
ಬೆಂಗಳೂರು (ಜು.06): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವ ಪರಿಣಾಮ ಸೋಂಕಿತರಿಗೆ ಮೀಸಲಿಟ್ಟಿದ್ದ ಶೇ. 88ರಷ್ಟುಹಾಸಿಗೆಗಳು ಖಾಲಿ ಇವೆ.
ಮೇ 18ರಿಂದ ಹೊಸ ಸೋಂಕಿನ ಪ್ರಕರಣ ಕಡಿಮೆಯಾಗುವ ಜೊತೆಗೆ ಗುಣಮುಖರ ಸಂಖ್ಯೆ ಹೆಚ್ಚಾಗುವುದು ಮುಂದುವರಿದಿದೆ. ಒಂದು ಸಂದರ್ಭದಲ್ಲಿ 6 ಲಕ್ಷದಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ಈಗ 40 ಸಾವಿರದ ಸಮೀಪಕ್ಕೆ ಕುಸಿದಿದೆ.
ಕೊರೋನಾ: ಎರಡೂ ಅಲೆಯಿಂದ ಪಾರಾದವರಿಗೆ 3ನೇ ಅಲೆ ಕಂಟಕ
ಸೋಮವಾರ 44,846 ಸಕ್ರಿಯ ಪ್ರಕರಣಗಳಿದ್ದವು. ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 914 ಮಂದಿ ಸಹಿತ 5,349 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 28,556 ಮಂದಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.
42 ಸಾವಿರ ಬೆಡ್ ಇದ್ದವು: ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 42,514 ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿತ್ತು. ಸದ್ಯ ಮೀಸಲಿಟ್ಟಿರುವ ಹಾಸಿಗೆಗಳಲ್ಲಿ ಶೇ.88ರಷ್ಟುಖಾಲಿ ಇವೆ. ಅದೇ ರೀತಿ ಕೋವಿಡ್ ಆರೈಕೆ ಕೇಂದ್ರದಲ್ಲಿ 71,525 ಹಾಸಿಗೆ ಇದ್ದು 42,969 ಹಾಸಿಗೆ ಖಾಲಿ ಇದೆ. ಆರೈಕೆ ಕೇಂದ್ರದಲ್ಲಿ ಶೇ. 60ರಷ್ಟುಹಾಸಿಗೆ ಖಾಲಿ ಇವೆ. ದಿನಕ್ಕೆ 25 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದ ಬೆಂಗಳೂರು ನಗರದಲ್ಲಿಯೂ ಆಸ್ಪತ್ರೆ ಮತ್ತು ಆರೈಕೆ ಕೇಂದ್ರದಲ್ಲಿ ಸದ್ಯ ಸಾಕಷ್ಟುಬೆಡ್‌ಗಳು ಖಾಲಿ ಇವೆ.
ಕೋವಿಡ್ ಪಾಸಿಟಿವಿಟಿ ದರ ಕುಸಿದರೂ ನಿಲ್ತಿಲ್ಲ ಸೋಂಕಿತರ ಸಾವು..!
ಹಾಸಿಗೆ ಖಾಲಿ ಉಳಿದಿರುವುದರಿಂದ ಖಾಸಗಿ ಆಸ್ಪತ್ರೆಗಳು ಈಗಾಗಲೇ ಹಾಸಿಗೆಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರದ ಪರಿಶೀಲನಾ ಹಂತದಲ್ಲಿದೆ.
ಏಪ್ರಿಲ್ 15 ರಿಂದ ಮೇ 15ರ ಅವಧಿಯಲ್ಲಿ ಇಡೀ ರಾಜ್ಯ ಕೋವಿಡ್‌ನ ಕಬಂಧ ಬಾಹುಗಳಲ್ಲಿ ಸಿಲುಕಿತ್ತು. ಈ ಸಂದರ್ಭದಲ್ಲಿ ಪ್ರತಿ ದಿನ 40 ರಿಂದ 50 ಸಾವಿರ ಪ್ರಕರಣಗಳು, ನೂರಾರು ಸಾವು ದಾಖಲಾಗುವುದು ಸಾಮಾನ್ಯವಾಗಿತ್ತು. ಆಗ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಆರೈಕೆ ಕೇಂದ್ರ ಆರಂಭಿಸಿತ್ತು. ಅನೇಕ ಖಾಸಗಿ ಆಸ್ಪತ್ರೆಗಳು ಸಹ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿತ್ತು.
ಹಾಸಿಗೆ ಬಿಡುಗಡೆ ಮಾಡಿ
ಕೋವಿಡ್ ರೋಗಿಗಳನ್ನು ಈಗ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡುತ್ತಿಲ್ಲ. ಆದರೆ ಕೋವಿಡ್ ರೋಗಿಗಳಿಗೆಂದು ಮೀಸಲಿಟ್ಟಿದ್ದ ಹಾಸಿಗೆಗಳನ್ನು ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಇನ್ನೂ ಆದೇಶ ಹೊರಡಿಸಿಲ್ಲ. ಆದರೂ ನಾವು ಕೋವಿಡೇತರ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ಕೋವಿಡ್ ಕಾರಣದಿಂದ ಅನೇಕ ಶಸ್ತ್ರಚಿಕಿತ್ಸೆಗಳು ಬಾಕಿ ಉಳಿದಿವೆ. ಈ ಶಸ್ತ್ರ ಚಿಕಿತ್ಸೆಗಳನ್ನು ಆದ್ಯತೆಯ ಮೇರೆಗೆ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಮೀಸಲಿಟ್ಟುಕೊಂಡ ಹಾಸಿಗೆಗಳ ಬಿಡುಗಡೆ ಸಂಬಂಧ ಸರ್ಕಾರದ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಸರ್ಕಾರ ಆದೇಶ ತಡ ಮಾಡಿದಷ್ಟೂಬೇರೆ ರೋಗಿಗಳಿಗೆ ತೊಂದರೆ ಆಗುತ್ತದೆ.
- ಡಾ. ಎಚ್.ಎಂ. ಪ್ರಸನ್ನ, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಸ್‌ಗಳ ಒಕ್ಕೂಟದ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