂಧಿತ ಯಾಸಿನ್ ಮತ್ತು ಮಾಜ್ ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಾಜ್ ಮೊಬೈಲ್‌ನಲ್ಲಿ ಸ್ಪೋಟಕ ಮಾಹಿತಿ ದೊರೆತಿದೆ ಎಂದು ತಿಳಿದು ಬಂದಿದೆ.
Suspected Terrorists: ತುಂಗಾ, ನೇತ್ರಾವತಿ ತೀರದಲ್ಲಿ ಶಂಕಿತ ಉಗ್ರರ ಬಾಂಬ್ ಟೆಸ್ಟ್!
ಮಂಗಳೂರಿಗೆ ಕರೆದೊಯ್ದು ತಪಾಸಣೆ:
ಮಂಗಳವಾರ ಶಂಕಿತ ಉಗ್ರ ಮಾಜ್‌ನಿಗೆ ಮಂಗಳವಾರ ವೈದ್ಯಕೀಯ ಪರೀಕ್ಷೆ ನಂತರ ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರ ನಾಯ್ಕ… ನೇತೃತ್ವದ ತಂಡ ಮಾಜ್‌ನನ್ನು ಹೆಚ್ಚಿನ ತನಿಖೆಗಾಗಿ ಮಂಗಳೂರಿಗೆ ಕರೆದೊಯ್ದು ತಪಾಸಣೆ ನಡೆಸಿದರು. ಮಾಜ್ ತೀರ್ಥಹಳ್ಳಿ ಮೂಲದವನಾಗಿದ್ದರೂ ಆತ ಮಂಗಳೂರಿನಲ್ಲಿ ವಾಸವಿದ್ದ. ಈ ಕಾರಣಕ್ಕೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಮಾಜ್‌ನನ್ನು ಮಂಗಳೂರಿಗೆ ಕರೆದೊಯ್ದರು.
ಯಾಸಿನ್ ಮೊಬೈಲ್, ಪರ್ಸ್ ಪತ್ತೆ
ಬುಧವಾರ ಶಿವಮೊಗ್ಗ ಸಮೀಪದ ಅಬ್ಬಲಗೆರೆ ತುಂಗಾ ಮೇಲ್ದಂಡೆ ನಾಲೆಯ ಬಳಿ ಮಹಜರು ವೇಳೆ ಯಾಸಿನ್‌ನ ಮೊಬೈಲ್ ಮತ್ತು ಪರ್ಸ್ ಪತ್ತೆಯಾಗಿದೆ. ಈ ಪರ್ಸ್‌ನಲ್ಲಿ ಬ್ಯಾಂಕ್ ಎಟಿಎಂ ಕಾರ್ಡ್, ಓಟರ್ ಐಡಿ ಕಾರ್ಡ್ ಮೊದಲಾದ ದಾಖಲೆಗಳಿದ್ದವು. ಇಲ್ಲಿ ಅವರು ಮೊಬೈಲ್ ಮತ್ತು ಪರ್ಸ್‌ಗಳನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ.
ಮೊಬೈಲ್‌ನ ಡಿಲೀಟ್ ವೀಡಿಯೋ ಕೆದಕಿದಾಗ ಉಗ್ರ ನಂಟು ಬೆಳಕಿಗೆ!
ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಜಬೀವುಲ್ಲಾನನ್ನು ಜೈಲಿಗೆ ಕಳುಹಿಸಿ ಪೊಲೀಸರು ಅರಾಮಾಗಿ ಇರಬಹುದಿತ್ತು. ಆದರೆ ಪೊಲೀಸರು ಪ್ರೇಮ್‌ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ಆಳಕ್ಕೆ ಇಳಿದು ಜಬೀವುಲ್ಲಾನ ಮೊಬೈಲ್‌ನಲ್ಲಿ ಡಿಲೀಟ್ ಆದ ವಿಡಿಯೋಗಳನ್ನು ಮತ್ತೆ ರಿಕವರಿ ಮಾಡಿ ತನಿಖೆ ಚುರುಕುಗೊಳಿದಾಗ ಉಗ್ರ ನಂಟು ಬೆಳಕಿಗೆ ಬಂತು.
