ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ: ದಿನೇಶ್ ಗುಂಡೂರಾವ್

By Kannadaprabha NewsFirst Published Aug 28, 2023, 4:24 PM IST
Highlights

ಮೊಸರಲ್ಲಿ ಕಲ್ಲು ಹುಡುಕುವುದೇ ಬಿಜೆಪಿ ಕೆಲಸ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ಭಾನುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹುಬ್ಬಳ್ಳಿ (ಆ.28) :  ಮೊಸರಲ್ಲಿ ಕಲ್ಲು ಹುಡುಕುವುದೇ ಬಿಜೆಪಿ ಕೆಲಸ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್‌ ಹೇಳಿದರು. ಭಾನುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 100 ದಿನಗಳಾಗಿವೆ. ಚುನಾವಣೆ ಪೂರ್ವದಲ್ಲಿ ನಾವು ಕೊಟ್ಟಮಾತು ಉಳಿಸಿಕೊಂಡಿದ್ದೇವೆ. ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಹಿತಾಸಕ್ತಿ ಕಾಪಾಡುವುದು ನಮ್ಮ ಕೆಲಸ. ಈ ಹಿಂದೆ ಹೊಸ ಸರ್ಕಾರ ಬಂದ ತಕ್ಷಣ ಆಶ್ವಾಸನೆ ಈಡೇರಿಸಲು ಮನಸ್ಸು ಮಾಡಿಲ್ಲ. ಆದರೆ, ನಾವು ನೀಡಿದ್ದ ಭರವಸೆಗಳನ್ನು 100 ದಿನಗಳಲ್ಲಿ ಈಡೇರಿಸಿದ್ದೇವೆ. ವಿರೋಧ ಪಕ್ಷದವರು ಹೇಗೆ ಮಾಡ್ತೀರಿ ಎಂದು ಟೀಕೆ ಮಾಡಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದರು. ಕೇವಲ ವೋಟ್‌ ಪಡೆಯುವ ಸಲುವಾಗಿ ಗ್ಯಾರಂಟಿ ಘೋಷಣೆ ಮಾಡಲಿಲ್ಲ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಮಾತನ್ನು ಅಧಿಕಾರಕ್ಕೆ ಬಂದ 100 ದಿನದೊಳಗೆ ಈಡೇರಿಸಿ ದೇಶಕ್ಕೆ ಕಾಂಗ್ರೆಸ್‌ ಏನೆಂದು ತೋರಿಸಿದ್ದೇವೆ. ಜನರಿಗೆ ನೀಡಿದ್ದ ಭರವಸೆ ಈಡೇರಿಸಿದ ತೃಪ್ತಿ ನಮಗಿದೆ ಎಂದರು.

ಕಾಂಗ್ರೆಸ್‌ನಿಂದ 'ಗೃಹ ಆರೋಗ್ಯ' ಯೋಜನೆ ಜಾರಿ: ವಿ‍ಶೇಷತೆ ಬಿಚ್ಚಿಟ್ಟ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ನಿಷ್ಪಕ್ಷಪಾತ ತನಿಖೆ:

ಕೋವಿಡ್‌ ಹಗರಣ ವಿಚಾರಕ್ಕೆ ಉತ್ತರಿಸಿದ ದಿನೇಶ್‌ ಗುಂಡೂರಾವ್‌, ಈ ಕುರಿತು ಬಂದ ವರದಿಯ ಆಧಾರದ ಮೇಲೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಎಂಬ ಉದ್ದೇಶದಿಂದ ನ್ಯಾ. ಜಾನ್‌ ಮೈಕಲ್‌ ಕುನ್ನಾ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ. ನಾವು ವಿರೋಧ ಪಕ್ಷದವರಿದ್ದಾಗ ಆರೋಪ ಮಾಡಿ ಸುಮ್ಮನೆ ಕುಳಿತುಕೊಂಡಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಮಾಡಿರುವ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದೇವೆ. ಅಧಿಕಾರಿಯಾಗಲಿ, ರಾಜಕಾರಣಿಯಾಗಲಿ ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದರು.

ನಾವು ಆರೋಪ ಮಾಡಿ ಹೊಂದಾಣಿಗೆ ಮಾಡಿಕೊಳ್ಳುವವರಲ್ಲ. ಇಷ್ಟುದಿನ ಹಾಗೆಯೇ ಆಗುತ್ತಿತ್ತು. ಆದರೆ, ನಾವು ಮಾತ್ರ ಯಾರ ಜತೆ ಹೊಂದಾಣಿಕೆಯ ರಾಜಕಾರಣ ಮಾಡಿಕೊಳ್ಳುವುದಿಲ್ಲ. 40% ಕಮಿಷನ್‌ ಬಗ್ಗೆಯೂ ತನಿಖೆ ನಡೆಸಲಾಗುತ್ತಿದ್ದು, ನಾಲ್ವರು ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಯಾರನ್ನೂ ಟಾರ್ಗೆಟ್‌ ಮಾಡುವ ಉದ್ದೇಶವಿಲ್ಲ, ನಾವು ಭ್ರಷ್ಟಾಚಾರದ ಬಗ್ಗೆ ಜನರ ಮುಂದೆ ಹೇಳಿದ್ದೇವೆ. ಈಗ ಅದನ್ನು ಸರಿಪಡಿಸಬೇಕು. ಹಾಗೆಯೇ ಮುಂದಿನ ದಿನಗಳಲ್ಲಿ ನಡೆಯದಂತೆ ಕ್ರಮ ವಹಿಸಬೇಕಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಮೋದಿ ಸೋಲು:

