ಸೋಂಕಿ​ನಿಂದ ಮೃತಪಟ್ಟವರ ದರ್ಶನಕ್ಕೆ ಅವಕಾಶ: ಸರ್ಕಾ​ರ

By Kannadaprabha NewsFirst Published Aug 1, 2020, 9:43 AM IST
Highlights

ಕೊರೋನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಶವದ ಮುಖ ದರ್ಶನ ಮಾಡಲು ಕುಟುಂಬದ ಸದಸ್ಯರು ಬಯಸಿದರೆ ಐಸೋಲೇಷನ್‌ ವಾರ್ಡ್‌ನಿಂದ ಶವ ಹೊರಗೆ ತಂದಾಗ ಅಥವಾ ಸ್ಮಶಾನದಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಬೆಂಗಳೂರು(ಆ.01): ಕೊರೋನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಶವದ ಮುಖ ದರ್ಶನ ಮಾಡಲು ಕುಟುಂಬದ ಸದಸ್ಯರು ಬಯಸಿದರೆ ಐಸೋಲೇಷನ್‌ ವಾರ್ಡ್‌ನಿಂದ ಶವ ಹೊರಗೆ ತಂದಾಗ ಅಥವಾ ಸ್ಮಶಾನದಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಕೋವಿಡ್‌-19 ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು.

ಕೋವಿಡ್ 19: ಆಘಾತ ಮೂಡಿಸುವಂತಿದೆ ಜುಲೈ ಅಂಕಿ- ಅಂಶಗಳು..!

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ಕೊರೋನಾ ಹಿನ್ನೆಲೆಯಲ್ಲಿ ಮೃತದೇಹಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಮಗ್ರ ಮಾರ್ಗಸೂಚಿ ರಚಿಸಲಾಗಿದೆ. ಈ ಕುರಿತು ಪರಿಷ್ಕೃತ ಸುತ್ತೋಲೆಯನ್ನು ಜುಲೈ 29ಕ್ಕೆ ಹೊರಡಿಸಲಾಗಿದೆ. ಅದರ ಪ್ರಕಾರ ಕೊರೋನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಯ ಶವದ ಮುಖ ದರ್ಶನ ಮಾಡಲು ಕುಟುಂಬದ ಸದಸ್ಯರು ಬಯಸಿದರೆ ಐಸೋಲೇಷನ್‌ ವಾರ್ಡ್‌ನಿಂದ ಶವ ಹೊರಗೆ ತಂದಾಗ ಅಥವಾ ಶ್ಮಶಾನದಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ವೇಳೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆದರೆ, ಮೃತದೇಹ ಸ್ಪರ್ಶಿಸಲು ಅವಕಾಶ ಇರುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಭ್ರಷ್ಟಾಚಾರ ಸುಳ್ಳಾದರೆ ನೇಣಿಗೇರಿಸಿ: ಡಿಕೆಶಿ

ಕೋವಿಡ್‌-19 ತಪಾಸಣೆ, ಕೊರೋನಾ ಸೋಂಕಿತರ-ಶಂಕಿತರ ಮೃತದೇಹಗಳ ನಿರ್ವಹಣೆ, ಆ ವೇಳೆ ಆರೋಗ್ಯ ಸಿಬ್ಬಂದಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಶವ ಪರೀಕ್ಷೆ, ಶವ ಸಾಗಾಣೆ, ಸ್ಮಶಾನ ಮತ್ತು ಚಿತಾಗಾರಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳಲ್ಲಿ ವಿವರಿಸಲಾಗಿದೆ. ಹಾಗೆಯೇ, ಮನೆಗಳಲ್ಲಿ ಮೃತಪಟ್ಟರೆ, ಅನಾಥ ಶವಗಳು, ವೈದ್ಯಕೀಯ ದೃಢೀಕರಣ ಪತ್ರ ಹಾಗೂ ಮರಣ ಪ್ರಮಾಣ ಪತ್ರ ಬಗ್ಗೆ ಮಾರ್ಗಸೂಚಿಗಳಲ್ಲಿ ವಿವರಿಸಲಾಗಿದೆ ಎಂದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಸಾವು ಮತ್ತು ಅಂತ್ಯಕ್ರಿಯೆ ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರ. ಆಯಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ಅನುಸಾರವಾಗಿ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಹೀಗಾಗಿ, ಮುಖ ದರ್ಶನದ ವೇಳೆ ಮೃತದೇಹವನ್ನು ಸ್ಪರ್ಶಿಸಲು ಅಥವಾ ಚುಂಬಿಸಲು ಅವಕಾಶ ಸಿಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿ ವಿಚಾರಣೆ ಮುಂದೂಡಿತು.

click me!