ಬೆಚ್ಚಿಬೀಳಿಸುವ ಸತ್ಯಗಳು ಬೆಳಕಿಗೆ ಬಂದಿವೆ. ಜಬೀವುಲ್ಲಾ ಯಾರು ಯಾರ ಜೊತೆ ಸಂಪರ್ಕದಲ್ಲಿದ್ದ, ಯಾವ ಸಂಘಟನೆಗಳಿಗೆ ಆತ ಪ್ರೇರಣೆಯಾಗಿದ್ದ ಎಂಬ ಸತ್ಯವನ್ನು ಯಾರಿಗೂ ಬಹಿರಂಗಪಡಿಸದೆ ಗೌಪ್ಯವಾಗಿ ತನಿಖೆ ಕೈಗೊಂಡ ಲಕ್ಷ್ಮೇ ಪ್ರಸಾದ್ ತಮ್ಮದೇ ತಂಡದೊಂದಿಗೆ ಕಾರ್ಯಚರಣೆಗೆ ಇಳಿದ್ದರು. ಈ ಮಧ್ಯೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ಬಿಸಿಯಲ್ಲೂ ತಾವೇ ತನಿಖೆಯ ಹೊಣೆಹೊತ್ತು ಅಧಿಕಾರಿ ಸಿಬ್ಬಂದಿಯನ್ನು ಮುನ್ನಡೆಸಿದರು. ಎಸ್ಪಿ ತಂಡದಲ್ಲಿದ್ದ ಎಎಸ್ಪಿ ಜಿತೇಂದ್ರ ಕುಮಾರ್, ಸಿಪಿಐ ಗುರುಪ್ರಸಾದ್, ಸಿಪಿಐ ದೀಪ ಅಭಯ್ ಪ್ರಕಾಶ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಎಸ್‌ಪಿ ಲಕ್ಷ್ಮೇ ಪ್ರಸಾದ್‌ಗೆ ಸಾಥ್ ನೀಡಿದ್ದರು. ಇದರ ಮುಂದುವರೆದ ಭಾಗವಾಗಿಯೇ ಉಗ್ರರ ಜಾಡು ಪತ್ತೆಯಾಗಿದೆ.
ಶಿವಮೊಗ್ಗಕ್ಕೆ ಎಫ್‌ಎಸ್‌ಎಲ್ ತಂಡ, ಎನ್‌ಐಎ ಸಹ ಆಗಮಿಸುವ ಸಾಧ್ಯತೆ
ಶಿವಮೊಗ್ಗಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‌ಎಸ್‌ಎಲ…) ಬುಧವಾರ ಅಧಿಕಾರಿಗಳು ಆಗಮಿಸಿದ್ದಾರೆ. ನಗರದ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಅಲ್ಲದೇ ರಾಷಿತ್ರೕಯ ತನಿಖಾ ಸಂಸ್ಥೆ ಕೂಡ ಶಿವಮೊಗ್ಗಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನಷ್ಟುಸಾಕ್ಷ್ಯ ಸಂಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಾಂಬ್ ನಿಷ್ಕಿ್ರಯ ದಳದ ಅಧಿಕಾರಿಗಳ ತಂಡ ಕೂಡ ಶಿವಮೊಗ್ಗಕ್ಕೆ ಭೇಟಿ ನೀಡಿ ತುಂಗಾ ನದಿ ಹಾಗೂ ಬಂಧಿತ ಆರೋಪಿಗಳ ಮನೆ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಐಸಿಸ್ ಲಿಂಕ್: ಮೂವರು ಶಂಕಿತ ಉಗ್ರರ ಬಂಧನ!
ಸಯ್ಯದ್ ಯಾಸೀನ್ ತಂದೆ ಅಯ್ಯೂಬ್ ಖಾನ್ ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೂರು ಜನ ಮಕ್ಕಳು. ಯಾಸೀನ್ ಹಿರಿಯವ. ಈತನಿಗೆ ಒಬ್ಬ ತಮ್ಮ ಹಾಗೂ ತಂಗಿ ಇದ್ದಾರೆ. ಯಾಸೀನ್ ಚೆನ್ನಾಗಿ ಓದುತ್ತಿದ್ದ ಕಾರಣ ಆತನನ್ನು ಎಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಲಾಗಿತ್ತು. ಈತ ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದು, ಕಳೆದ 15 ದಿನಗಳ ಹಿಂದೆ ಮನೆಯಿಂದ ಸ್ನೇಹಿತರ ಜೊತೆ ಟೂರ್‌ಗೆಂದು ಹೋಗಿದ್ದ ಎಂಬ ಮಾಹಿತಿಯನ್ನು ಯಾಸೀನ್ ಅಜ್ಜ ಶಾಮೀರ್ ಖಾನ್ ನೀಡಿದ್ದಾರೆ.
ಶಿವಮೊಗ್ಗ ಸುತ್ತಮುತ್ತ ಭಾಗದಲ್ಲಿ ತಪಾಸಣೆ ನಡೆಸಲಾಗಿದೆ. ಮಂಗಳೂರು, ಶಿವಮೊಗ್ಗ ಭಾಗದಲ್ಲಿ ಇನ್ನೂ ದಾಳಿ ಮಾಡಲು ಬಾಕಿ ಇದೆ. ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬಂಧಿತರ ಜೊತೆ ಸಂಪರ್ಕದಲ್ಲಿ ಇದ್ದವರ ವಿಚಾರಣೆ ಸಹ ಮಾಡಲಾಗುತ್ತದೆ ಅಂತ ಶಿವಮೊಗ್ಗ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.