
ಬೆಂಗಳೂರು (ಜು.17) : ವಿಧಾನಸೌಧದ ಕೂಗಳತೆಯ ದೂರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಂಗ್ಲ ಮಾಧ್ಯಮ ಹೆಣ್ಣುಮಕ್ಕಳ ಶಾಲೆಯೊಂದರ ವಿವಿಧ ಮಕ್ಕಳ ಪೋಷಕರೇ 8ನೇ ತರಗತಿಯಿಂದ ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಬೋಧನೆ ಬೇಡ ಎಂದು ಪ್ರಾಂಶುಪಾಲರ ಮೊರೆ ಹೋಗಿರುವ ಆತಂಕದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಲ್ಲದೆ, ಪೋಷಕರ ಮನವಿ ಮೇರೆಗೆ ಶಾಲೆಯವರು ಈ ವಿಷಯವನ್ನು ಶಿಕ್ಷಣ ಇಲಾಖೆಯ ಬಳಿ ಕೊಂಡೊಯ್ಯಲು ಚಿಂತನೆ ನಡೆಸಿದ್ದಾರೆ. ಸುಮಾರು 50 ಪೋಷಕರು ಈ ರೀತಿ ಆಗ್ರಹಿಸಿದ್ದು, ಅವರೆಲ್ಲರಿಂದ ಪತ್ರ ಬರೆಸಿ ಅವರ ಸಹಿ ಮಾಡಿಸಿಕೊಂಡು ಶಿಕ್ಷಣ ಇಲಾಖೆಯ ಗಮನಕ್ಕೆ ತರುವ ಲೆಕ್ಕಾಚಾರವನ್ನು ಶಾಲೆಯ ಪ್ರಾಂಶುಪಾಲರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಸಂಬಂಧ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದರೆ ಆ ಪ್ರಸ್ತಾವನೆಗೆ ಇಲಾಖೆಯಲ್ಲಿ ಮುಂದಿನ ಹಂತದ ಪ್ರಕ್ರಿಯೆಯನ್ನು ಇಲಾಖೆಯಲ್ಲೇ ಕೆಲಸ ಮಾಡುತ್ತಿರುವ ಈ ಶಾಲೆಯಲ್ಲಿ ಓದುತ್ತಿರುವ ಮಗುವಿನ ಪೋಷಕರೊಬ್ಬರು ನೋಡಿಕೊಳ್ಳಲಿದ್ದಾರೆ ಎಂದು ಪೋಷಕರ ನಡುವೆ ಚರ್ಚೆಗಳಾಗಿರುವುದು ಕಂಡುಬಂದಿದೆ.
ಖಾಸಗಿ ಶಾಲೆ ಶುಲ್ಕ ಕೇಸ್ ; ಶೀಘ್ರ ಇತ್ಯರ್ಥಕ್ಕೆ ಪೋಷಕರ ಆಗ್ರಹ!
ಪೋಷಕರ ಆಗ್ರಹಕ್ಕೆ ಪ್ರಾಂಶುಪಾಲರು ನಿಮ್ಮ ಪಾಲಕರ ಕಾಳಜಿ ನಮಗೆ ಅರ್ಥವಾಗಿದೆ. ಇದು ಸಾಧ್ಯವಾ ಎಂಬ ಬಗ್ಗೆ ಸ್ಪಷ್ಟತೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಅಗತ್ಯಬಿದ್ದರೆ ತಾವೆಲ್ಲರೂ ತಮ್ಮ ಬೇಡಿಕೆಯನ್ನು ಪತ್ರದ ಮೂಲಕ ಸಹಿ ಮಾಡಿ ನೀಡಬೇಕಾಗುತ್ತದೆ. ಅದನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಪೋಷಕರು-ಶಾಲೆ ವಿರುದ್ಧ ಆಕ್ರೋಶ:
ಪೋಷಕರು ಹಾಗೂ ಶಾಲೆಯವರ ಕನ್ನಡ ಭಾಷೆಯ ವಿರುದ್ಧದ ಈ ನಡೆಗೆ ಕನ್ನಡಿಗರು ಹಾಗೂ ಕನ್ನಡಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಟ್ವೀಟರ್‌ನಲ್ಲಿ ವ್ಯಕ್ತಿಯೊಬ್ಬರು ಶಾಲೆಯ ಹೆಸರು ಸಹಿತ ಈ ವಿಷಯ ಟ್ವೀಟ್ ಮಾಡಿದ್ದು, ಇದಕ್ಕೆ ಬಹುತೇಕ ಮಂದಿ ಶಾಲೆ ಹಾಗೂ ಪೋಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಶಾಲೆ ಹಾಗೂ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿರುವುದು ಕಂಡುಬಂದಿದೆ.
ಶಾಲೆಗಳಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ: ಸಚಿವ ಮಧು ಬಂಗಾರಪ್ಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