Interview: ಮೋದಿ ನಾರಾಯಣ ಗುರುಗಳ ಅಭಿಮಾನಿ, ಅವಮಾನ ಮಾಡಿದವರು ಕಮ್ಯುನಿಸ್ಟರು: ಶಿವಗಿರಿ ಸ್ವಾಮೀಜಿ

By Kannadaprabha NewsFirst Published Jan 29, 2022, 9:36 AM IST
Highlights

ಮೋದಿ ಪ್ರಧಾನಿಯಾದ ಮೇಲೆ ನಾನು ಈ ಹುದ್ದೆಗೆ ಬರಲು ನಾರಾಯಣ ಗುರುಗಳ ಆಶೀರ್ವಾದ ಕಾರಣ ಎಂದು ಶಿವಗಿರಿ ಮಠಕ್ಕೆ ಬಂದು 70 ಕೋಟಿ ರು. ನೆರವು ನೀಡಿದರು. ಅವರಿಗೆ ನಾರಾಯಣ ಗುರುಗಳ ಬಗ್ಗೆ ಬಹಳ ಅಭಿಮಾನವಿದೆ. 

ದೆಹಲಿಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶಿಸಲು ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡದಿರುವುದು ವಿವಾದಕ್ಕೆ ಕಾರಣವಾಗಿವೆ. ಕೇಂದ್ರ ಸರ್ಕಾರ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ ಎಂದು ದಕ್ಷಿಣ ಕನ್ನಡದಲ್ಲಿ ಅವರ ಅನುಯಾಯಿಗಳು ಸ್ವಾಭಿಮಾನಿ ಜಾಥಾ ನಡೆಸಿದ್ದಾರೆ.

ಆದರೆ, ಬಿಜೆಪಿ ನಾಯಕರು ಕೇಂದ್ರ ಸರ್ಕಾರ ನಾರಾಯಣ ಗುರುಗಳಿಗೆ ಅವಮಾನ ಮಾಡಿಲ್ಲ ಎನ್ನುತ್ತಿದ್ದಾರೆ. ಸ್ವಾಭಿಮಾನಿ ಜಾಥಾಕ್ಕೆ ವಿಶ್ವ ಹಿಂದು ಪರಿಷತ್‌ ಸೇರಿದಂತೆ ಕೆಲ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರೂ ಹೋಗಿದ್ದರು. ಈ ಎಲ್ಲ ಗೋಜಲುಗಳ ಬಗ್ಗೆ ಸ್ವತಃ ನಾರಾಯಣ ಗುರುಗಳಿಂದಲೇ ಸ್ಥಾಪಿತವಾದ ಕೇರಳದ ಶಿವಗಿರಿ ಮಠದ ಸನ್ಯಾಸಿಗಳಲ್ಲಿ ಒಬ್ಬರಾದ ಸತ್ಯಾನಂದ ತೀರ್ಥರು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Narayana Guru Tableau Row: ಭುಗಿಲೆದ್ದ ಆಕ್ರೋಶ, 'ಸ್ವಾಭಿಮಾನ ನಡಿಗೆ'ಗೆ ವ್ಯಾಪಕ ಬೆಂಬಲ

ಕೇರಳ ಸರ್ಕಾರ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಲಿಲ್ಲ ಎಂದು ದಕ್ಷಿಣ ಕನ್ನಡದಲ್ಲಿ ಹೋರಾಟ ನಡೆಯುತ್ತಿದೆ. ಕರ್ನಾಟಕದಲ್ಲೇ ಇಷ್ಟುದೊಡ್ಡ ಪ್ರತಿಭಟನೆ ನಡೆಯುತ್ತಿರುವಾಗ, ಗುರುಗಳ ಕಾರ್ಯಕ್ಷೇತ್ರವಾದ ಕೇರಳದಲ್ಲಿ ಇನ್ನೂ ದೊಡ್ಡ ಹೋರಾಟ ನಡೆಯುತ್ತಿರಬಹುದಲ್ಲವೇ?

- ಕೇರಳದವರು ಇಂತಹ ವಿಷಯಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲಿ ಯಾರೂ ಯಾವುದೇ ಪ್ರತಿಭಟನೆ ನಡೆಸಿಲ್ಲ. ನಾನು ಅಲ್ಲಿನ ಟೀವಿ ಚಾನಲ್‌ಗಳನ್ನೆಲ್ಲ ನೋಡಿದ್ದೇನೆ.

