ರಾಜ್ಯದಲ್ಲಿ ವೈರಸ್‌ ಮಹಾಸ್ಫೋಟ: ಒಂದೇ ದಿನ 57 ಕೊರೋನಾ ಕೇಸ್‌!

By Kannadaprabha NewsFirst Published May 9, 2020, 7:09 AM IST
Highlights

57 ಕೇಸ್‌: ರಾಜ್ಯದಲ್ಲಿ ವೈರಸ್‌ ಮಹಾಸ್ಫೋಟ!| ಒಂದು ದಿನದ ಗರಿಷ್ಠ ಪ್ರಕರಣ ದಾಖಲು| ಬೆಂಗಳೂರು 16, ದಾವಣಗೆರೆ 14, ಬೆಳಗಾವಿಯ 11 ಜನರಿಗೆ ಸೋಂಕು| ಉತ್ತರ ಕನ್ನಡದಲ್ಲಿ ಒಂದೇ ಕುಟುಂಬದ 10 ಸೇರಿ 12 ಮಂದಿಗೆ ವೈರಸ್‌

ಬೆಂಗಳೂರು(ಮೇ.09): ರಾಜ್ಯದಲ್ಲಿ ಕೊರೋನಾ ವೈರಸ್‌ ಶುಕ್ರವಾರ ಅಟ್ಟಹಾಸ ಮೆರೆದಿದ್ದು, ಆರು ಜಿಲ್ಲೆಗಳ 57 ಜನರಲ್ಲಿ ಒಂದೇ ದಿನ ಸೋಂಕು ದೃಢಪಟ್ಟಿದೆ. ಇದು ಇಲ್ಲಿಯವರೆಗೆ ಏಕದಿನದಲ್ಲಿ ಪತ್ತೆಯಾದ ಗರಿಷ್ಠ ಸಂಖ್ಯೆಯ ಸೋಂಕಾಗಿದೆ.

ಬೆಂಗಳೂರು ನಗರ 16, ದಾವಣಗೆರೆಯಲ್ಲಿ 14, ಉತ್ತರ ಕನ್ನಡ 12, ಬೆಳಗಾವಿ 11, ಚಿತ್ರದುರ್ಗ 3 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಪ್ರಕರಣ ಸೇರಿ ಒಟ್ಟು 57 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 23 ಮಂದಿ ಮಹಿಳೆಯರು. ಭಟ್ಕಳದಲ್ಲಿ ಐದು ತಿಂಗಳ ಮಗು ಸೇರಿ ವಿವಿಧೆಡೆ ಏಳು ಮಕ್ಕಳಿಗೂ ಸೋಂಕು ಹರಡಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ762ಕ್ಕೆ ಮುಟ್ಟಿದೆ.

ದಾವಣಗೆರೆಯಲ್ಲಿ 556 ಮತ್ತು 553ನೇ ರೋಗಿಗಳಿಂದ ಮತ್ತೆ 14 ಜನರಿಗೆ ಸೋಂಕು ಹರಡಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 66ಕ್ಕೆ ತಲುಪಿದೆ.

ಮುಂಬೈನ ಶಾಕಿಂಗ್ ವಿಡಿಯೋ, ಕೊರೋನಾ ಸೋಂಕಿತರ ಪಕ್ಕದಲ್ಲೇ ಶವಗಳ ರಾಶಿ!

ಬೆಳಗಾವಿ, ಬೆಂಗಳೂರಿಗೆ ತಬ್ಲೀಘಿ ಕಂಟಕ:

