ಬೆಂಗಳೂರಿಂದ ತವರಿಗೆ ಮತ್ತಷ್ಜು ಜನರ ಗುಳೆ| ಕೊರೋನಾ, ಲಾಕ್‌ಡೌನ್ ಭೀತಿಯಿಂದ ವಲಸೆ| ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಜನರ ಗುಳೆ
ಬೆಂಗಳೂರು(ಜು.07): ರಾಜಧಾನಿಯಲ್ಲಿ ಕೊರೋನಾ ಸೋಂಕಿನ ವಿಪರೀತ ಹೆಚ್ಚಳದಿಂದ ಭಯಭೀತರಾಗಿರುವ ನೂರಾರು ಕುಟುಂಬಗಳು ಸಂಸಾರ ಸಮೇತ ನಗರದಿಂದ ತಮ್ಮ ಸ್ವಂತ ಊರಿಗೆ ಗುಳೆ ಹೋಗುವ ಪ್ರಕ್ರಿಯೆ ಸೋಮವಾರ ಕೂಡ ಮುಂದುವರೆದಿದೆ. ಇದರಿಂದ ನಗರದಿಂದ ಹೊರ ಹೋಗುವ ಎಲ್ಲಾ ಹೆದ್ದಾರಿಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ನಿರ್ಮಾಣವಾಗಿತ್ತು.
ಲಾಕ್‌ಡೌನ್, ಸೋಂಕಿನ ಭೀತಿಯಿಂದ ಶುಕ್ರವಾರದಿಂದಲೇ ಜನರು ನಗರದಿಂದ ಗುಳೆ ಆರಂಭಿಸಿದ್ದರು. ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಿದ್ದರಿಂದ ಸಂಚಾರವಿರಲಿಲ್ಲ. ಸೋಮವಾರ ಬೆಳಗ್ಗೆ ಲಾಕ್‌ಡೌನ್ ಗಡುವು ಮುಗಿದ ಕೂಡಲೇ ನೂರಾರು ಕುಟುಂಬಗಳು ಸಾಮಾನು ಸರಂಜಾಮು ಸಮೇತ ನಗರದಿಂದ ಹೊರ ಹೊರಡಲು ಆರಂಭಿಸಿದವು.
undefined
ಕೊರೋನಾ ಅಟ್ಟಹಾಸ: ರಾಜ್ಯದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆ!
ಸೋಂಕು ನಿಯಂತ್ರಣಕ್ಕೆ ಸರ್ಕಾರ ಎಲ್ಲ ಕ್ರಮ ಕೈಗೊಂಡಿದ್ದು, ನಗರ ತೊರೆಯದಂತೆ ಸರ್ಕಾರ ಒಂದೆಡೆ ಮನವಿ ಮಾಡುತ್ತಿದೆ. ಆದರೆ ಕೆಲಸ ಇಲ್ಲದೆ, ಮನೆ ಬಾಡಿಗೆ ಕಟ್ಟಲೂ ಹಣವಿಲ್ಲದೆ ಪರದಾಡುತ್ತಿರುವ ಜನ ಸರ್ಕಾರದ ಮಾತಿಗೆ ಕಿವಿಗೊಡದೆ ಸಿಕ್ಕಸಿಕ್ಕ ವಾಹನಗಳಲ್ಲಿ ಕುಟುಂಬ ಸಮೇತ ಸರಕು ಸರಂಜಾಮು ತುಂಬಿಕೊಂಡು ಹಳ್ಳಿಗಳಿಗೆ ತೆರಳಿದರು. ಹೀಗಾಗಿ ಬೆಂಗಳೂರು-ತುಮಕೂರು, ಬೆಂಗಳೂರು-ಬಳ್ಳಾರಿ, ಬೆಂಗಳೂರು-ಮೈಸೂರು, ಬೆಂಗಳೂರು-ಹೊಸೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿತ್ತು. ಟೋಲ್ ಕೇಂದ್ರಗಳ ಬಳಿ ಸಂಚಾರ ದಟ್ಟಣೆ ಉಂಟಾಗಿ ಕಿಲೋ ಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿನಿಂತಿದ್ದವು.
‘ಕಷ್ಟವೋ-ಸುಖವೋ ಊರಲ್ಲೇ ಜೀವನ’
ಬೆಂಗಳೂರು: ‘ಕಳೆದ ಎಂಟು ವರ್ಷಗಳಿಂದ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಿಕೊಂಡು ಬದುಕು ಕಟ್ಟಿಕೊಂಡಿದ್ದೆ. ಈ ಲಾಕ್‌ಡೌನ್‌ನಿಂದ ದುಡಿಮೆ ಇಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದೆ. ಸದ್ಯಕ್ಕೆ ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ದುಡಿಮೆ ಇಲ್ಲದೆ ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಸಾಕುವುದು ಬಹಳ ಕಷ್ಟ. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಸಂಸಾರ ಸಮೇತ ನಮ್ಮೂರಿಗೆ ಹೊರಟ್ಟಿದ್ದೇನೆ. ಕಷ್ಟವೋ ಸುಖವೋ ಅಲ್ಲಿಯೇ ಕೈಲಾದ ಕೆಲಸ ಮಾಡಿಕೊಂಡು ಜೀವನ ಮಾಡುತ್ತೇವೆ’ ಎಂದು ಚಿತ್ರದುರ್ಗ ಮೂಲದ ವಿಶ್ವನಾಥ್ ಬೇಸರದಿಂದ ನುಡಿದರು.
ಕಣ್ಮುಂದೆ ಪತ್ನಿ ಜೀವ ಬಿಟ್ಟರೂ ಅಸಹಾಯನಾಗಿ ನಿಂತಿದ್ದೆ!