ಆಶ್ಚರ್ಯವಲ್ಲವೇ? ನಾರಾಯಣ ಗುರುಗಳ ಬೋಧನೆಗೆ ಕೇರಳದಾದ್ಯಂತ ಗೌರವವಿದೆ. ಅವರಿಗೆ ಅವಮಾನವಾಗಿದೆ ಎಂದಾದರೆ ಅಲ್ಲಿ ಆಕ್ರೋಶ ವ್ಯಕ್ತವಾಗಬೇಕಿತ್ತಲ್ಲವೇ?

- ಕೇರಳದಲ್ಲಿ ಎರಡನೇ ಬಾರಿ ಕಮ್ಯುನಿಸ್ಟ್‌ ಸರ್ಕಾರ ಬಂದಿದೆ. ಅಲ್ಲೀಗ ಪ್ರತಿಭಟನೆ ನಡೆಸುವುದಿದ್ದರೆ ವಿರೋಧ ಪಕ್ಷವಾದ ಕಾಂಗ್ರೆಸ್‌ನವರು ನಡೆಸಬೇಕು. ಅವರು ಪ್ರತಿಭಟನೆ ನಡೆಸಲಿಲ್ಲ. ಇನ್ನು, ಸರ್ಕಾರ ತಮ್ಮದೇ ಇರುವುದರಿಂದ ಕಮ್ಯುನಿಸ್ಟರೂ ಪ್ರತಿಭಟಿಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ಯಾವುದೇ ಹೋರಾಟ ನಡೆಯುತ್ತಿಲ್ಲ.

ಕೇರಳ ಸರ್ಕಾರ ಕಳಿಸಿದ ನಾರಾಯಣ ಗುರುಗಳ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರದ ರಕ್ಷಣಾ ಸಮಿತಿ ನಿರಾಕರಿಸಿ ಶಂಕರಾಚಾರ್ಯರ ಸ್ತಬ್ಧಚಿತ್ರ ಕಳುಹಿಸುವಂತೆ ಕೇಳಿತು ಎಂದು ಹೇಳಲಾಗುತ್ತಿದೆ. ನಿಜವಾಗಿಯೂ ಈ ವಿಷಯದಲ್ಲಿ ನಡೆದಿದ್ದೇನು?

- ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಜಟಾಯುಪಾರೆ ಎಂಬ ಬೆಟ್ಟವಿದೆ. ರಾವಣ ಸೀತೆಯನ್ನು ಕದ್ದೊಯ್ಯುವಾಗ ಅಡ್ಡ ಬಂದ ಜಟಾಯುವಿನ ರೆಕ್ಕೆಯನ್ನು ರಾವಣ ಕತ್ತರಿಸುತ್ತಾನೆ. ಅದು ಬಿದ್ದ ಸ್ಥಳ ಎಂಬ ಪ್ರತೀತಿ ಜಟಾಯುಪಾರೆಗಿದೆ. ಆ ಕುರಿತ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇರಳದಿಂದ ಕಳಿಸಿದ್ದರು. ಅದು ಕಪ್ಪಗಿದೆ ಎಂಬ ಕಾರಣಕ್ಕೆ ಕೇಂದ್ರ ತಿರಸ್ಕರಿಸಿತ್ತು. ನಂತರ ಅದೇ ಬೆಟ್ಟದ ಮುಂದೆ ನಾರಾಯಣಗುರುಗಳ ಮೂರ್ತಿ ಇಟ್ಟು ಕಳಿಸಿದರು. ಅದೂ ಕಪ್ಪಗಿದೆ ಎಂಬ ಕಾರಣಕ್ಕೆ ತಿರಸ್ಕೃತವಾಯಿತು. ಮೂರನೇ ಬಾರಿ ಶಂಕರಾಚಾರ್ಯರ ಸ್ತಬ್ಧಚಿತ್ರದ ಪ್ರಸ್ತಾವನೆ ಕಳಿಸಿದರು. ಅದೂ ತಿರಸ್ಕೃತವಾಯಿತು. ನಡೆದಿದ್ದು ಇಷ್ಟೆ.

