ವಿಪಕ್ಷ ಆಡಳಿತ ಪಕ್ಷವನ್ನ ಟೀಕಿಸುವಾಗ ತಾಳ್ಮೆಯಿಂದ ವರ್ತಿಸಿ, ಶಾಸಕರಿಗೆ ಸಂಯಮದ ಪಾಠ ಮಾಡಿದ ಸಿಎಂ

Ravi Janekal   | Kannada Prabha
Published : Aug 14, 2025, 06:34 AM IST
cm siddaramaiah

ಸಾರಾಂಶ

ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಮುಖ್ಯಮಂತ್ರಿಗಳು ಶಾಸಕರಿಗೆ ತಾಳ್ಮೆಯಿಂದ ವರ್ತಿಸುವಂತೆ ಕರೆ ನೀಡಿದ್ದಾರೆ. 

ವಿಧಾನಸಭೆ: ವಿರೋಧ ಪಕ್ಷದ ಶಾಸಕರು ಸದನದಲ್ಲಿ ಆಡಳಿತ ಪಕ್ಷವನ್ನು ಟೀಕಿಸುವಾಗ ತಾಳ್ಮೆಯಿಂದ ವರ್ತಿಸಬೇಕು. ವೈಯಕ್ತಿಕ ದ್ವೇಷ ತೀರಿಸಿಕೊಳ್ಳುವ ರೀತಿಯಲ್ಲಿ ಮಾತನಾಡಬಾರದು. ಪ್ರತಿಯೊಬ್ಬರೂ ತಮ್ಮ ನಡವಳಿಕೆಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಸಗೊಬ್ಬರ ಕೊರತೆ ಕುರಿತ ಚರ್ಚೆ ವೇಳೆ ಆಡಳಿತ ಮತ್ತು ವಿಪಕ್ಷದ ನಡುವೆ ತಾರಕಕ್ಕೇರಿದ ಗದ್ದಲ ಮತ್ತು ಸಚಿವ ಕೆ.ಜೆ. ಜಾರ್ಜ್‌ ಅವರ ಮೇಲೆ ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಆರೋಪದ ಕುರಿತು ಮಾತನಾಡಿದ ಸಿದ್ದರಾಮಯ್ಯ, ವಿರೋಧ ಪಕ್ಷ ನಮ್ಮನ್ನು ಟೀಕಿಸಬಾರದು, ಆರೋಪಿಸಬಾರದು ಎಂದು ನಾನು ಯಾವತ್ತೂ ಹೇಳುವುದಿಲ್ಲ. ಆದರೆ, ಟೀಕೆ ಮಾಡುವಾಗ ಬಳಸುವ ಪದಗಳ ಬಗ್ಗೆ ಎಚ್ಚರದಿಂದಿರಬೇಕು. ನಮ್ಮನ್ನು ಜನ, ವಿದ್ಯಾರ್ಥಿಗಳು ಗಮನಿಸುತ್ತಿರುತ್ತಾರೆ. ನಮ್ಮ ನಡವಳಿಕೆಯಿಂದ ಹೊಸ ಶಾಸಕರಿಗೆ ನಾವೆಲ್ಲ ಹಿರಿಯರು ಮಾದರಿಯಾಗಿರಬೇಕು. ಹೀಗಾಗಿ ವಿರೋಧ ಪಕ್ಷದ ಶಾಸಕರು ತಾವು ಮಾತನಾಡಿದ್ದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಮಾತನಾಡುವುದನ್ನು ಸಹಿಸಲಾಗದು:

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕೆ.ಜೆ.ಜಾರ್ಜ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ನಾನು ತಾಲೂಕು ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅವರಿಗೆ ವಿಪಕ್ಷ ಶಾಸಕರು ಬಳಸಿದ ಪದಗಳು ನನಗೆ ಸಹ್ಯವಾಗಲಿಲ್ಲ. ಪ್ರತಿಯೊಬ್ಬರೂ ಸ್ವಾಭಿಮಾನ, ಆತ್ಮಗೌರಕ್ಕೆ ಧಕ್ಕೆಯಾದಾಗ ಸಹಿಸುವುದಿಲ್ಲ. ಅದಕ್ಕಾಗಿ ನಾನು ಆವೇಶದಿಂದ ಮಾತನಾಡಿದ್ದೇನೆ. ನನ್ನ ಭಾಷೆಯಲ್ಲಿ ತಪ್ಪಿರಬಹುದು. ಹಣ, ಹಿನ್ನೆಲೆಯಿದ್ದರೆ ಮಾತ್ರ ಶಾಸಕರಾಗಲು ಸಾಧ್ಯವಿಲ್ಲ. ಇಲ್ಲಿಗೆ ಬರುವುದೇ ನಮ್ಮೆಲ್ಲರ ಭಾಗ್ಯ. ಹೀಗಾಗಿ ಯಾರೇ ತಪ್ಪು ಮಾಡಿದ್ದರೂ ಸಭಾಧ್ಯಕ್ಷರು ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಿ. ಪ್ರತಿ ಶಾಸಕರ ಆತ್ಮಗೌರವ ರಕ್ಷಿಸಿ ಎಂದರು.

ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಮಾತನಾಡಿ, ಯಾರೇ ಆದರೂ ಸದನದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಆದರೂ, ಆಡಳಿತ ಪಕ್ಷದ ಸದಸ್ಯರು ಸಂಯಮ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