ಕರ್ನಾಟಕದಲ್ಲಿ ಇನ್ನೂ 2 ದಿನ ಭಾರೀ ಮಳೆ..!

By Kannadaprabha NewsFirst Published Aug 9, 2022, 7:24 AM IST
Highlights

ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’, ಒಳನಾಡಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಿದ ಹವಾಮಾನ ಇಲಾಖೆ 

ಬೆಂಗಳೂರು(ಆ.09):  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಗಳವಾರ ಮತ್ತು ಬುಧವಾರ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಚ್‌’, ಒಳನಾಡಿನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ಘೋಷಿಸಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವು ಉಂಟಾಗಿದೆ. ಜತೆಗೆ ನೈಋುತ್ಯ ಮುಂಗಾರು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ. ಈ ಹಿನ್ನೆಲೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಸೇರಿ ಐದು ಜಿಲ್ಲೆಗಳಲ್ಲಿ ಎರಡು ದಿನ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 65 ಕಿ.ಮೀ. ತಲುಪುವ ಸಾಧ್ಯತೆಯಿದೆ. ಆದ್ದರಿಂದ, ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ವಿಪತ್ತು ನಿರ್ವಹಣಾ ಇಲಾಖೆ ಸೂಚಿಸಿದೆ.

ಭಾಗಮಂಡಲದಲ್ಲಿ 18 ಸೆಂ.ಮೀ. ಮಳೆ

ಕೊಡಗಿನ ಭಾಗಮಂಡಲ 18 ಸೆ.ಮೀ, ನಾಪೊಕ್ಲು 14 ಸೆ.ಮೀ, ಕ್ಯಾಸಲ್‌ ರಾಕ್‌ 13 ಸೆ.ಮೀ, ಚಿಕ್ಕಮಗಳೂರು ಕಮ್ಮರಡಿ 11 ಸೆ.ಮೀ, ಕೊಡಗಿನ ಪೊನ್ನಂಪೇಟೆ, ಸಂಪಾಜೆ, ದಕ್ಷಿಣ ಕನ್ನಡದ ಸುಬ್ರಮಣ್ಯ ತಲಾ 9 ಸೆ.ಮೀ, ದಕ್ಷಿಣ ಕನ್ನಡದ ಧರ್ಮಸ್ಥಳ, ಬೆಳ್ತಂಗಡಿ, ಕೊಪ್ಪಾದಲ್ಲಿ 8 ಸೆ.ಮೀ, ಉಡುಪಿಯ ಕಾರ್ಕಳ, ಉತ್ತರ ಕನ್ನಡದ ಸಿದ್ದಾಪುರ, ಹಾಸನದ ಸಕಲೇಶಪುರದಲ್ಲಿ ತಲಾ 7 ಸೆ.ಮೀ ಮಳೆ ಬಿದ್ದಿರುವುದು ದಾಖಲಾಗಿದೆ.

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

ಡ್ಯಾಮ್‌ನಿಂದ ಹೊರಬಿಟ್ಟ ನೀರಿಂದ ನೆರೆ ಆತಂಕ

ರಾಜ್ಯದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಒಟ್ಟು 7 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ತುಂಗಭದ್ರಾ, ನಾರಾಯಣಪುರ ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ.

ಕೊಡಗು, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಾವಣಗೆರೆ, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ಮಳೆ ಸಂಬಂಧಿ ಕಾರಣಕ್ಕೆ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನಲ್ಲಿ ಶಾಲೆಯಿಂದ ಮನೆಗೆ ಹಿಂದುರುಗುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ(7) ಕಾಲುಸಂಕ ದಾಟುವಾಗ ವೇಳೆ ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಿಂದ ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಭದ್ರಾಪುರ ಶಾಲೆಯ ಕಟ್ಟಡ ಸೋಮವಾರ ನಸುಕಿನಲ್ಲಿ ಕುಸಿದಿದೆ. ಶಾಲೆ ಆರಂಭಕ್ಕೆ ಮುನ್ನವೇ ಕಟ್ಟಣ ಕುಸಿದಿರುವುದರಿಂದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಮಳೆ ಅವಾಂತರ, ರಾತ್ರಿಯಿಡಿ ಪರದಾಡಿದ ನಿವಾಸಿಗಳು

ಕಳೆದ ಮೂರು ದಿನಗಳಿಂದ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, 20ಕ್ಕೂ ಅಧಿಕ ಮನೆ ಜಲಾವೃತಗೊಂಡಿವೆ. ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿರುವುದರಿಂದ ನೂರಾರು ಎಕರೆ ಭತ್ತದ ಬೆಳೆ ಮುಳುಗಡೆಯಾಗಿದೆ.

ಡ್ಯಾಂ ನೀರಿಂದ ಪ್ರವಾಹ:

ಮಲೆನಾಡಿನಲ್ಲಿ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದು ಸುಮಾರು 1 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಇದರಿಂದ ಹಂಪಿಯ ಹಲವು ಸ್ಮಾರಕಗಳು ಜಲಾವೃತವಾಗಿದ್ದು, ಗಂಗಾವತಿ- ಕಂಪ್ಲಿ ಸೇತುವೆ ಮುಳುಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಮತ್ತೆ 1 ಲಕ್ಷ ಕ್ಯುಸೆಕ್‌ ನೀರು ಹರಿಬಿಡಲಾದ ಹಿನ್ನೆಲೆಯಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ನದಿ ತೀರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.
 

click me!