ನಾರಾಯಣ ಗುರು ಸ್ತಬ್ದಚಿತ್ರ ವಿವಾದ ಹಿಂದೆ ಕೇರಳದ ರಾಜಕೀಯ ಬಯಲು, ಶಿವಗಿರಿ ಸ್ವಾಮೀಜಿ ಬಿಚ್ಚಿಟ್ಟ ಸ್ಫೋಟಕ ಸತ್ಯ!

ಕೇರಳ ಸರ್ಕಾರಕ್ಕೆ ನಾರಾಯಣ ಗುರುಗಳ ಬಗ್ಗೆ ಸಾಕಷ್ಟುಪ್ರೀತಿ ಇದ್ದುದರಿಂದಲೇ ಅವರ ಸ್ತಬ್ಧಚಿತ್ರವನ್ನು ಎರಡನೇ ಬಾರಿ ಕಳಿಸಿದ್ದಲ್ಲವೇ?

- ಕೇರಳದಲ್ಲಿ ನಾರಾಯಣ ಗುರುಗಳು ಒಂದು ವೋಟ್‌ ಬ್ಯಾಂಕ್‌. ಕೇರಳದಲ್ಲಿ ಅತಿಹೆಚ್ಚು ಇರುವುದು ಈಳವ ಮತ್ತು ತೀಯ ಸಮಾಜದವರು. ಅಲ್ಲಿನ ಮುಖ್ಯಮಂತ್ರಿಯೂ ಅದೇ ಸಮಾಜದವರು. ಅವರನ್ನು ಮೆಚ್ಚಿಸಲು ನಾರಾಯಣ ಗುರುಗಳ ಟ್ಯಾಬ್ಲೋ ಕಳಿಸಲು ಸರ್ಕಾರ ನಿರ್ಧರಿಸಿದ್ದಿರಬಹುದು.

ಹಾಗಿದ್ದರೆ ನಾರಾಯಣ ಗುರುಗಳ ಸಮಾಜವನ್ನು ಕೇರಳ ಸರ್ಕಾರ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ?

- ಇಲ್ಲ. ಈ ವಿಷಯದಲ್ಲಿ ನನಗಿರುವ ಅನುಭವ ಹೇಳುತ್ತೇನೆ. ಶಿವಗಿರಿ ಮಠದಲ್ಲಿ ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಸ್ವಾಮೀಜಿಗಳ ಆಯ್ಕೆ ನಡೆಯುತ್ತದೆ. 1994ರಲ್ಲಿ ಚುನಾವಣೆ ನಡೆದಾಗ ಅಲ್ಲಿದ್ದ ಸ್ವಾಮೀಜಿ ಪೀಠ ಬಿಡಲು ಒಪ್ಪಲಿಲ್ಲ. ಅಲ್ಲಿ ನಾನೂ ಸೇರಿದಂತೆ 46 ಸನ್ಯಾಸಿಗಳಿದ್ದೇವೆ. ನಾವೆಲ್ಲ ಸೇರಿ ಆಯ್ಕೆ ಮಾಡಿದವರಿಗೆ ಅವರು ಪೀಠ ಬಿಟ್ಟುಕೊಡಲಿಲ್ಲ. ಹೀಗಾಗಿ ಗೆದ್ದ ಪಕ್ಷದವರು ಕೋರ್ಟ್‌ಗೆ ಹೋದರು. ಆಗ ಕಾಂಗ್ರೆಸ್‌ನ ಎ.ಕೆ.ಆ್ಯಂಟನಿ ಸರ್ಕಾರವಿತ್ತು. ಗೆದ್ದ ಪಕ್ಷದವರಿಗೆ ಅಧಿಕಾರ ಬಿಟ್ಟುಕೊಡಬೇಕೆಂದು ಕೋರ್ಟ್‌ ಆದೇಶಿಸಿತು.

