ಬಸ್‌, ಮಾರುಕಟ್ಟೆ, ಅಂಗಡಿಗಳಲ್ಲಿ ಜನವೋ ಜನ! ಹೆಚ್ಚಿದ ಆತಂಕ

By Kannadaprabha NewsFirst Published Jul 6, 2021, 7:50 AM IST
Highlights
  • ಕೊರೋನಾ 2ನೇ ಅಲೆ ಅಬ್ಬರ ಬಹುತೇಕ ಕಡಿಮೆ
  • ರಾಜ್ಯಾದ್ಯಂತ ಸೋಮವಾರದಿಂದ ಅನ್‌ಲಾಕ್‌ 3.0 ಜಾರಿ
  • ಜನಜೀವನ ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟು, ಆರ್ಥಿಕ ಚಟುವಟಿಕೆ ಆರಂಭ

 ಬೆಂಗಳೂರು (ಜು.06):  ಕೊರೋನಾ 2ನೇ ಅಲೆ ಅಬ್ಬರ ಬಹುತೇಕ ಕಡಿಮೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಸೋಮವಾರದಿಂದ ಅನ್‌ಲಾಕ್‌ 3.0 ಜಾರಿಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿದೆ. ವ್ಯಾಪಾರ ವಹಿವಾಟು, ಆರ್ಥಿಕ ಚಟುವಟಿಕೆಗಳು ಎರಡು ತಿಂಗಳ ಬಳಿಕ ನಿಧಾನವಾಗಿ ಗರಿಗೆದರಲು ಆರಂಭಿಸಿದ್ದು, ಎಲ್ಲೆಲ್ಲೂ ಜನದಟ್ಟಣೆ ಕಂಡುಬಂದಿದೆ.

ಪಬ್‌, ಶಾಲೆ, ಸಿನಿಮಾ ಮಂದಿರಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಬಹುತೇಕ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಈಗ ಪೂರ್ಣ ಪ್ರಮಾಣದಲ್ಲಿ ಅವಕಾಶ ದೊರೆತಿದೆ. ಈವರೆಗೆ ಬಂದ್‌ ಆಗಿದ್ದ ದೇಗುಲಗಳು, ಮಾಲ್‌ಗಳು ಬಾಗಿಲು ತೆರೆದಿವೆ. ಸರ್ಕಾರಿ ಬಸ್‌ಗಳಲ್ಲದೆ ಖಾಸಗಿ ಬಸ್‌ಗಳು ಕೂಡ ಶೇ.100ರಷ್ಟುಪ್ರಯಾಣಿಕರೊಂದಿಗೆ ರಸ್ತೆಗಿಳಿಯಲು ಅವಕಾಶ ಸಿಕ್ಕಿದೆ. ಬೆಳಗ್ಗೆ 6ರಿಂದ ರಾತ್ರಿವರೆಗೂ ಅಂಗಡಿ-ಮುಂಗಟ್ಟುಗಳು ಬಾಗಿಲು ತೆರೆಯಲು ಅವಕಾಶ ನೀಡಿದ್ದರಿಂದ ಜನಜೀವನ ಹಿಂದಿನ ಸ್ಥಿತಿಗೆ ಮರಳಿದೆ. ದಾವಣಗೆರೆ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು, ಬೆಳಗಾವಿ, ಮೈಸೂರು ಸೇರಿ ಬಹುತೇಕ ಪ್ರಮುಖ ನಗರಗಳ ಪ್ರಮುಖ ರಸ್ತೆಗಳಲ್ಲಿ ಹಿಂದಿನಂತೆ ಟ್ರಾಫಿಕ್‌ ಜಾಮ್‌ ಪರಿಸ್ಥಿತಿ ನಿಮಾಣವಾಗಿತ್ತು. ಮಾರುಕಟ್ಟೆಯಲ್ಲೂ ಜನಜಂಗುಳಿ ಕಂಡುಬಂತು.

ಹೆಚ್ಚಿದ ಆತಂಕ:  ರಾಜ್ಯ ಅನ್‌ಲಾಕ್‌ ಆಗುತ್ತಿದ್ದಂತೆ ಕೊರೋನಾತಂಕ ಮರೆತು ಜನ ಓಡಾಡುತ್ತಿರುವುದು, ವ್ಯವಹಾರ ನಡೆಸುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕೊಪ್ಪಳ, ಬೆಳಗಾವಿ, ದಾವಣಗೆರೆ, ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಬಸ್‌ ಪ್ರಯಾಣಿಕರು ಕೊರೋನಾ ನಿಯಮಾವಳಿ ಗಾಳಿಗೆ ತೂರಿದ್ದು, ಮಾರುಕಟ್ಟೆಗಳಲ್ಲಿ ಜನ ಸಾಮಾಜಿಕ ಅಂತರ ಮರೆತು, ಮಾಸ್ಕ್‌ ಧರಿಸದೆ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದು ಮತ್ತೆ ಸೋಂಕು ಹೆಚ್ಚುವ ಭೀತಿಗೆ ಕಾರಣವಾಯಿತು.

click me!