
ಡೆಲ್ಲಿ ಮಂಜು
ನವದೆಹಲಿ(ಫೆ.25): ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಇಂದು(ಶನಿವಾರ) ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕಾರ್ಯಕ್ರಮದ ಗೌರವಾಧ್ಯಕ್ಷ ಸಿ.ಟಿ.ರವಿ ತಿಳಿಸಿದ್ದಾರೆ. ನಿನ್ನೆ(ಶುಕ್ರವಾರ) ಕಾರ್ಯಕ್ರಮದ ಸಿದ್ದತೆ ಪರಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ದೆಹಲಿ ಕರ್ನಾಟಕ ಸಂಘಕ್ಕೆ 75 ವರ್ಷ ಪೂರ್ಣಗೊಂಡಿದೆ. ಸಂಘದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಕನ್ನಡಿಗರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ರಾಜ್ಯದ ಸಾಂಸ್ಕೃತಿಕ ಕಲಾ ಪ್ರದರ್ಶನಗಳನ್ನು ಗಣ್ಯರೊಂದಿಗೆ ವೀಕ್ಷಿಸಲಿದ್ದಾರೆ ಎಂದರು.
ದಿಲ್ಲಿ ಕನ್ನಡಿಗರಿಗೆ ಇದೊಂದು ಐತಿಹಾಸಿಕ ಕ್ಷಣ. ಸಂಘ ಕಳೆದ ಹತ್ತಾರು ವರ್ಷಗಳಿಂದ ಕನ್ನಡ ಸೇವೆ ಮಾಡುತ್ತಾ ಬಂದಿದ್ದು, ಪ್ರಧಾನಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಇದಕ್ಕೆ ಮೆರುಗು ಬಂದಿದೆ. 2 ದಿನಗಳ ಕಾಲ 1200ಕ್ಕಿಂತಲೂ ಹೆಚ್ಚು ಕಲಾವಿದರು ಕನ್ನಡಿಗರನ್ನು ರಂಜಿಸಲಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ಸುವರ್ಣ ನ್ಯೂಸ್ ನಿರೂಪಕಿ ಶ್ವೇತಾ ಆಚಾರ್ಯಗೆ ಸನ್ಮಾನ
ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಡಾ. ನಿರ್ಮಲಾನಂದನಾಥ ಸ್ವಾಮಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿ, ಧರ್ಮಸ್ಥಳದ ಧರ್ಮಾಧಿಕಾರಿ, ಸಂಸದ ಡಾ ವೀರೇಂದ್ರ ಹೆಗ್ಗಡೆ, ನಂಜಾವಧೂತ ಮಹಾಸ್ವಾಮಿ, ಉಡುಪಿಯ ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಕಿಶನ್ ರೆಡ್ಡಿ, ಶೋಭಾ ಕರಂದ್ಲಾಜೆ ಹಾಗೂ ರಾಜ್ಯದ ವಿವಿಧ ಸಚಿವರು ಉಪಸ್ಥಿತರಿರಲಿದ್ದಾರೆ.
ದೆಹಲಿಯ ತಾಲ್ಕಟೋರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯಲಿದೆ. ದೆಹಲಿಯ 10-12 ಸಾವಿರ ಕನ್ನಡಿಗರು ಎರಡು ದಿನಗಳ ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ. ಸಂಘಕ್ಕೆ ದುಡಿದ 75 ಮಹನೀಯರು, ಗಣ್ಯರಿಗೆ ವಿಶೇಷ ಸನ್ಮಾನ ಇರಲಿದೆ. ವಿಜಯ್ ಪ್ರಕಾಶ್ ಅವರ ತಂಡದಿಂದ ಸಂಗೀತೋತ್ಸವ ಹಾಗು ಕಾಮಿಡಿ ಕಿಲಾಡಿಗಳಿಂದ ಹಾಸ್ಯಸಂಜೆ ಆಯೋಜಿಸಲಾಗಿದೆ. ಪ್ರಧಾನಿ ಮೋದಿಯವರು ಸುಮಾರು ಒಂದೂವರೆ ಗಂಟೆ ಸಮಯ ಕನ್ನಡಿಗರ ಜೊತೆ ಕಳೆಯಲಿದ್ದಾರೆ ಅಂತ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