
ಬೆಂಗಳೂರು(ಜೂ.25): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಾಂತ್ರಿಕತೆಗೆ ಆದ್ಯತೆ ನೀಡುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಯಂತಹ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಬೆಳ್ಳಂದೂರಿನ ಎಕೋ ಸ್ಪೇಸ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಇಂಟೆಲ್‌ನ ಕಲಾ ವಿನ್ಯಾಸದ ನೂತನ ಎಂಜಿನಿಯರಿಂಗ್ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 7 ವರ್ಷದಲ್ಲಿ ಕೇಂದ್ರ ಸರ್ಕಾರವು ಆಡಳಿತದಲ್ಲಿ ತಾಂತ್ರಿಕತೆಗೆ ಒತ್ತು ನೀಡುತ್ತಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಯಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಯೋಗ ವಿಶ್ವದ ಜೀವನ ವಿಧಾನ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಈ ಹಿಂದೆ ಸರ್ಕಾರ ನೀಡುವ 1 ರುಪಾಯಿ ಸಹಾಯಧನದಲ್ಲಿ ಫಲಾನುಭವಿಯ ಕೈಗೆ ತಲುಪುತ್ತಿದ್ದುದು ಕೇವಲ 15 ಪೈಸೆಯಷ್ಟುಮಾತ್ರ. ಆದರೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರಿಂದ 1 ರು. ಸಹಾಯಧನ ಬಿಡುಗಡೆಯಾದರೆ ಅದು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೇ ಸಂದಾಯವಾಗುತ್ತದೆ. ವಿಳಂಬವಾಗದೇ ಏಕಕಾಲದಲ್ಲೇ ಹಣ ಸಂದಾಯವಾಗುವುದು ವಿಶೇಷವಾಗಿದೆ. ಇದು ಟ್ರೇಲರ್ ಮಾತ್ರ. ಪಿಕ್ಚರ್ ಬಿಡುಗಡೆಯಾಗುವುದು ಇನ್ನೂ ಬಾಕಿ ಇದೆ ಎಂದು ಬಣ್ಣಿಸಿದರು.
ಡಿಜಿಟಲ್ ಇಂಡಿಯಾಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದ್ದು, ತಾಂತ್ರಿಕತೆಯಿಂದ ಹೆಚ್ಚು ಅವಕಾಶಗಳು ಲಭ್ಯವಾಗಿ ಯುವ ಜನರ ಅವಶ್ಯಕತೆಗೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗುತ್ತವೆ. ಕಾರ್ಯಕ್ಷಮತೆಗೆ ಇಂಟೆಲ್ ಕಂಪನಿ ಹೆಸರುವಾಸಿಯಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವವರಿಗೆ ಉಜ್ವಲ ಭವಿಷ್ಯವಿದೆ. ಉತ್ತಮ ವಿನ್ಯಾಸ ರೂಪಿಸುತ್ತಿದ್ದು ಇದನ್ನು ಮುಂದುವರೆಸಿ ಎಂದು ಸಲಹೆ ನೀಡಿದರು.
25 ಕೋಟಿ ಖರ್ಚು ಮಾಡಿ:
ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಕ್ಷೇತ್ರದಲ್ಲಿ ಸರ್ಕಾರದಿಂದ ಮೆಟ್ರೋ ರೈಲು, ಪೆರಿಫೆರಲ್ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಭಿವೃದ್ಧಿಯಲ್ಲಿ ಕಂಪನಿಗಳೂ ಸಹಭಾಗಿತ್ವ ಹೊಂದಬೇಕು. ಇಂಟೆಲ್ ಕಂಪನಿಯು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‌ಆರ್)ಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಪ್ರತಿವರ್ಷ 25 ಕೋಟಿ ರು. ನೀಡಬೇಕು. ಇದರಿಂದ ಶಾಲೆ, ಕೆರೆ, ಆಸ್ಪತ್ರೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಸಾಮಾಜಿಕ ಮಾಧ್ಯಮ ಬಳಕೆದಾರರ ಸಮಸ್ಯೆ ಆಲಿಸಲು ಸಮಿತಿ
ಮಳೆ ನೀರು ಕಾಲುವೆ, ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕೆಲ ಬಿಲ್ಡರ್‌ಗಳು ಕಟ್ಟಡ ನಿರ್ಮಿಸುತ್ತಿರುವುದರಿಂದ ನಗರದಲ್ಲಿ ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗದೆ ಕೆಲವು ಪ್ರದೇಶಗಳಲ್ಲಿ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಎಲ್ಲರೂ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಬೆಂಗಳೂರಿನ ಬೆಳ್ಳಂದೂರಿನ ಎಕೋ ಸ್ಪೇಸ್ ಬ್ಯುಸಿನೆಸ್ ಪಾರ್ಕ್‌ನಲ್ಲಿ ಇಂಟೆಲ್‌ನ ಕಲಾ ವಿನ್ಯಾಸದ ನೂತನ ಎಂಜಿನಿಯರಿಂಗ್ ಕೇಂದ್ರವನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟಿಸಿದರು. ಶಾಸಕ ಅರವಿಂದ ಲಿಂಬಾವಳಿ, ಇಂಟೆಲ್ ಇಂಡಿಯಾ ಉಪಾಧ್ಯಕ್ಷೆ ನಿವೃತಿ ರೈ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