ಬೆಳಗಾವಿ ಹಾಗೂ ರಾಜಧಾನಿ ಬೆಂಗಳೂರಿಗೆ ತಬ್ಲೀಘಿಗಳ ಮೂಲಕ ಸೋಂಕು ಹರಡುವಿಕೆ ಮುಂದುವರೆದಿದೆ. ಬೆಳಗಾವಿಯಲ್ಲಿ ನಾಲ್ವರು ಸೋಂಕಿತರಿಂದ ಮತ್ತೆ 11 ಜನರಿಗೆ ಹೊಸದಾಗಿ ಸೋಂಕು ಹರಡಿದೆ. ಇದರೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ತಬ್ಲೀಘಿಗಳಿಂದ ಸೋಂಕು ತಗಲಿದವರ ಸಂಖ್ಯೆ 53ಕ್ಕೆ ಏರಿದೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಏಳು, ಹೊಂಗಸಂದ್ರದಲ್ಲಿ ಐದು ಮತ್ತು ಶಿವಾಜಿನಗರದಲ್ಲಿ ನಾಲ್ಕು ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ ಏಳು ಪ್ರಕರಣಗಳು ಗುರುವಾರ ರಾತ್ರಿಯೇ ದೃಢಪಟ್ಟಿರುವುದನ್ನು ಬಿಬಿಎಂಪಿ ಖಚಿತಪಡಿಸಿತ್ತು. ಇದೀಗ ಆರೋಗ್ಯ ಇಲಾಖೆ ಅವುಗಳನ್ನು ಶುಕ್ರವಾರ ದೃಢಪಡಿಸಿದೆ.

ಬೆಂಗಳೂರಿನ ಶಿವಾಜಿನಗರಕ್ಕೂ ತಬ್ಲೀಘಿಗಳಿಂದಲೇ ಸೋಂಕು ಹಬ್ಬಿರುವುದು ಖಚಿತವಾಗಿದೆ. ತಬ್ಲೀಘಿಗಳಿಗೆ ಚಿಕಿತ್ಸೆ ನೀಡಿದ್ದ ಶಿಫಾ ಆಸ್ಪತ್ರೆ ವೈದ್ಯನಿಂದ ಸ್ಟಾಫ್‌ ನರ್ಸ್‌ಗೆ, ಆಕೆಯಿಂದ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಹೌಸ್‌ ಕೀಪಿಂಗ್‌ ವ್ಯಕ್ತಿಗೆ ಸೋಂಕು ತಗಲಿದೆ. ಆ ವ್ಯಕ್ತಿಯೊಂದಿಗೆ ಒಂದೇ ರೂಮಿನಲ್ಲಿ ವಾಸವಿದ್ದ 13 ಜನರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 172ಕ್ಕೆ ಏರಿಕೆಯಾಗಿದೆ.

ಸಿರಿವಂತರಿಗೂ ಭರ್ಜರಿ ಕೊರೋನಾ ಶಾಕ್‌: ಅಂಬಾನಿ, ದಮಾನಿ ಆಸ್ತಿ ಇಳಿಕೆ!

ಒಂದೇ ಕುಟುಂಬದ 10 ಜನರಿಗೆ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಒಂದೇ ಕುಟುಂಬದ 10 ಮಂದಿ ಮತ್ತು ಪಕ್ಕದ ಮನೆಯ ಇಬ್ಬರು ಸೇರಿ ಒಟ್ಟು 12 ಜನರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರಿಗೂ 659ನೇ ರೋಗಿಯಿಂದ ಸೋಂಕು ತಗುಲಿದೆ. ಎಲ್ಲರಿಗೂ ಕೆಲ ದಿನಗಳ ಹಿಂದೆಯೇ ಜ್ವರ ಮತ್ತಿತರ ಸೋಂಕು ಲಕ್ಷಣಗಳು ಕಂಡುಬಂದರೂ ವಿವಿಧ ಔಷಧ ಸೇವಿಸಿ ನಿರ್ಲಕ್ಷ್ಯ ಮಾಡಿದ್ದರು. ಆರೋಗ್ಯ ಸಮಸ್ಯೆ ಉಲ್ಬಣಿಸಿದಾಗ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ್ದು, ಸೋಂಕು ದೃಢಪಟ್ಟಿದೆ. ಉಳಿದಂತೆ ಬಳ್ಳಾರಿ ಜಿಲ್ಲೆಯಲ್ಲಿ 37 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದರು.

10 ಜನ ಬಿಡುಗಡೆ

ಶುಕ್ರವಾರ ರಾಜ್ಯಾದ್ಯಂತ ಕೊರೋನಾ ಸೋಂಕಿನಿಂದ ಗುಣಮುಖರಾದ 10 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟಾರೆ 376 ಜನರು ಬಿಡುಗಡೆಯಾಗಿದ್ದು, 355 ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 30 ಜನರು ಮೃತಪಟ್ಟಿದ್ದಾರೆ.

click me!