ಬಿಜೆಪಿಯವರು ನಾವು ಇಷ್ಟುಬೇಗ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದುಕೊಂಡಿರಲಿಲ್ಲ. ಈಚೆಗೆ ನಡೆದ ಚುನಾವಣೆಯಲ್ಲಿ ಮತದಾರರು ಬಿಜೆಪಿಯವರನ್ನು ಮನೆಗೆ ಕಳುಹಿಸಿದ್ದಾರೆ. ಇದಲ್ಲದೇ ಬಿಜೆಪಿ ಹೈಕಮಾಂಡ್‌ ರಾಜ್ಯದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದೆ. ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಬೀದಿ ಬೀದಿಗಳಲ್ಲಿ ಓಡಾಡಿದರು. ಆದರೆ, ಬಿಜೆಪಿ ಅಭ್ಯರ್ಥಿಗಳು ಹೀನಾಯವಾಗಿ ಸೋಲು ಕಾಣುವ ಮೂಲಕ ಮೋದಿಗೆಗೆ ಅವಮಾನ ಮಾಡಿದ್ದಾರೆ. ಹೇಗಾಗಿದೆ ಅಂದರೆ, ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಸೋತ ಹಾಗಾಗಿದೆ. ಹಾಗಾಗಿ ರಾಜ್ಯ ಸರ್ಕಾರದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ವರ್ಗಾವಣೆ ದಂಧೆ ಆರೋಪಕ್ಕೆ ಉತ್ತರಿಸಿದ ದಿನೇಶ್‌, ವರ್ಗಾವಣೆ ಮಾಡುತ್ತಿದ್ದೇವೆ, ಹೊಸ ಸರ್ಕಾರ ಬಂದಾಗ ವರ್ಗಾವಣೆ ಸಹಜ ಪ್ರಕ್ರಿಯೆ. ಅವರು ಹರಾಜು ಪ್ರಕ್ರಿಯೆ ಅಂತ ಆರೋಪ ಮಾಡುತ್ತಿದ್ದಾರೆ. ಆಡಳಿತ ಸುಧಾರಣೆಗೆ ವರ್ಗಾವಣೆ ಮಾಡಿದ್ದು, ದುಡ್ಡು ತೆಗೆದುಕೊಂಡು ಮಾಡಿದ್ದೇವಾ? ಯಾವುದೇ ಖಚಿತ ದಾಖಲೆ ಇಲ್ಲದೇ ಮಾತನಾಡುವುದು ಸರಿಯಲ್ಲ ಎಂದರು.

ನಮ್ಮನ್ನು ಗೋಜಿಗೆ ಸಿಲುಕಿಸಲು ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಇದೀಗ ಎಫ್‌ಸಿಎ ಅವರು ಹರಾಜು ಮಾಡುತ್ತಿದ್ದಾರೆ. ಖರೀದಿ ಮಾಡಲು ಯಾರೂ ಇಲ್ಲ. ಐದು ಗ್ಯಾರಂಟಿ ವೇಗವಾಗಿ ಜಾರಿ ಮಾಡಿದ್ದೇವೆ. ಎಲ್ಲ ಜಾತಿ, ಧರ್ಮ ಎಲ್ಲರಿಗೂ ಸರಿಯಾಗಿ ಯೋಜನೆ ತಲುಪುತ್ತಿವೆ. ಇದರಲ್ಲಿ ಶೇ. 1ರಷ್ಟೂಭ್ರಷ್ಟಾಚಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ ಹಳ್ಳೂರ, ಸದಾನಂದ ಡಂಗನವರ ಸೇರಿದಂತೆ ಕಾಂಗ್ರೆಸ್‌ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಿಂಗ್‌ ಮೇಕರ್‌ ಕನಸು ಭಗ್ನಗೊಂಡು ಕುಮಾರಸ್ವಾಮಿ ಹತಾಶೆ ಕೂಪದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ: ಕಾಂಗ್ರೆಸ್‌ ಟೀಕೆ

ಅಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ವಿಶೇಷ ಕಾರ್ಯಕ್ರಮ:

ಇಂದು ಜನರಲ್ಲಿ ಹೃದಯಾಘಾತ, ಕ್ಯಾನ್ಸರ್‌, ಪಾಶ್ರ್ವವಾಯುದಂತಹ ಅಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಇದನ್ನು ನಿಯಂತ್ರಿಸಲು ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಅಶಾ ಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಹಾಗೆಯೇ ಮೊಬೈಲ್‌ ಚಿಕಿತ್ಸಾ ವಾಹನದ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಸಕಲ ಚಿಕಿತ್ಸಾ ಸೌಲಭ್ಯ ಹೊಂದಿದ ಮೊಬೈಲ್‌ ಯುನಿಟ್‌ ಜಾರಿಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ 2-3 ತಿಂಗಳಲ್ಲಿ ಜಾರಿಗೊಳಿಸಲಾಗುವುದು. ಇದಕ್ಕೆ ಬೇಕಾದ ವಾಹನಗಳ ಖರೀದಿಗೆ ತಿಂಗಳೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ವೈದ್ಯರೆಲ್ಲ ಹಳ್ಳಿಗಳಿಗೆ ಹೋಗಬೇಕು, ಔಷಧಿ ಜನರ ಮನೆಗೆ ಹೋಗಿ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

click me!