ರಾಜ್ಯದ ವಿವಿಧ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಮತ್ತು ಗುರುವಾರ ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದು, ಶುಕ್ರವಾರದಿಂದ ಮತ್ತೆ ಚುರುಕುಗೊಳ್ಳಲಿದೆ. ಆ.24 ರಿಂದ 28ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಬೆಂಗಳೂರು(ಆ.22): ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಬುಧವಾರ ಮತ್ತು ಗುರುವಾರ ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಇದ್ದು, ಶುಕ್ರವಾರದಿಂದ ಮತ್ತೆ ಚುರುಕುಗೊಳ್ಳಲಿದೆ. ಆ.24 ರಿಂದ 28ರವರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಮಳೆಯೇ ಇಲ್ಲದಿದ್ದರೂ ಮೃತ್ಯುಂಜಯ ನದಿಯಲ್ಲಿ ಪ್ರವಾಹದ ರೌದ್ರ ನರ್ತನ! ಚಾರ್ಮಾಡಿ ಘಾಟ್ ಕುಸಿತವಾಯ್ತೆ?
ಉಳಿದಂತೆ ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಬೀದರ್, ಬೆಳಗಾವಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ ಸೇರಿದಂತೆ 15 ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ. ವರೆಗೆ ಮಳೆಯಾಗುವ ಲಕ್ಷಣ ಇರುವುದರಿಂದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಶುಕ್ರವಾರದಿಂದ ಮಳೆ ಪ್ರಮಾಣ ಕ್ರಮೇಣ ಕಡಿಮೆಯಾಗಲಿದೆ. ಆ.26ರ ಸೋಮವಾರದಿಂದ ಮತ್ತೆ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ, ಶಿವಮೊಗ್ಗದ ತ್ಯಾಗರ್ತಿಯಲ್ಲಿ ಅತಿ ಹೆಚ್ಚು 8 ಸೆಂ.ಮೀ. ಮಳೆಯಾಗಿದೆ. ನಾಯಕನಹಟ್ಟಿ ಹಾಗೂ ಬರಗೂರಿನಲ್ಲಿ ತಲಾ 7, ಹೊನ್ನಾಳಿ, ರಾಯಲ್ಪಾಡುನಲ್ಲಿ ತಲಾ 5, ಚನ್ನಗಿರಿ, ಹಾಸನ, ದೊಡ್ಡಬಳ್ಳಾಪುರ, ಕುರುಗೋಡು, ಮಧುಗಿರಿಯಲ್ಲಿ ತಲಾ 4, ಗುತ್ತಲ, ಚಿತ್ರದುರ್ಗ, ಹಿರಿಯೂರು, ಕುಣಿಗಲ್, ಗುಂಡ್ಲುಪೇಟೆ, ಚಿಂತಾಮಣಿ, ಕೋಲಾರದಲ್ಲಿ ತಲಾ 3, ಶಿಗ್ಗಾಂವಿ, ಯಗಟಿ, ತೊಂಡೇಬಾವಿ, ಅಜ್ಜಂಪುರ, ಗುಬ್ಬಿ ಸೇರಿದಂತೆ ವಿವಿಧ ಕಡೆ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.