ಪಕ್ಷಾಂತರ ಮಾಡಿದ ಶಾಸಕರನ್ನು ಕೇವಲ ಅನರ್ಹಗೊಳಿಸಿದರಷ್ಟೇ ಸಾಲದು, ಪಕ್ಷಾಂತರ ಕೃತ್ಯದ ಹಿಂದೆ ನಡೆಯುವ ಭ್ರಷ್ಟ ಕ್ರಮಗಳ ವಿರುದ್ದವೂ ತನಿಖೆ ಆಗಬೇಕು. ಪ್ರಸ್ತುತ ಮತ್ತೆ ಆಪರೇಷನ್ ಕಮಲ ಸದ್ದು ಜೋರಾಗಿದೆ. ಆದ್ದರಿಂದ ಜನಾದೇಶ ವಿರೋಧಿ ನಡೆಗಳ ವಿರುದ್ಧ ತನಿಖೆಗೆ ಅನುಮತಿ ನೀಡಬೇಕೆಂದು ಸಂಘಟನೆ ಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದೆ.
ಬೆಂಗಳೂರು(ಸೆ.15): 2019ರ 'ಆಪರೇಷನ್ ಕಮಲ' ಪಕ್ಷಾಂತರ ಪ್ರಕರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ 17 ಶಾಸಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ 2018 ಅಡಿಯಲ್ಲಿ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಬೆಂಗಳೂರಿನ 'ಜನಾಧಿಕಾರ ಸಂಘರ್ಷ ಪರಿಷತ್ತು' ಮನವಿ ಮಾಡಿದೆ.
ಈ ಕುರಿತು ಸಂಘಟನೆಯ ಆದರ್ಶ್ ಆರ್. ಅಯ್ಯರ್ ಸೇರಿದಂತೆ ಪದಾಧಿಕಾರಿಗಳು ಸೆ. 11 ರಂದು ಸಭಾಧ್ಯಕ್ಷರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಂದು ನಡೆದ 'ಆಪರೇಷನ್ ಕಮಲ' ನಂತರದ ಪಕ್ಷದ ವಿಪ್ ಉಲ್ಲಂಘಿಸಿ ಸದನದಲ್ಲಿ ಗೈರು ಹಾಜರಾಗದೇ ಇರುವ ಮೂಲಕ ಯಡಿಯೂರಪ್ಪ ಅವರಿಗೆ ಅನುಚಿತ ಅನುಕೂಲತೆ ಶಾಸಕರು ಕಲ್ಪಿಸಿದ್ದರು. ಈ ಶಾಸಕರ ವಿರುದ್ಧ 'ಜನಾಧಿಕಾರ ಸಂಘರ್ಷ ಪರಿಷತ್ತು' ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ'ಕ್ಕೆ ಪ್ರಕರಣ ದಾಖಲಿಸಿ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿತ್ತು.
ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಸದರಿ ಪ್ರಕರಣ 'ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ 2018 ಕಲಂ 7' ಅಡಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಶಾಸಕರ ವಿರುದ್ಧ ಅಭಿಯೋಜನೆಗೆ ಮಂಜೂರಾತಿ ಪಡೆಯಬೇಕೆಂದು ಆದೇಶಿಸಿತ್ತು. ಈ ಹಿನ್ನೆಲೆ ಪಕ್ಷಾಂತರ ಮಾಡಿದ ಶಾಸಕರನ್ನು ಕೇವಲ ಅನರ್ಹಗೊಳಿಸಿದರಷ್ಟೇ ಸಾಲದು, ಪಕ್ಷಾಂತರ ಕೃತ್ಯದ ಹಿಂದೆ ನಡೆಯುವ ಭ್ರಷ್ಟ ಕ್ರಮಗಳ ವಿರುದ್ದವೂ ತನಿಖೆ ಆಗಬೇಕು. ಪ್ರಸ್ತುತ ಮತ್ತೆ ಆಪರೇಷನ್ ಕಮಲ ಸದ್ದು ಜೋರಾಗಿದೆ. ಆದ್ದರಿಂದ ಜನಾದೇಶ ವಿರೋಧಿ ನಡೆಗಳ ವಿರುದ್ಧ ತನಿಖೆಗೆ ಅನುಮತಿ ನೀಡಬೇಕೆಂದು ಸಂಘಟನೆ ಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದೆ.
ಯಾರ ವಿರುದ್ಧ ದೂರು?:
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪಗೌಡ ಪಾಟೀಲ್, ಬಿ.ಸಿ. ಪಾಟೀಲ್, ಅರಬೈಲ್ ಶಿವರಾಮ ಹೆಬ್ಬಾರ್, ಎಸ್.ಟಿ. ಸೋಮಶೇಖರ್,ಬಿ.ಎ. ಬಸವರಾಜ್, ಮುನಿರತ್ನ, ಡಾ. ಕೆ. ಸುಧಾಕರ್, ಆನಂದ ಸಿಂಗ್, ಆರ್. ಶಂಕರ್, ಎ.ಎಚ್. ವಿಶ್ವನಾಥ್, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ, ರೋಶನ್ ಬೇಗ್, ಎನ್. ನಾಗರಾಜು ಎಂಟಿಬಿ, ಶ್ರೀಮಂತ ಪಾಟೀಲ್ ಹಾಗೂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತದಿಂದ ತನಿಖೆ ನಡೆಸಲು ಅನುಮತಿ ನೀಡುವಂತೆ ಆದರ್ಶ್ ಅಯ್ಯರ್ ಅರ್ಜಿ ಸಲ್ಲಿಸಿದ್ದಾರೆ.