ಸರ್ಕಾರ ಈ ಪ್ರಕ್ರಿಯೆ ಸುರಳೀತವಾಗಿ ನಡೆಸಲು ಶಿವಗಿರಿಗೆ ಪೊಲೀಸರನ್ನು ಕಳುಹಿಸಿ ಸ್ವಾಮೀಜಿಗಳಿಗೆಲ್ಲ ರಕ್ಷಣೆ ನೀಡುವಂತೆ ಸೂಚಿಸಿತು. ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಪಿಡಿಪಿ ಚೇರ್ಮನ್‌ ಅಬ್ದುಲ್‌ ನಾಸಿರ್‌ ಮದನಿಯ ಬೆಂಬಲಿಗರು ಸನ್ಯಾಸಿಗಳ ವೇಷ ಹಾಕಿಕೊಂಡು ಮಠಕ್ಕೆ ಬಂದು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿ, ಪೆಟ್ರೋಲ್‌ ಬಾಂಬ್‌ ಹಾಕಿದರು. ಜೋರಾಗಿ ಸಂಘರ್ಷ ನಡೆಯಿತು. ಮಠದ 2-3 ಸನ್ಯಾಸಿಗಳಿಗೆ ಏಟಾಯಿತು. ಕೆಲ ವೇಷಧಾರಿ ಸನ್ಯಾಸಿಗಳಿಗೂ ಏಟಾಯಿತು. ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಅವರ ನಿಜವಾದ ಹೆಸರು ನಜೀಮ್‌, ನವಾಜ್‌, ಷರೀಫ್‌, ಅಹ್ಮದ್‌ ಎಂದು ತಿಳಿಯಿತು. ಕೊನೆಗೆ ಅಧಿಕಾರ ಹಸ್ತಾಂತರ ಆಯಿತು. ಆಗ ಅಧಿಕಾರಕ್ಕೆ ಬಂದವರು ಪ್ರಕಾಶಾನಂದ ಸ್ವಾಮೀಜಿ.

ಸುಮಾರು 1 ವರ್ಷ ಎಲ್ಲ ಸರಿಯಾಗಿತ್ತು. ಆದರೆ, ಒಲ್ಲದ ಮನಸ್ಸಿನಿಂದ ಹೊರಗೆ ಹೋದ ಹಳೆಯ ಸ್ವಾಮೀಜಿ ತಮ್ಮದೇ ಗುಂಪು ಮಾಡಿಕೊಂಡರು. ಅಷ್ಟರಲ್ಲಿ ಕಾಂಗ್ರೆಸ್‌ ಸೋತು ಕಮ್ಯುನಿಸ್ಟ್‌ ಸರ್ಕಾರ ಬಂದಿತ್ತು. ಏ.ಕೆ.ನಾಯನಾರ್‌ ಮುಖ್ಯಮಂತ್ರಿಯಾಗಿದ್ದರು. ಅವರ ಬಳಿಗೆ ಸ್ವಾಮೀಜಿ ಹಾಗೂ ಎಸ್‌ಡಿಪಿಐನವರು ಹೋಗಿ, ಹೇಗಾದರೂ ಮಾಡಿ ಮಠವನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಕೇಳಿದರು. ಆಗ ಮುಖ್ಯಮಂತ್ರಿಗಳು ಒಂದು ಮಠವನ್ನು ಹಾಗೆಲ್ಲ ಸರ್ಕಾರ ವಶಕ್ಕೆ ಪಡೆಯಲು ಬರುವುದಿಲ್ಲ. ಅಲ್ಲೊಂದು ಸಂಘರ್ಷ ಸೃಷ್ಟಿಮಾಡಬೇಕೆಂದು ಹೇಳಿದರು. ಮರುದಿನವೇ ಒಂದು ಲಾರಿಯಲ್ಲಿ ಗೂಂಡಾಗಳು ಬಂದು ಮಠಕ್ಕೆ ನುಗ್ಗಿ ಅಲ್ಲಿನ ವೈರ್‌ಗಳನ್ನೆಲ್ಲ ಕತ್ತರಿಸಿ, ಫೈಲುಗಳನ್ನು ಎತ್ತಿಕೊಂಡು ಹೋದರು. ನಂತರ ಸ್ವಲ್ಪ ಹೊತ್ತಿನಲ್ಲೇ ಜಿಲ್ಲಾಧಿಕಾರಿ ಬಂದರು.

