ಶಕ್ತಿ ಇಲ್ಲದ ಉಗ್ರ ನಿಗ್ರಹ ದಳ! ಎಟಿಎಸ್‌ಗೆ ಸ್ವತಂತ್ರ ಸಿಬ್ಬಂದಿ ಕೊಡದ ಸರ್ಕಾರ

By Kannadaprabha NewsFirst Published Jan 15, 2020, 7:52 AM IST
Highlights

ಸಿಸಿಬಿ ವಿಭಾಗದಲ್ಲಿ ರಚಿಸಲಾದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಈಗ ಕೇವಲ ಹೆಸರಿಗೆ ಮಾತ್ರವಷ್ಟೆಎಂಬ ಸ್ಥಿತಿಯಲ್ಲಿದೆ. ದಳ ರಚನೆಗೊಂಡು ತಿಂಗಳು ಕಳೆದರೂ ಸಹ ಅಧಿಕಾರಿ ಮತ್ತು ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಅಲ್ಲದೆ ಶಸ್ತ್ರ ಸಜ್ಜಿತ ಶಂಕಿತರ ಉಗ್ರರ ವಿರುದ್ಧ ಸೆಣಸಾಡುವ ಪೊಲೀಸರಿಗೆ ಕನಿಷ್ಠ ಪಕ್ಷ ಗುಂಡು ನಿರೋಧಕ ಜಾಕೆಟ್‌ಗಳನ್ನೂ ಸಹ ಒದಗಿಸಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.
 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ಜ.15]:  ರಾಜಧಾನಿಯಲ್ಲಿ ಹರಡಿರುವ ಭಯೋತ್ಪಾದಕ ಸಂಘಟನೆಗಳ ಪತ್ತೆಗೆ ಸಿಸಿಬಿ ವಿಭಾಗದಲ್ಲಿ ರಚಿಸಲಾದ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ಈಗ ಕೇವಲ ಹೆಸರಿಗೆ ಮಾತ್ರವಷ್ಟೆಎಂಬ ಸ್ಥಿತಿಯಲ್ಲಿದೆ.

ದಳ ರಚನೆಗೊಂಡು ತಿಂಗಳು ಕಳೆದರೂ ಸಹ ಅಧಿಕಾರಿ ಮತ್ತು ಸಿಬ್ಬಂದಿ ನೇಮಕಾತಿ ನಡೆದಿಲ್ಲ. ಅಲ್ಲದೆ ಶಸ್ತ್ರ ಸಜ್ಜಿತ ಶಂಕಿತರ ಉಗ್ರರ ವಿರುದ್ಧ ಸೆಣಸಾಡುವ ಪೊಲೀಸರಿಗೆ ಕನಿಷ್ಠ ಪಕ್ಷ ಗುಂಡು ನಿರೋಧಕ ಜಾಕೆಟ್‌ಗಳನ್ನೂ ಸಹ ಒದಗಿಸಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ವಾರದ ಹಿಂದೆ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಜಿಹಾದಿ ಗ್ಯಾಂಗ್‌ನ ಮೂವರು ಶಂಕಿತ ಉಗ್ರರ ಬಳಿ ಮೂರು ರಿವಾಲ್ವಾರ್‌ಗಳು ಹಾಗೂ 26 ಜೀವಂತ ಗುಂಡುಗಳು ಪತ್ತೆಯಾಗಿದ್ದವು. ಈ ಶಂಕಿತರ ಬಂಧಿಸಲು ತೆರಳಿದ್ದ ಸಿಸಿಬಿ ಪೊಲೀಸರು ಗುಂಡು ನಿರೋಧಕ ಜಾಕೆಟ್‌ ಧರಿಸಿರಲಿಲ್ಲ. ಜೀವದ ಹಂಗು ತೊರೆದು ಪೊಲೀಸರ ತಂಡವು ದಾಳಿ ನಡೆಸಿತ್ತು.

ಇತ್ತೀಚೆಗೆ ಬೆಂಗಳೂರು ಹಾಗೂ ನೆರೆಹೊರೆ ಜಿಲ್ಲೆಗಳಲ್ಲಿ ಶಂಕಿತರ ಉಗ್ರರ ಬಂಧನ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ, ಮುಂಬೈ, ದೆಹಲಿ, ಹೈದರಾಬಾದ್‌ ಹಾಗೂ ಚೆನ್ನೈ ಮಾದರಿಯಲ್ಲೇ ಬೆಂಗಳೂರಿಗೆ ಸಿಮೀತವಾಗಿ ಭಯೋತ್ಪಾದಕ ನಿಗ್ರಹ ದಳ ರಚಿಸುವುದಾಗಿ ಹೇಳಿತ್ತು. ನಂತರ ಮುಂಬೈ ಹಾಗೂ ದೆಹಲಿಗೆ ತೆರಳಿದ ಅಧಿಕಾರಿಗಳು, ಅಲ್ಲಿನ ಎಟಿಎಸ್‌ ಮಾದರಿಯಲ್ಲೇ ಬೆಂಗಳೂರಿನಲ್ಲಿ ರಚನೆಗೆ ಶಿಫಾರಸು ಮಾಡಿದ್ದರು. ಕೊನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಎಟಿಎಸ್‌ಗೆ ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು.