‘ಐದು ವರ್ಷದ ಹಿಂದೆ ಹುಟ್ಟಿದ ಊರು ಬಿಟ್ಟು ನಾಲ್ಕು ಕಾಸು ಸಂಪಾದಿಸುವ ಆಸೆಯಿಂದ ನಗರಕ್ಕೆ ಬಂದಿದ್ದೆವು. ಪತ್ನಿ ಮನೆಗೆಲಸ ಮಾಡಿದರೆ, ನಾನು ಚಿಕ್ಕ ಹೋಟೆಲ್‌ವೊಂದರಲ್ಲಿ ಸಫ್ಲೈಯರ್ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದೆವು. ಈ ಕೊರೋನಾ ಸೋಂಕು ನಮ್ಮಂತಹ ಸಾವಿರಾರು ಜನ ಬದುಕು ಕಸಿದುಕೊಂಡಿದೆ. ಸದ್ಯ ದುಡಿಮೆ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಊರಿಗೆ ಹೋಗದೇ ಬೇರೆ ಮಾರ್ಗವೇ ಕಾಣುತ್ತಿಲ್ಲ. ಹೀಗಾಗಿ ಹೆಂಡತಿ-ಮಕ್ಕಳು ಕರೆದುಕೊಂಡು ಊರಿಗೆ ಹೊರಟ್ಟಿದ್ದೇನೆ’ ಎಂದು ಯಾದಗಿರಿ ಮೂಲದ ಗುಳ್ಳಪ್ಪ ನೋವಿನಿಂದ ಹೇಳಿದರು.
ನಮ್ಮೂರೇ ಸೇಫ್
ಈ ಕೊರೋನಾ ಸೋಂಕು ಹರಡುವ ಭೀತಿಯಲ್ಲಿ ಪ್ರತಿ ದಿನ ಕಳೆಯಬೇಕಾಗಿದೆ. ಹೆಂಡತಿ, ಮಕ್ಕಳು ತುಂಬಾ ಭಯಪಟ್ಟಿದ್ದಾರೆ. ಸ್ವಂತೂರಿಗೆ ಹೋಗೋಣವೆಂದು ಪದೇ ಪದೇ ಹೇಳುತ್ತಿದ್ದರು. ಯೋಚಿಸಿದಾಗ ನನಗೂ ಹಾಗೇ ಅನಿಸಿತು. ಸದ್ಯ ಪರಿಸ್ಥಿತಿಯಲ್ಲಿ ಬೆಂಗಳೂರಿಗಿಂತ ನಮ್ಮೂರೇ ಸುರಕ್ಷಿತ ಜಾಗ ಅನಿಸಿತು. ಹೀಗಾಗಿ ಊರಿನತ್ತ ಹೊರಟ್ಟಿದ್ದೇವೆ. ಸ್ವಲ್ಪ ಕೃಷಿ ಭೂಮಿ ಇದ್ದು ಅಲ್ಲೇ ಏನಾದರೂ ಮಾಡಿಕೊಂಡು ಇರುತ್ತೇವೆ
- ಪರಮೇಶ್ವರ, ಅರಸೀಕೆರೆ
ಕೊರೋನಾ ತಾಂಡವ: ದೇಶದಲ್ಲಿ 20 ಸಾವಿರ ಗಡಿ ದಾಟಿದ ಸಾವು!
ಬೆಂಗಳೂರಲ್ಲಿ ಆದಾಯವಿಲ್ಲ
ಕಟ್ಟಡಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದೆ. ಈ ಕೊರೋನಾ ಶುರುವಾದಾಗಿನಿಂದ ಸರಿಯಾಗಿ ಕೆಲಸವಿಲ್ಲ. ಮನೆ ಬಾಡಿಗೆ, ನಿರ್ವಹಣೆ ಖರ್ಚು ನಿಭಾಯಿಸಲು ಸಮಸ್ಯೆಯಾಗುತ್ತಿದೆ. ಊರಿನಲ್ಲಿ ಅಣ್ಣತಮ್ಮಂದಿರು ಬಂದು ಬಿಡು ಎಂದು ಕರೆಯುತ್ತಿದ್ದಾರೆ. ಹೀಗಾಗಿ ಮನೆ ಖಾಲಿ ಮಾಡಿಕೊಂಡು ಊರಿಗೆ ಹೋಗುತ್ತಿದ್ದೇವೆ
- ಮುನಿರಾಜು, ಪಿರಿಯಾಪಟ್ಟಣ
1 ದಿನವೂ ಕಳೆಯೋದು ಕಷ್ಟ
ಬೆಂಗಳೂರಿನಲ್ಲಿ ಈಗ ಒಂದೊಂದು ದಿನ ಕಳೆಯೋದು ಕಷ್ಟವಾಗಿದೆ. ರಸ್ತೆ ಬದಿ ಫಾಸ್ಟ್‌ಫುಡ್ ನಡೆಸಲು ಅನುಮತಿ ಇಲ್ಲ. ಅನುಮತಿ ನೀಡಿದರೂ ಮೊದಲಿನ ಹಾಗೆ ಗ್ರಾಹಕರು ಬರುವ ನಿರೀಕ್ಷೆಯೂ ಇಲ್ಲ. ದುಡಿಮೆ ಸರಿಯಾಗಿ ಇಲ್ಲದಿದ್ದರೆ ಬದುಕು ಸಾಗಿಸೋದು ಕಷ್ಟ. ಹೀಗಾಗಿ ಸದ್ಯಕ್ಕೆ ಊರುಗೆ ಹೋಗುತ್ತೇವೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇವೆ.
- ರವೀಶ್, ಕಡೂರು