ಅದೊಂದು ನಾಟಕ. ಅವರು ಮಠದಲ್ಲಿ ಸಂಘರ್ಷ ನಡೆಯುತ್ತಿದೆ, ಸ್ವಲ್ಪ ದಿನಗಳ ಮಟ್ಟಿಗೆ ಮಠ ಸರ್ಕಾರದ ವಶದಲ್ಲಿರಲಿ ಎಂದು ವಯೋವೃದ್ಧ ಪ್ರಕಾಶಾನಂದ ಸ್ವಾಮೀಜಿಗಳಿಂದ ಸಹಿ ಪಡೆದುಕೊಂಡು ಹೋದರು. ಅವರಿಗೆ ತಾನು ಯಾವುದಕ್ಕೆ ಸಹಿ ಹಾಕಿದ್ದೇನೆಂದೂ ಗೊತ್ತಿರಲಿಲ್ಲ. ಅಲ್ಲಿ ಕೇರಳ ಕೌಮುದಿ ಎಂಬ ಪತ್ರಿಕೆಯೊಂದಿದೆ. ಅದರ ಸ್ಥಾಪಕ ಸಿ.ವಿ.ಕುಂಞರಾಮನ್‌ ಎಂಬ ಯುಕ್ತಿವಾದಿ ಕಮ್ಯುನಿಸ್ಟ್‌ ಪತ್ರಕರ್ತ. ನಾರಾಯನ ಗುರುಗಳು ಮೆಂಟಲ್‌ ಪೇಷಂಟ್‌ ಅಂತ ಒಮ್ಮೆ ಕರೆದಿದ್ದ. ಆತನ ಪತ್ರಿಕೆಯಲ್ಲಿ ‘ಪ್ರಕಾಶಾನಂದ ಸ್ವಾಮೀಜಿ ಸಂತೋಷದಿಂದ ಮಠವನ್ನು ಸರ್ಕಾರಕ್ಕೆ ಕೊಟ್ಟರು’ ಎಂದು ದೊಡ್ಡ ಹೆಡ್‌ಲೈನ್‌ ಪ್ರಕಟವಾಯಿತು. ಸ್ವಾಮೀಜಿಗಳು ಶಿಷ್ಯರಿಗೆ ಕಲ್ಲುಸಕ್ಕರೆ ಪ್ರಸಾದ ನೀಡುವ ಫೋಟೋವನ್ನೇ ತಿರುಚಿ ಅದರ ಜೊತೆ ಪ್ರಕಟಿಸಿದ್ದರು. ಹಾಗೆ ಸರ್ಕಾರದ ವಶಕ್ಕೆ ಹೋದ ಮಠ 5 ವರ್ಷ ಸರ್ಕಾರದ ಬಳಿಯೇ ಇತ್ತು. ಪ್ರಕಾಶಾನಂದ ಸ್ವಾಮೀಜಿ ಒಂದು ತಿಂಗಳು ಸಚಿವಾಲಯದ ಮುಂದೆ ಮಲಗಿ ಸತ್ಯಾಗ್ರಹ ನಡೆಸಿದರು.

ನನ್ನನ್ನೂ ಸೇರಿದಂತೆ 24 ಯುವ ಸನ್ಯಾಸಿಗಳಿಗೆ ಆರ್‌ಎಸ್‌ಎಸ್‌ ಹಿನ್ನೆಲೆಯಿದೆ ಅಂತೆಲ್ಲ ಕಾರಣ ನೀಡಿ ಮಠದಿಂದ ಹೊರಹಾಕಿದರು. ನಾವು ಸುಪ್ರೀಂಕೋರ್ಟ್‌ಗೆ ಹೋದೆವು. ಆದರೆ ವಕೀಲರ ಫೀಸು ಕೊಡುವುದಕ್ಕೂ ನಮ್ಮಲ್ಲಿ ಹಣವಿಲ್ಲ. ಕೊನೆಗೆ ನಮಗೆ ತಮಿಳುನಾಡಿನ ಟಾಟಾ ಎಸ್ಟೇಟ್‌ ಮಾಲಿಕ ಕೃಷ್ಣಕುಮಾರ್‌ ಸಿಕ್ಕರು. ಅವರು ನಾರಾಯಣ ಗುರುಗಳ ಪರಮ ಭಕ್ತ. ಅವರು ವಕೀಲರನ್ನು ನೇಮಿಸಿದರು. ತೀರ್ಪು ನಮ್ಮ ಪರ ಬಂತು. ಅಷ್ಟರಲ್ಲಿ ಮಠದ ಖಜಾನೆಯನ್ನೆಲ್ಲ ಸರ್ಕಾರ ಲೂಟಿ ಮಾಡಿತ್ತು. ಮಠದ ನೌಕರರಿಗೆ ಸಂಬಳ ನೀಡಲು ಹಣವಿಲ್ಲದೆ ಪಾಲಕ್ಕಾಡ್‌ನಲ್ಲಿರುವ ಇನ್ನೊಂದು ಶಾಖಾಮಠದ ಗಂಧದ ಮರಗಳನ್ನೆಲ್ಲ ಕಡಿಸಿ ಮಾರಿತ್ತು. ಮಠದ ಬಗ್ಗೆ ಯಾವ ಅಭಿಮಾನವೂ ಇಲ್ಲದ ಕಮ್ಯುನಿಸ್ಟ್‌ ಸರ್ಕಾರ ಈಗ ನಾರಾಯಣ ಗುರುಗಳಿಗೆ ಅವಮಾನವಾಗಿದೆ ಎಂದು ಹೇಳುವುದಾದರೂ ಹೇಗೆ?

