
ಬೆಂಗಳೂರು [ಜ.15]: ವಸತಿ ಯೋಜನೆಗಳ ಫಲಾನುಭವಿ ಆಯ್ಕೆಗೆ ಆಧಾರ್ ಕಾರ್ಡ್ ಜತೆಗೆ ಇದೀಗ ಬಿಪಿಎಲ್ ಕಾರ್ಡ್ ಜೋಡಣೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಸತಿ ಸಚಿವ ವಿ. ಸೋಮಣ್ಣ ಅವರು, ವಸತಿ ಯೋಜನೆಗಳಿಗೆ ಫಲಾನುಭವಿ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಈ ಪ್ರಕ್ರಿಯೆಗೆ ಪಾರದರ್ಶಕತೆ ತರಲು ತೀರ್ಮಾನಿಸಲಾಗಿದೆ. ಹಾಲಿ ಇರುವ ಯೋಜನೆಗಳು ಪೂರ್ಣಗೊಂಡ ನಂತರ ಹೊಸ ವಸತಿ ಯೋಜನೆಗಳನ್ನು ಜಾರಿಗೊಳಿಸುವಾಗ ಈ ನೀತಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನು ಹೊಸ ಯೋಜನೆಗಳಿಗೆ ಫಲಾನುಭವಿ ಆಯ್ಕೆ ಮಾಡುವಾಗ ನಿರ್ಮಾಣವಾಗುವ ಎಲ್ಲ ಮನೆಗಳಿಗೂ ಜಿಪಿಎಸ್ ತಂತ್ರಾಂಶ ಬಳಕೆ ಕಡ್ಡಾಯಗೊಳಿಸಲಾಗುವುದು ಎಂದರು.
ರಾಜ್ಯದ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಸಾಕಷ್ಟುಅಕ್ರಮ ನಡೆದಿರುವ ದೂರುಗಳಿವೆ. ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗಿರುವ 49,691 ಫಲಾನುಭವಿಗಳ ಪರಿಶೀಲನೆಯನ್ನು ನಡೆಸಿದಾಗ ಮನೆಗಳ 1296 ಅನರ್ಹರು ಆಯ್ಕೆಯಾಗಿದ್ದು ಪತ್ತೆಯಾಗಿತ್ತು. ಗ್ರಾಮೀಣ ಭಾಗದಲ್ಲಿ ಒಂದೇ ಮನೆಯ ನಾಲ್ಕು ದಿಕ್ಕಿನಿಂದ ಒಂದೊಂದು ಪ್ರತ್ಯೇಕ ಫೊಟೋ ತೆಗೆದು ನಾಲ್ಕು ಬಾರಿ ಸಹಾಯಧನ ಪಡೆದಿರುವ ದೂರುಗಳೂ ಬಂದಿದ್ದವು. ಹೀಗಾಗಿ ಸುಧಾರಣಾ ಕ್ರಮಗಳನ್ನು ತರುವ ಅಗತ್ಯವಿದೆ ಎಂದು ಅವರು ವಿವರಿಸಿದರು.
ದೇಶದ 125 ಕೋಟಿ ಜನರ ಬಳಿ ಆಧಾರ್...
3 ವರ್ಷದಲ್ಲಿ 6 ಲಕ್ಷ ಮನೆ ಗುರಿ:
ಗ್ರಾಮೀಣ ಭಾಗದ ವಸತಿಹೀನರಿಗಾಗಿ ಮುಂದಿನ ಮೂರು ವರ್ಷಗಳಲ್ಲಿ 6 ಲಕ್ಷ ಮನೆಗಳನ್ನು ಕಟ್ಟಿಕೊಡುವ ಗುರಿಯಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 4.40 ಲಕ್ಷ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 3500 ಕೋಟಿ ರು. ಅನುದಾನ ಬೇಕಿದ್ದು, ಮುಖ್ಯಮಂತ್ರಿಯವರು ಅನುದಾನ ಮಂಜೂರು ಮಾಡುವಂತೆ ಹಣಕಾಸು ಇಲಾಖೆಗೆ ಸೂಚಿಸಿದ್ದಾರೆ. ಹಣ ಬಿಡುಗಡೆಯಾಗುತ್ತಿದ್ದಂತೆಯೇ ಕಾಮಗಾರಿ ವೇಗ ಪಡೆದುಕೊಳ್ಳಲಿದ್ದು, ಜೂನ್ ಮಾಸಾಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ ಎಂದು ತಿಳಿಸಿದರು.
ಖಂಡ್ರೆಗೆ ತಿರುಗೇಟು:
ಹಿಂದಿನ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಮೋದಿಸಲಾಗಿದ್ದ ವಸತಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಆರೋಪಕ್ಕೆ ತಿರುಗೇಟು ನೀಡಿದ ಸೋಮಣ್ಣ, ಬಾಲ್ಕಿ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳ ಅರ್ಹತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ಮುಗಿದ ಬಳಿಕ ಪ್ರತ್ಯೇಕ ವರದಿಯನ್ನು ಖಂಡ್ರೆ ಅವರಿಗೆ ಕಳುಹಿಸಿಕೊಡುತ್ತೇನೆ. ತಪ್ಪಿದ್ದರೆ ಸರಿಪಡಿಸಲಿ ಎಂದು ಹೇಳಿದರು.
ಎನ್‌ಜಿಒಗಳಿಂದ ಹಣ ದುರುಪಯೋಗ
ಕೇಂದ್ರ ಸರ್ಕಾರದ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಯೋಜನೆಯಡಿ ಕೆಲ ಸ್ವಯಂಸೇವಾ ಸಂಸ್ಥೆಗಳವರು ಕೊಳೆಗೇರಿ ನಿವಾಸಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಅರಿವು ಮೂಡಿಸುವ ಹೆಸರಲ್ಲಿ ವರ್ಷಕ್ಕೆ ಐದು ಕೋಟಿ ರು. ಬಿಲ್ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಐಇಸಿ ಯೋಜನೆಯಡಿ ಸಾಧನಾ ಸಂಸ್ಥೆ ಸೇರಿದಂತೆ ಏಳೆಂಟು ಸಂಸ್ಥೆಗಳು ಕೊಳಗೇರಿ ನಿವಾಸಿಗಳಲ್ಲಿ ಜಾಗೃತಿ ಮೂಡಿಸಿ ಮನಃಪರಿಸವರ್ತಿಸುವ ಹೆಸರಲ್ಲಿ ವಾರ್ಷಿಕ ಸುಮಾರು ಐದು ಕೋಟಿ ರು. ವರೆಗೆ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ. ಆದರೆ, ಯಾವ ಜಾಗೃತಿ, ಮನಃಪರಿವರ್ತಿಸುವ ಕೆಲಸವನ್ನೂ ಈ ಎನ್‌ಜಿಓಗಳು ಮಾಡಿಲ್ಲ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