
ಚಿಕ್ಕಬಳ್ಳಾಪುರ (ಮಾ.08): ಪ್ರಧಾನಿ ನರೇಂದ್ರ ಮೋದಿಯವರು ಮಾ.25ರಂದು ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶ್ರೀಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ ಎಂದು ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್‌ನ ಪ್ರಧಾನ ಸಾರ್ವಜನಿಕ ಸಂಪರ್ಕ ಅಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ. ಸೋಮವಾರ ದೆಹಲಿಯಲ್ಲಿ ಸತ್ಯಸಾಯಿ ಗ್ರಾಮದ ಸದ್ಗುರು ಮಧುಸೂಧನ್ ಸಾಯಿ ನೇತೃತ್ವದಲ್ಲಿ ಮೋದಿಯನ್ನು ಭೇಟಿ ಮಾಡಿ, ಆಹ್ವಾನ ನೀಡಲಾಗಿದೆ ಎಂದರು.
ಇಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಸುಮಾರು 800 ಕೋಟಿ ರು.ಗಳ ವೆಚ್ಚದಲ್ಲಿ ಸತ್ಯಸಾಯಿ ಗ್ರಾಮದಲ್ಲಿ 350 ಹಾಸಿಗೆಗಳ ವೈದ್ಯಕಿಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ವಿದ್ಯಾಲಯದ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೈದ್ಯಕಿಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಉದ್ಘಾಟನೆಗೊಳ್ಳಲಿರುವ ಹೊಸ ಕಟ್ಟಡಕ್ಕೆ ಶ್ರೀ ಸತ್ಯಸಾಯಿ ರಾಜೇಶ್ವರಿ ಕಟ್ಟಡ ಎಂದು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!
ಮಾ.12ಕ್ಕೆ ಮಂಡ್ಯದಲ್ಲಿ ಪ್ರಧಾನಿ ಮೋದಿ ಭರ್ಜರಿ 15 ಕಿ.ಮೀ ರೋಡ್ ಶೋ: ಪ್ರಧಾನಿ ನರೇಂದ್ರ ಮೋದಿಯವರು ಮಾ.12ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಮಂಡ್ಯದಲ್ಲಿ ಮೈ-ಬೆಂ ಹೆದ್ದಾರಿ ಉದ್ಘಾಟನೆ, ರೋಡ್ ಶೋ ಮತ್ತು ಬೃಹತ್ ಸಮಾವೇಶ ನಡೆಸಲಿದ್ದಾರೆ. ಬಳಿಕ, ಹುಬ್ಬಳ್ಳಿಯಲ್ಲಿ ಐಐಟಿಯ ನೂತನ ಕಟ್ಟಡ ಉದ್ಘಾಟಿಸಿ, ಬೃಹತ್ ಸಮಾವೇಶ ನಡೆಸಲಿದ್ದಾರೆ. ಬೆಳಗ್ಗೆ ಮಂಡ್ಯದ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುವ ಮೋದಿ, ಪಿಇಎಸ್ ಕಾಲೇಜಿನಿಂದ ಗೆಜ್ಜಲಗೆರೆಯವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಗೆಜ್ಜಲಗೆರೆಯ ಕೈಗಾರಿಕಾ ಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಮೋದಿ ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾ.12ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ತಿಳಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ಎಲ್ಲಾ ರೀತಿಯ ವಾಹನಗಳಿಗೆ ಮೈಸೂರು-ಬನ್ನೂರು-ಕಿರುಗಾವಲು - ಮಳವಳ್ಳಿ -ಹಲಗೂರು - ಕನಕಪುರ - ಬೆಂಗಳೂರು ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
ಹಣ ಆಯ್ತು ವಿಧಾನಸೌಧ ಗೇಟ್ ಬಳಿ ಈಗ ಮದ್ಯದ ಬಾಟಲಿ ಪತ್ತೆ!
ಬೆಂಗಳೂರಿನಿಂದ ಮೈಸೂರಿಗೆ ಮಂಡ್ಯ ಮಾರ್ಗವಾಗಿ ಸಂಚರಿಸಲಿರುವ ವಾಹನಗಳಿಗೆ ಬೆಂಗಳೂರು-ಚನ್ನಪಟ್ಟಣ- ಹಲಗೂರು-ಮಳವಳ್ಳಿ-ಕಿರುಗಾವಲು-ಬನ್ನೂರು-ಮೈಸೂರು ಮಾರ್ಗವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲ ಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲಾ ರೀತಿಯ ವಾಹನಗಳನ್ನು ಬೆಂಗಳೂರು-ಚನ್ನಪಟ್ಟಣ ಮಾರ್ಗವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