ಹೆಸರಿಗಷ್ಟೇ ಎಟಿಎಸ್‌:

ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧೀನದಲ್ಲಿ ಎಟಿಎಸ್‌ ರಚಿಸಲಾಯಿತು. ಜಂಟಿ ಪೊಲೀಸ್‌ ಆಯುಕ್ತ ಹಾಗೂ ಸಿಸಿಬಿ ಡಿಸಿಪಿ (1) ಅವರಿಗೆ ದಳದ ಉಸ್ತುವಾರಿ ವಹಿಸಲಾಯಿತು. ಈ ಹಿರಿಯ ಅಧಿಕಾರಿಗಳ ಹೊರತುಪಡಿಸಿದರೆ ಎಟಿಎಸ್‌ಗೆ ಸ್ವತಂತ್ರವಾದ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಸಿಸಿಬಿಯ ಸಂಘಟಿತ ಅಪರಾಧ ದಳ (ಓಸಿಡಬ್ಲ್ಯು) ಎಸಿಪಿ ನಾಗರಾಜ್‌ ಅವರಿಗೆ ಎಟಿಎಸ್‌ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ. ಇನ್ನು ಓಸಿಡಬ್ಲ್ಯುದಲ್ಲಿದ್ದ ಐವರು ಇನ್‌ಸ್ಪೆಕ್ಟರ್‌ಗಳನ್ನೇ ಎಟಿಎಸ್‌ ಕೆಲಸಕ್ಕೂ ಬಳಸಿಕೊಳ್ಳಲಾಗುತ್ತದೆ. ರೌಡಿಗಳ ಮೇಲೆ ನಿಗಾವಹಿಸುವ ಓಸಿಡಬ್ಲ್ಯುಗೆ ಅದರ ವ್ಯಾಪ್ತಿಯ ಕೆಲಸಗಳೇ ಸಾಕಷ್ಟಿರುತ್ತದೆ. ಅಂತಹದರಲ್ಲಿ ಎಟಿಎಸ್‌ ಜವಾಬ್ದಾರಿಗೆ ಕೊಡಲಾಗಿದೆ.

ಎಟಿಎಸ್‌ ಬಣ್ಣ ಬಯಲು:

ತಮಿಳುನಾಡು ಪೊಲೀಸರು ಹಾಗೂ ಕೇಂದ್ರ ಗುಪ್ತದಳ ಅಧಿಕಾರಿಗಳು, ಬೆಂಗಳೂರಿನಲ್ಲಿ ಜಿಹಾದಿ ಗ್ಯಾಂಗ್‌ ಬೆನ್ನುಹತ್ತಿ ಬಂದಿದ್ದರು. ಆದರೆ ತಿಂಗಳಿಂದ ಜಿಹಾದಿಗಳು ನಗರದಲ್ಲಿ ಸಂಘಟನೆ ಚಟುವಟಿಕೆಗೆ ನಡೆಸಿದ್ದರೂ ರಾಜಧಾನಿಯ ಎಟಿಎಸ್‌ಗೆ ಮಾಹಿತಿ ಇರಲಿಲ್ಲ ಎಂಬುದು ವಿಪರ್ಯಾಸ ಸಂಗತಿ.

ಎನ್‌ಕೌಂಟರ್ ದಯಾನಾಯಕ್ ಮುಂಬೈ ಎಟಿಎಸ್‌ಗೆ ವರ್ಗ..

ಈ ಹಿಂದೆ ನಗರ ಹೊರವಲಯದ ಬಾಣವಾರದಲ್ಲಿ ಬಾಂಗ್ಲಾದೇಶ ನಿಷೇಧಿತ ಜೆಎಂಬಿ ಶಂಕಿತರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದಾಗಲೂ ಬೆಂಗಳೂರು ಪೊಲೀಸರು ಮೌನವಾಗಿದ್ದರು. ಪದೇ ಪದೇ ಕೇಂದ್ರ ಹಾಗೂ ಹೊರ ರಾಜ್ಯಗಳ ತನಿಖಾ ಸಂಸ್ಥೆಗಳು, ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬೇಟೆ ಆಡುತ್ತಿದ್ದರೂ ರಾಜ್ಯ ಪೊಲೀಸರು ಜಾಗೃತರಾಗುತ್ತಿಲ್ಲ. ಇದಕ್ಕಾಗಿ ಎಟಿಎಸ್‌ ರಚಿಸಿದರೂ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸದೆ ಮತ್ತೆ ನಿರ್ಲಕ್ಷ್ಯತನ ತೋರಿಸಿದೆ ಎಂಬ ಬೇಸರದ ಮಾತುಗಳು ಇಲಾಖೆಯಲ್ಲಿ ಕೇಳಿ ಬಂದಿವೆ.

 ಅಧಿಕಾರಿಗಳ ಪಾಲಿಗೆ ಎಟಿಎಸ್‌ ಒಲ್ಲದ ಶಿಶು

ಹದಿನೈದು ದಿನಗಳ ಅವಧಿಯಲ್ಲಿ ಸಿಸಿಬಿಗೆ ಮೂವರು ಎಸಿಪಿ ಹಾಗೂ ಐವರು ಇನ್‌ಸ್ಪೆಕ್ಟರ್‌ಗಳನ್ನು ಸರ್ಕಾರ ನೇಮಿಸಿದೆ. ಆದರೆ ಎಟಿಎಸ್‌ಗೆ ಮಾತ್ರ ಯಾರನ್ನು ನಿಯೋಜಿಸಿಲ್ಲ. ಇನ್ನು ಸಿಸಿಬಿಯಲ್ಲಿ ಫಲವ್ತತಾದ ಹುದ್ದೆ ಬಯಸುವ ಕೆಲ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ಎಟಿಎಸ್‌ ಒಲ್ಲದ ಮಗುವಾಗಿದೆ ಎನ್ನಲಾಗುತ್ತಿದೆ.

click me!