PM Modi In Karnataka: ಕಾರ್ಯಕರ್ತರಿಗೆ ಗೌರವ ನೀಡದವರು ಜನರಿಗೆ ಗೌರವ ನೀಡ್ತಾರಾ? ಮೋದಿ ಪ್ರಶ್ನೆ

By Santosh NaikFirst Published Mar 25, 2023, 4:31 PM IST
Highlights

ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿಜಯ ಸಂಕಲ್ಪ ಯಾತ್ರೆಗೆ ಸಿಕ್ಕಿದ ಪ್ರತಿಕ್ರಿಯೆ ಅಭೂತಪೂರ್ವವಾಗಿದೆ. ಕರ್ನಾಟಕದಲ್ಲಿ ಡಬಲ್‌ ಇಂಜಿನ್‌ ಬರೋದಿ ನಿಶ್ಚಿತ ಎಂದು ಪ್ರಧಾನಿ ಹೇಳಿದರು.
 

ದಾವಣಗೆರೆ (ಮಾ.25): ಕಾಂಗ್ರೆಸ್‌ ಪಕ್ಷ ಕಾರ್ಯಕರ್ತರಿಗೆ ಗೌರವ ನೀಡದ ಪಕ್ಷ. ಅಂಥವರು ಜನರಿಗೆ ಹೇಗೆ ಗೌರವ ನೀಡ್ತಾರೆ? ಅದನ್ನು ನೀವು ಹೇಗೆ ಬಯಸಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ನಾನು ಕಳೆದ ದಿನ ಕರ್ನಾಟಕ ಮೂಲದ ಒಂದು ವಿಡಿಯೋ ನೋಡುತ್ತಿದ್ದೆ. ಇದರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು (ಸಿದ್ದರಾಮಯ್ಯ) ಕಾರ್ಯಕರ್ತನ ಕೆನ್ನೆಗೆ ಹೊಡೆದಿದ್ದು ವೈರಲ್‌ ಆಗಿತ್ತು. ನಾನು ನಿಮಗೆ ಈ ಬಗ್ಗೆ ಕೇಳಲು ಬಯಸುತ್ತೇನೆ.ಒಬ್ಬ ಕಾರ್ಯಕರ್ತನಿಗೆ ಗೌರವ ನೀಡದವರು ಜನರಿಗೆ ಗೌರವ ನೀಡ್ತಾರಾ ಎಂದು ಹೇಳುವ ಮೂಲಕ ಸಿದ್ಧರಾಮಯ್ಯ ಅವರ ಹೆಸರನ್ನೂ ಹೇಳದೆ ಅವರಿಗೆ ತಿವಿದರು. ತನ್ನದೇ ಪಕ್ಷದ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿದವರು, ಅವರನ್ನು ಕೀಳಾಗಿ ನೋಡುವವರಿಗೆ ಜನತೆ ಏನನ್ನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಇದೇ ವೇಳೆ ವಿಜಯ ಸಂಕಲ್ಪ ಯಾತ್ರೆಗೆ ಸಿಕ್ಕಿರುವ ಪ್ರತಿಕ್ರಿಯೆ ಹಾಗೂ ಇತ್ತೀಚೆಗೆ ಕಲಬುರಗಿಯಲ್ಲಿ ನಡೆದ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಏನನ್ನು ಸೂಚಿಸುತ್ತದೆ ಅಂದರೆ, ರಾಜ್ಯದಲ್ಲಿ ಡಬಲ್‌ ಇಂಜಿನ್‌ ಬರೋದು ನಿಶ್ಚಿತ ಎಂದರು.

ಇಂದು ಇಡೀ ಜಗತ್ತು, ಭಾರತದ ಬಗ್ಗೆ ಮಾತನಾಡುತ್ತಿದೆಯೋ ಇಲ್ಲವೋ, ಅಮೆರಿಕ, ಜರ್ಮನಿ, ಫ್ರಾನ್ಸ್‌, ಆಫ್ರಿಕಾ, ಸಿಂಗಾಪುರ, ಇಂಡೋನೇಷ್ಯಾ, ಜಪಾನ್‌ ಜಗತ್ತಿನ ದಶದಿಕ್ಕುಗಳೂ ಭಾರತದ ಬಗ್ಗೆ ಮಾತನಾಡುತ್ತಿವೆ. ಇದಕ್ಕೆ ಕಾರಣವೇನು? ನೀವೇ ಹೇಳಿ, ಇದಕ್ಕೆ ಏನು ಕಾರಣ. ಇದಕ್ಕೆ ಮೋದಿ ಕಾರಣವಲ್ಲ. ಇದಕ್ಕೆ ನೀವು ನೀಡಿದ ಆ ಒಂದು ವೋಟ್‌ ಕಾರಣ. ಇದು ನಿಮ್ಮ ಒಂದು ವೋಟಿನ ತಾಕತ್ತು. ಅದಕ್ಕಾಗಿ ಇಂದು ವಿಶ್ವವೇ ಭಾರತದ ಬಗ್ಗೆ ಮಾತನಾಡುತ್ತಿದೆ. ಕರ್ನಾಟಕದ ಬಗ್ಗೆಯೂ ಹೀಗೆ ಮಾತನಾಡಬೇಕಾದಲ್ಲಿ ನಿಮ್ಮ ವೋಟು ಬಿಜೆಪಿಗೆ ನೀಡಬೇಕು ಎಂದು ಹೇಳಿದರು.