ನಿಮ್ಮ ಪ್ರಕಾರ ನರೇಂದ್ರ ಮೋದಿಯವರ ಸರ್ಕಾರದಿಂದ ನಾರಾಯಣ ಗುರುಗಳಿಗೆ ಅವಮಾನ ಆಗಿದೆಯೋ ಇಲ್ಲವೋ?

- ಮೋದಿ 2013ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಶಿವಗಿರಿ ಮಠಕ್ಕೆ ಬಂದಿದ್ದರು. ನಂತರ ಪ್ರಧಾನಿಯಾದ ಮೇಲೆ ನಾನು ಈ ಹುದ್ದೆಗೆ ಬರಲು ನಾರಾಯಣ ಗುರುಗಳ ಆಶೀರ್ವಾದ ಕಾರಣ ಎಂದು ಮತ್ತೆ ಶಿವಗಿರಿ ಮಠಕ್ಕೆ ಬಂದು 70 ಕೋಟಿ ರು. ನೆರವು ನೀಡಿದರು. ಆ ಹಣ ದುರ್ಬಳಕೆ ಆಗಬಾರದು ಎಂದು ಕೇಂದ್ರದಿಂದಲೇ ಅಧಿಕಾರಿಗಳನ್ನು ಕಳುಹಿಸಿದರು. ಅವರು ಇವತ್ತಿಗೂ ಮಠದ ಆವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೋದಿಯವರಿಗೆ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಗಳ ಬಗ್ಗೆ ಚೆನ್ನಾಗಿ ಗೊತ್ತು.

ಅವರು ಶಿವಗಿರಿಗೆ ಮೊದಲು ಬಂದಾಗ ಒಂದು ಗಂಟೆ ನಾರಾಯಣ ಗುರುಗಳ ಬಗ್ಗೆಯೇ ಭಾಷಣ ಮಾಡಿದ್ದರು. ಅವರ ಬಾಯಿಯಲ್ಲಿ ಒಂದೇ ಒಂದು ಮಾತು ರಾಜಕೀಯ ಬರಲಿಲ್ಲ. ಅವರಿಗೆ ನಾರಾಯಣ ಗುರುಗಳ ಬಗ್ಗೆ ಬಹಳ ಅಭಿಮಾನವಿದೆ. ಅಂತಹವರು ನಾರಾಯಣ ಗುರುಗಳಿಗೆ ಅವಮಾನ ಮಾಡಲು ಸಾಧ್ಯವೇ ಇಲ್ಲ. ಅವರ ತಲೆಯ ಮೇಲೆ ಗೂಬೆ ಕೂರಿಸಲು ಬೇರೆಯವರು ಪ್ರಯತ್ನ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಹೋರಾಟ. ದಕ್ಷಿಣ ಕನ್ನಡದಲ್ಲಿ ನಡೆದ ಹೋರಾಟವೂ ರಾಜಕೀಯ ಪ್ರೇರಿತವೇ.

ಕೇರಳದ ಮುಖ್ಯಮಂತ್ರಿಗಳಿಗೆ ನಾರಾಯಣ ಗುರುಗಳ ಬಗ್ಗೆ ಅಭಿಮಾನ ಇದೆಯೇ?

- ತೋರಿಕೆಗಷ್ಟೇ ಅಭಿಮಾನ ಇದೆ. ಅವರು ಶಿವಗಿರಿಗೆ ಬಂದರೆ ಕೈ ಮುಗಿಯುವುದಿಲ್ಲ, ಆರತಿ ತೆಗೆದುಕೊಳ್ಳುವುದಿಲ್ಲ. ತೀರ್ಥ ತೆಗೆದುಕೊಳ್ಳುವುದಿಲ್ಲ.

