ಸಂತ್ರಸ್ತರ ‘ನೆರೆ’ವಿಗೆ ಸಚಿವರು ದೌಡು: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಚಿವರ ಪರಿಶೀಲನೆ

By Govindaraj SFirst Published Aug 9, 2022, 3:30 AM IST
Highlights

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ ಬೆನ್ನಲ್ಲೇ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು ಮಳೆಹಾನಿ ಪ್ರದೇಶಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 

ಬೆಂಗಳೂರು (ಆ.09): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ ಬೆನ್ನಲ್ಲೇ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು ಮಳೆಹಾನಿ ಪ್ರದೇಶಗಳಿಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರದಂದು ಸಚಿವರಾದ ಡಾ.ಅಶ್ವತ್ಥ್‌ ನಾರಾಯಣ್‌, ಬಿ.ಸಿ.ನಾಗೇಶ್‌, ಕೋಟ ಶ್ರೀನಿವಾಸ ಪೂಜಾರಿ ಅವರು ಕ್ರಮವಾಗಿ ರಾಮನಗರ, ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸಿ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದ್ದಾರೆ. ಜೊತೆಗೆ ಜನರ ದೂರುಗಳನ್ನು ಆಲಿಸಿ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ.

ಏತನ್ಮಧ್ಯೆ ಕಂದಾಯ ಸಚಿವ ಆರ್‌.ಅಶೋಕ ಅವರು ಈಗಾಗಲೇ ಪ್ರವಾಹ ಪೀಡಿತ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಮಂಗಳೂರು, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು ಮಂಗಳವಾರ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಸತತ ಮಳೆಯಿಂದಾಗಿ ತೀವ್ರ ಹಾನಿ​ಗೀಡಾಗಿರುವ ರಾಮನಗರ ಜಿಲ್ಲೆಯಲ್ಲಿ ಸಚಿವ ಡಾ.ಅಶ್ವತ್ಥ್‌ ನಾರಾಯಣ್‌ ಅವರು ಸೋಮವಾರ ಮಿಂಚಿನ ಸಂಚಾರ ನಡೆಸಿದರು. ಸೋಲೂರು ಹೋಬಳಿಯ ಕೂಡ್ಲೂರು ಗೇಟ್‌ನಲ್ಲಿ, ಗೋಡೆ ಕುಸಿದು ಇಬ್ಬರು ನೇಪಾಳಿ ಮಕ್ಕಳು ಮೃತಪಟ್ಟಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. 

Latest Videos

ಹುಲಿ ಯೋಜನೆ ತೀರ್ಮಾನ ಸಿಎಂಗೆ ಬಿಟ್ಟದ್ದು: ಸಚಿವ ಕತ್ತಿ

ಮಾಗಡಿ ತಾಲೂಕಿನ ಕುದೂರಿನಲ್ಲಿ ಕೆರೆಗೆ ನೀರು ನುಗ್ಗಿ ಮನೆಮಠ ಕಳೆದುಕೊಂಡಿರುವ 36 ಕುಟುಂಬಗಳಿಗೆ ತಲಾ 10 ಸಾವಿರ ರು. ಪರಿಹಾರದ ಚೆಕ್‌ ವಿತರಿಸಿದರು. ನಂತರ ಮಾಯಸಂದ್ರ ಕೆರೆಗೆ ಬಾಗಿನ ಅರ್ಪಿಸಿದರು. ಈಡಿಗರ ಪಾಳ್ಯಕ್ಕೆ ತೆರಳಿ, ಉಕ್ಕಿ ಹರಿಯುತ್ತಿರುವ ಕಾಲುವೆಯನ್ನು ವೀಕ್ಷಿಸಿದರು. ಕೊಡಗಿನ ಸೋಮವಾರಪೇಟೆ ಕುಶಾಲನಗರದ ಪ್ರವಾಹ ಪೀಡಿತ ಬಡಾವಣೆಗಳಿಗೆ ಸಚಿವ ಬಿ.ಸಿ.ನಾಗೇಶ್‌ ಅವರು ಭೇಟಿ ನೀಡಿ ಹಾನಿಯನ್ನು ವೀಕ್ಷಿಸಿದರು. ಸೋಮವಾರಪೇಟೆ ತಾಲೂಕಿನ ಬೆಸೂರು, ನಿರುಗುಂದ ಹಾಗೂ ಕೆಳಕೊಡ್ಲಿ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳನ್ನು ವೀಕ್ಷಿಸಿದ ಸಚಿವ ನಾಗೇಶ್‌ ಸ್ಥಳದಲ್ಲಿಯೇ ಪರಿಹಾರದ ಚೆಕ್‌ ವಿತರಿಸಿದರು. ಶಾಸಕರಾದ ಅಪ್ಪಚ್ಚುರಂಜನ್‌ ಮತ್ತು ಹಿರಿಯ ಅಧಿಕಾರಿಗಳು ಇದ್ದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾನುವಾರ ಭಟ್ಕಳ ಹಾಗೂ ಹೊನ್ನಾವರದ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಭಾನುವಾರ ಭಟ್ಕಳದ ಮಣ್ಕುಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೊನ್ನಾವರದ ಅಪ್ಸರಕೊಂಡದಲ್ಲಿ ಗುಡ್ಡ ಬಿರುಕು ಬಿಟ್ಟಿರುವ ಪ್ರದೇಶ ವೀಕ್ಷಿಸಿದರು. ಸ್ಥಳೀಯರನ್ನು ಸ್ಥಳಾಂತರಿಸಿದ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಳಜಿ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಇನ್ನು ಚಿಕ್ಕಮಗಳೂರು ಜಿಲ್ಲೆಯ ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಚಿವ ಭೈರತಿ ಬಸವರಾಜ್‌ ಅವರು ವಿಪತ್ತು ನಿರ್ವಹಣೆ ಕುರಿತ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

160 ಗ್ರಾಮಗಳ ಜನತೆಗೆ ಕಾಳಜಿ ಕಿಟ್‌: ಅತಿವೃಷ್ಟಿಯಿಂದಾಗಿ ರಾಜ್ಯದ 14 ಜಿಲ್ಲೆಗಳ 160 ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ಕಾಳಜಿ ಕಿಟ್‌ಗಳನ್ನು ನೀಡಲಾಗುತ್ತಿದೆ. 10-15 ದಿನಗಳಿಗೆ ಆಗುವಷ್ಟು ದಿನಸಿಗಳನ್ನು ನೀಡಲಾಗುತ್ತಿದೆ. ಪ್ರವಾಹ ಬಂದಾಗ ನಾವು ಅನಾಥರು ಎನ್ನುವ ಭಾವನೆ ಬರಬಾರದು ಎಂಬ ದೃಷ್ಟಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಈ ದೇಶಕ್ಕೆ ಬಿಜೆಪಿ ಕೊಡುಗೆಯಾದರೂ ಏನು?: ಸಿದ್ದರಾಮಯ್ಯ ಪ್ರಶ್ನೆ

7 ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ: ರಾಜ್ಯದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಒಟ್ಟು 7 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ತುಂಗಭದ್ರಾ, ನಾರಾಯಣಪುರ ಜಲಾಶಯಗಳಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ತೀರ ಪ್ರದೇಶಗಳು ಮುಳುಗಡೆ ಭೀತಿಯನ್ನು ಎದುರಿಸುತ್ತಿವೆ.

click me!