ವಿಶ್ವ ಹುಲಿ ದಿನದಂದು ನಾನು ಕರ್ನಾಟಕದ ಹುಲಿಗಳ ನಡುವೆ ಇರಲಿದ್ದೇನೆ. ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡುತ್ತೇನೆ. ಈ ಹತ್ತು ದಿನದಲ್ಲಿ ನೀವೇನು ಮಾಡಿದ್ದೀರಿ ಅನ್ನೋದನ್ನು ನಾನು ನೋಡುತ್ತೇನೆ. ನಿಮ್ಮ ಪ್ರೀತಿಯಿಂದ ನನಗೆ ದೊಡ್ಡ ಶಕ್ತಿ, ವಿಶ್ವಾಸ ಸಿಕ್ಕಿದೆ. ಈ ದಾವಣಗೆರೆಯ ನೆಲದಿಂದ ಕರ್ನಾಟಕದ ಪ್ರತಿ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದರು.

ನನಗೆ ಯಾವಾಗೆಲ್ಲಾ ದಾವಣಗೆರೆಗೆ ಬರುವ ಅವಕಾಶ ಸಿಕ್ಕಾಗಲೆಲ್ಲಾ ನನಗೆ ನೀಡಿರುವ ಆಶೀರ್ವಾದ ಜಾಸ್ತಿ ಆಗುತ್ತಿದೆ. ಕರ್ನಾಟಕ ಬಿಜೆಪಿ ಮೂಲಕ ಮತ್ತೆ ಈ ಭಾಗದ ಜನರನ್ನು ಮತ್ತೆ ನೋಡಲು ಸಾಧ್ಯವಾಗಿದೆ. ಭಾರತಮಾತೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಿಮ್ಮೆಲ್ಲರನ್ನು ನೋಡುವುದು ನನ್ನ ಸೌಭಾಗ್ಯ. ಇದು ವಿಜಯ ಸಂಕಲ್ಪವಲ್ಲ, ವಿಜಯ ಮಹೋತ್ಸವದ ರಾಲಿ ಥರ ರೀತಿ ಕಾಣುತ್ತಿದೆ. ಇಂದು ಕಾಂಗ್ರೆಸ್‌ ಅಧ್ಯಕ್ಷರ ತವರು ಕ್ಷೇತ್ರವಾದ ಕಲಬುರಗಿಯಲ್ಲಿ  ಬಿಜೆಪಿಯ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸಂದೇಶ ಇದು. ಇದು ಡಬಲ್‌ ಇಂಜಿನ್‌ ಸರ್ಕಾರ ವಾಪಸಾಗಲಿದೆ ಎನ್ನುವ ಸೂಚನೆ ಎಂದು ಮೋದಿ ಹೇಳಿದ್ದಾರೆ.

ಶಾಸಕ ರಾಮಪ್ಪ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ ಸಿದ್ದು..

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಳೀನ್‌ ಕುಮಾರ್‌ ಕಟೀಲ್‌ ಶಾಲನ್ನು ಹೊದಿಸಿದರೆ, ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮಾಲಾರ್ಪಣೆ ಮಾಡಿ ಗೌರವಿಸಿದರು. ದಾವಣಗೆರೆಯ ಸಂಸದರಾದ ಜಿಎಂ ಸಿದ್ಧೇಶ್ವರ ಅವರು ಮೈಸೂರು ಪೇಟವನ್ನು ತೊಡಿಸಿದರೆ, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಗದೆಯನ್ನು ಉಡುಗೊರೆಯಾಗಿ ನೀಡಿದರು.

Breaking ವರುಣಾ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ, ಎರಡು ಕಡೆ ನಿಲ್ಲುವ ಇಂಗಿತ!

ಸಮಾರಂಭದ ವೇದಿಕೆ ಏರುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತೆರೆದ ವಾಹನದಲ್ಲಿ ಜನರತ್ತ ಕೈಬೀಸುತ್ತಲೇ ಆಗಮಿಸಿದರು. ಜನರ ಮಧ್ಯದಿಂದಲೇ ಅವರು ವೇದಿಕೆ ಏರಿದ್ದು ಬಹಳ ವಿಶೇಷವಾಗಿತ್ತು.  ಗುಜರಾತ್ ವಿಧಾಸಭಾ ಚುನಾವಣೆಯಲ್ಲಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಇದೇ ರೀತಿ ಜನರ ನಡುವೆ ತೆರೆದ ವಾಹನದ ಮೂಲಕ ವೇದಿಕೆಗೆ ಆಗಮಿಸಿದ್ದರು. ಬಳಿಕ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿತ್ತು.

click me!