ಹಾಗಿದ್ದರೆ ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಟ್ಯಾಬ್ಲೋ ಕಳಿಸಲು ಕೇರಳ ಸರ್ಕಾರ ಏಕೆ ಮುಂದಾಗುತ್ತದೆ?

- ಅದು ಕಣ್ಕಟ್ಟು. ಜನರನ್ನು ಆಕರ್ಷಿಸಲು ಮುಖ್ಯಮಂತ್ರಿಗಳು ಅದನ್ನೆಲ್ಲ ಮಾಡುತ್ತಾರೆ. ನಾನು ನಾರಾಯಣ ಗುರುಗಳ ದೊಡ್ಡ ಅಭಿಮಾನಿ ಎಂದು ತೋರಿಸಿಕೊಳ್ಳುವುದಕ್ಕೆ. ನನ್ನ ಪ್ರಕಾರ ನಾರಾಯಣ ಗುರುಗಳನ್ನು ಟ್ಯಾಬ್ಲೋದಲ್ಲಿರಿಸಿ ದಿಲ್ಲಿಯಲ್ಲಿ ಸುತ್ತಾಡಿಸುವುದೇ ಸರಿಯಲ್ಲ. ಟ್ಯಾಬ್ಲೋದಲ್ಲಿ ಒಂದೊಂದು ರಾಜ್ಯದ ಸಂಸ್ಕೃತಿಯನ್ನು ತೋರಿಸುವ ಕೆಲಸ ನಡೆಯುತ್ತದೆ. ಅಲ್ಲಿ ನಾರಾಯಣ ಗುರುಗಳ ಅಗತ್ಯ ಇಲ್ಲ.

"

ನಾರಾಯಣಗುರು ವರ್ಸಸ್‌ ಶಂಕರಾಚಾರ್ಯ ಎಂಬಂತೆ ಈಗಿನ ಹೋರಾಟವನ್ನು ಬಿಂಬಿಸುವ ಯತ್ನ ನಡೆಯುತ್ತಿದೆ. ಅವರಿಬ್ಬರ ಬೋಧನೆಗಳು ತದ್ವಿರುದ್ಧವಾಗಿದ್ದವೇ?

- ಇಲ್ಲ. ಇಬ್ಬರೂ ಅದ್ವೈತ ಸಿದ್ಧಾಂತವನ್ನೇ ಪ್ರತಿಪಾದನೆ ಮಾಡಿದ್ದರು. ಹಿಂದೆ 2015ರಲ್ಲಿ ಮುಖ್ಯಮಂತ್ರಿಗಳ ಊರಿನಲ್ಲಿ ಏಸುಕ್ರಿಸ್ತನ ಶಿಲುಬೆಗೆ ನಾರಾಯಣ ಗುರುಗಳ ಫೋಟೋ ಏರಿಸಿ ಮೆರವಣಿಗೆ ಮಾಡಿದ್ದರು. ಆಗ ಯಾರೂ ಪ್ರತಿಭಟನೆ ಮಾಡಲಿಲ್ಲ. ಅದು ಎಷ್ಟುದೊಡ್ಡ ಅವಮಾನವಲ್ಲವೇ? ಮಠವನ್ನು ಉಳಿಸಲು ಯಾರೂ ಬರಲಿಲ್ಲ. ಪ್ರಕಾಶಾನಂದ ಸ್ವಾಮೀಜಿ ಸತ್ಯಾಗ್ರಹ ನಡೆಸುವಾಗ ಯಾರೂ ಬರಲಿಲ್ಲ. ಈಗೇಕೆ ನಾರಾಯಣ ಗುರುಗಳಿಗೆ ಅವಮಾನವಾಗಿದೆ ಎನ್ನುತ್ತಿದ್ದಾರೆ? ಗುರುಗಳಿಗೆ ಏನಾದರೂ ಅವಮಾನವಾಗಿದ್ದರೆ ನೂರಕ್ಕೆ ನೂರು ಅದು ಕಮ್ಯುನಿಸ್ಟರಿಂದಲೇ.

- ಅಜಿತ್‌ ಹನಮಕ್ಕನವರ್‌

ಸಂಪಾದಕ, ಏಷ್ಯಾನೆಟ್‌ ಸುವರ್ಣ ನ್ಯೂಸ್‌

click me!