ಗೋವಾ ಕ್ಯಾತೆ ನಡುವೆ ಕಳಸಾ-ಬಂಡೂರಿ ಭೂಸ್ವಾಧೀನಕ್ಕೆ ಆದೇಶ

Ravi Janekal   | Kannada Prabha
Published : Aug 14, 2025, 07:01 AM IST
Kalasa banduri project

ಸಾರಾಂಶ

ಗೋವಾ ಮುಖ್ಯಮಂತ್ರಿಗಳ ಹೇಳಿಕೆಯ ಮರುದಿನವೇ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ, ಯೋಜನೆ ಜಾರಿಗೆ ಸಿದ್ಧತೆ ನಡೆಸುತ್ತಿದೆ. ಒಟ್ಟು 9.27 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.

ಹುಬ್ಬಳ್ಳಿ (ಆ.14): ಅತ್ತ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಮಹದಾಯಿ ವಿಷಯವಾಗಿ ಕ್ಯಾತೆ ತೆಗೆದ ಮರುದಿನವೇ ರಾಜ್ಯ ಸರ್ಕಾರ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದೆ.

ಜು.22ರಂದು ಗೋವಾ ಸದನದಲ್ಲಿ ಅಲ್ಲಿನ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಯೋಜನೆ ಬಗ್ಗೆ ಕ್ಯಾತೆ ತೆಗೆದಿದ್ದರು. ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ತಮಗೆ ಭರವಸೆ ನೀಡಿದೆ ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿತ್ತು. ರೈತರು ಮತ್ತೆ ಹೋರಾಟವನ್ನೂ ತೀವ್ರಗೊಳಿಸಿದ್ದರೆ, ಕಾಂಗ್ರೆಸ್ಸಿಗರು ಬಿಜೆಪಿ ಮೇಲೆ ಹರಿಹಾಯ್ದಿದ್ದು ಇದೆ. ಇನ್ನು ಬಿಜೆಪಿ ಜನಪ್ರತಿನಿಧಿಗಳು ಕೂಡ ಗೋವಾ ಸಿಎಂ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಅಲ್ಲದೇ, ಅದು ವೈಯಕ್ತಿಕ ಹೇಳಿಕೆ ಎಂದು ತಿಳಿಸುವ ಪ್ರಯತ್ನ ಮಾಡಿದ್ದರು.

ಭೂಸ್ವಾಧೀನಕ್ಕೆ ಅಧಿಸೂಚನೆ:

ಈ ನಡುವೆಯೇ ಗೋವಾ ಸಿಎಂ ಹೇಳಿಕೆ ನೀಡಿದ ಮರುದಿನವೇ ರಾಜ್ಯ ಸರ್ಕಾರ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಯ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಪೈಪ್‌ಲೈನ್‌ ಮೂಲಕವೇ ನೀರು ತರುವ ಯೋಜನೆ ಇದಾಗಿದ್ದು, ಹೀಗಾಗಿ ಹೆಚ್ಚಿನ ಜಮೀನು ಬೇಕಾಗುವುದಿಲ್ಲ. 9.27 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ನೋಟಿಫಿಕೇಶನ್‌ ಹೊರಡಿಸಿದೆ.

ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಯಡಿ ಹುಬ್ಬಳ್ಳಿ-ಧಾರವಾಡ, ಕುಂದಗೋಳ ಪಟ್ಟಣ ಹಾಗೂ ಮಾರ್ಗಮಧ್ಯೆ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು. ಅದಕ್ಕಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಸೋಗಾ (2.38 ಎಕರೆ), ಕರಂಬಳ (15 ಗುಂಟೆ), ಶೇಡೆಗಾಳಿ (14 ಗುಂಟೆ) ಹಾಗೂ ರೂಮೇವಾಡಿ (6 ಎಕರೆ) ಸೇರಿದಂತೆ ಒಟ್ಟು 9.27 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ಕಾಯ್ದೆ- 2019ರಡಿ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ರಾಜ್ಯಪಾಲರ ಆಜ್ಞಾನುಸಾರ ಸರ್ಕಾರದ ಆಧೀನ ಕಾರ್ಯದರ್ಶಿಗಳು ಈ ಅಧಿಸೂಚನೆ ಹೊರಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್