
ಬೆಂಗಳೂರು(ಆ.12): ಹಿಂಸಾಚಾರ ಯಾವತ್ತೂ ಕೆಟ್ಟ ನೆನಪಾಗಿ ಉಳಿಯುತ್ತದೆ. ಆದರೀಗ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದ ಹಿಂಸಾಚಾರದ ನಡುವೆಯೂ ಅದ್ಭುತ ದೃಶ್ಯವೊಂದು ಕಂಡು ಬಂದಿದ್ದು, ಇದನ್ನು ಅನೇಕ ಮಂದಿ ನೆನಪಿಟ್ಟುಕೊಳ್ಳಲು ಬಯಸುತ್ತಾರೆ. ಶಾಸಕರ ಮನೆ, ರಸ್ತೆಯಲ್ಲಿದ್ದ ವಾಹನಗಳಿಗೆ ತಗುಲಿದ ಬೆಂಕಿ ಹೀಗೆ ಗಲಭೆಯ ನಡುವೆಯೂ ಕಂಡು ಬಂದ ಸಾಮರಸ್ಯ ಸದ್ಯ ಸದ್ದು ಮಾಡುತ್ತಿದೆ.
ಪೈಗಂಬರ್ ಅವಹೇಳನ ಆರೋಪ, ಬೆಂಗಳೂರು ಪೂರ್ವ ಧಗಧಗ: ಗೋಲಿಬಾರ್‌ಗೆ 2 ಬಲಿ!
ಹೌದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮೇಲೆ ಉದ್ರಿಕ್ತರ ಗುಂಪೊಂದು ದಾಳಿ ನಡೆಸಿ ಕಲ್ಲು ತೂರಾಟ ಮಾಡಿದ್ದಲ್ಲದೇ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಹೀಗಿರುವಾಗ ಶಾಸಕರ ಮನೆಯ ಎದುರು ಭಾಗದಲ್ಲೇ ಇರುವ ಹನುಮಾನ್ ದೇಗುಲವನ್ನು ಮುಸ್ಲಿಂ ಯುವಕರು ಮಾನವ ಸರಪಳಿ ನಿರ್ಮಿಸಿ ರಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಕೂಡಾ ಭಾರೀ ವೈರಲ್ ಆಗಿದೆ. ಜೊತೆಗೆ ಸ್ಥಳೀಯ ಯುವಕರ ಈ ನಡೆಗೆ ಸೋಶೀಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಏನಿದು ಘಟನೆ?:
ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಹೋದರ ಸಂಬಂಧಿ ನವೀನ್ ಎಂಬಾತ ಮಹಮದ್ ಪೈಗಂಬರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ವಿಷಯ ತಿಳಿದ ಒಂದು ಕೋಮಿಗೆ ಸೇರಿದ ಐದು ನೂರಕ್ಕೂ ಹೆಚ್ಚು ಮಂದಿ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಏಕಾಏಕಿ ಕಾವಲ್ ಬೈರಸಂದ್ರದಲ್ಲಿನ ಶಾಸಕರ ಮನೆ ಬಳಿ ಜಮಾಯಿಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳ ಗುಂಪು ಶಾಸಕರ ಮನೆ ಒಳಗೆ ಪ್ರವೇಶಿಸಲು ಯತ್ನಿಸಿತು. ಆ ಸಂದರ್ಭ ಗುಂಪೊಂದು ಏಕಾಏಕಿ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದು, ಒಟ್ಟು ಮೂವರು ಈ ಘಟನೆಯಲ್ಲಿ ಬಲಿಯಾಗಿದ್ದಾರೆ.
ಬೆಂಗ್ಳೂರಲ್ಲಿ ಪುಂಡರ ದಾಂಧಲೆ, ಶಾಸಕರ ಮನೆ ಮೇಲೆ ದಾಳಿ, ಸುವರ್ಣ ವರದಿಗಾರರ ಮೇಲೆ ಹಲ್ಲೆ
ಈ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಕುಟುಂಬಸ್ಥರು ಇರಲಿಲ್ಲ. ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜು ಪುಡಿಪುಡಿಯಾಗಿದೆ. ನೋಡನೋಡುತ್ತಿದ್ದಂತೆ ಕಿಡಿಗೇಡಿಗಳ ಗುಂಪು ಶಾಸಕರ ನೆರೆ ಮನೆಗಳ ಮೇಲೂ ಕಲ್ಲು ತೂರಿದೆ. ಶಾಸಕರ ಮನೆ ಬಳಿ ಇದ್ದ ರಸ್ತೆಗಳನ್ನು ಬಂದ್ ಮಾಡಿದೆ. ಸ್ಥಳದಲ್ಲಿದ್ದ ಬೆರಳಣಿಕೆಯಷ್ಟು ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಇದಕ್ಕೆ ಬಗ್ಗದ ದುಷ್ಕರ್ಮಿಗಳು ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