ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಪ್ರದೇಶದಲ್ಲಿ ಮೋಡ ಬಿತ್ತನೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಚಿಂತನೆ ಮಾಡಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಮೋಡ ಬಿತ್ತನೆ ಮಾಡುವುದಿಲ್ಲ ಎಂದಿದ್ದಾರೆ.
ಬೆಂಗಳೂರು (ಆ.28): ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮೋಡ ಬಿತ್ತನೆ ಕಾರ್ಯದ ಬಗ್ಗೆ ಚಿಂತನೆ ಮಾಡಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋಡ ಬಿತ್ತನೆ ಕಾರ್ಯ ಯಾವ ಕಾಲದಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಕೃಷಿ ಸಚಿವರ ಚಿಂತನೆಗೆ ಎಳ್ಳುನೀರು ಬಿಟ್ಟಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಕಳೆದ ಒಂದೂವರೆ ತಿಂಗಳಿಂದ ಮಳೆ ಎನ್ನುವುದು ಮರೀಚಿಕೆ ಆಗುತ್ತಿದೆ. ಈಗಾಗಲೇ 9 ಜಿಲ್ಲೆಗಳು ಸಂಪೂರ್ಣವಾಗಿ ಬರಗಾಲ ಪರಿಸ್ಥಿತಿ ಎದುರಿಸುತ್ತಿವೆ. ಶೇ.50ಕ್ಕಿಂತ ಕಡಿಮೆ ಮಳೆಯನ್ನು 6 ಜಿಲ್ಲೆಗಳು ಪಡೆದಿದೆ. ಆದರೆ, ಈಗ ಮೋಡಗಳು ಉಂಟಾಗಿದ್ದರೂ ಅವುಗಳನ್ನು ಮೋಡ ಬಿತ್ತನೆ ಮೂಲಕ ಮಳೆ ಸುರಿಸುವಂತೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಚಿಂತನೆ ಮಾಡಿದ್ದರು. ಈ ಬಗ್ಗೆ ಸಚಿವ ಸಂಪುಟದ ಮುಂದೆ ಚರ್ಚೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮತಿ ಪಡೆದು ಮೋಡ ಬಿತ್ತನೆ ಕಾರ್ಯ ಮಾಡಲಾಗುವುದು ಎಂದು ತಿಳಿಸಿದ್ದರು.
ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ
ಕೃಷಿ ಸಚಿವರು ಮೋಡ ಬಿತ್ತನೆಯ ಚಿಂತನೆ ಮಾಡಿದ್ದ ಬಗ್ಗೆ ಮತ್ತೆ ಮಾತನಾಡಿರಲಿಲ್ಲ. ಈಗ ರಾಜ್ಯದಲ್ಲಿ ಸಂಪೂರ್ಣವಾಗಿ ಬರಗಾಲ ಪರಿಸ್ಥಿತಿ ಆವರಿಸಿದ್ದು, ಸರ್ಕಾರದಿಂದ ಅಲ್ಲಲ್ಲಿ ಮೋಡ ಬಿತ್ತನೆ ಮಾಡಲಾಗುತ್ತದೆಯೇ ಎಂಬ ನಿರೀಕ್ಷೆಯಲ್ಲಿ ರೈತರು ಎದುರು ನೋಡುತ್ತಿದ್ದರು. ಆದರೆ, ಬರಗಾಲ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ, ಮೋಡ ಬಿತ್ತನೆ ಯಾವ ಕಾಲದಲ್ಲೂ ಯಶಸ್ವಿಯಾಗಿಲ್ಲ. ಮೋಡ ಬಿತ್ತನೆಯಿಂದ ಯಾವುದೇ ಪ್ರಯೋಜನೆ ಇಲ್ಲ. ಬರಕ್ಕೆ ಬೇಕಾದಂತಹ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಮೊದಲು ಬರ ಪೀಡಿತ ಪ್ರದೇಶ ಘೋಷಣೆ ಮಾಡಲಾಗುವುದು ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಕೇಂದ್ರ ಸರ್ಕಾರ ಬರಗಾಲ ನಿರ್ವಹಣೆಗೆ ಬೇಕಾದ ನೆರವು ನೀಡುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ (NDRF) ನಿಯಮಾನುಸಾರ ಕೇಂದ್ರದಿಂದ ಪರಿಹಾರ ನೀಡಲಾಗುತ್ತದೆ. ಇನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರದ ನೆರವು ಬಂದ ನಂತರ ತಾಲೂಕುವಾರು ನಾವು ನಿರ್ವಹಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ರಾಜ್ಯದಲ್ಲಿ ಮಳೆ ಕೊರತೆ: ಮೋಡ ಬಿತ್ತನೆಗೆ ಸರ್ಕಾರದಿಂದ ಅನುಮತಿ
ಜುಲೈ ತಿಂಗಳಲ್ಲೇ ಮೋಡ ಬಿತ್ತನೆಗೆ ನಡೆದಿತ್ತು ಸಿದ್ಧತೆ: ಕಳೆದ ಜುಲೈ ತಿಂಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಎದುರಾಗಿತ್ತು. ಈ ವೇಳೆ ಹಾವೇರಿ ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಖಾಸಗಿಯಾಗಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ಮಾಡಲು ಸಿದ್ಧತೆ ಮಾಡಲಾಗುತ್ತಿತ್ತು. ಪ್ರಕಾಶ್ ಕೋಳಿವಾಡಗೆ ಸೇರಿದ PKK ಎಂಬ ಎನ್‌ಜಿಓನಿಂದ ಮೋಡ ಬಿತ್ತನೆಗೆ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯಿಂದ ಅನುಮತಿ ಸಹ ಪಡೆದುಕೊಳ್ಳಲಾಗಿತ್ತು. ಇನ್ನು ಕೇಂದ್ರ ವಿಮಾನಯಾನ ಇಲಾಖೆಯ ಅನುಮತಿ ಪಡೆದುಕೊಳ್ಳಲು NGO ಟೀಂ ದೆಹಲಿಗೆ ತೆರಳಿತ್ತು. ದೆಹಲಿಯಲ್ಲಿ ಪರ್ಮಿಷನ್ ಸಿಕ್ಕ ಬಳಿಕ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ, ಜುಲೈ ತಿಂಗಳಲ್ಲೇ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ರಾಜ್ಯ ಸರ್ಕಾರವೇ ಈಗ ಮೋಡ ಬಿತ್ತನೆ ಕಾರ್ಯವನ್ನು ನಿರಾಕರಣೆ ಮಾಡಿದೆ.