ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗದ ಮುರುಘಾ ಶರಣರ ಅರ್ಜಿ ವಿಚಾರಣೆ ಬುಧವಾರ ಹೈಕೋರ್ಟ್‌ನಲ್ಲಿ ನಡೆದಿದೆ. ಈ ವೇಳೆ, ಮಠದ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ನೀಡುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು (ಸೆ. 28): ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿತ್ರದುರ್ಗದ ಮುರಘಾ ಶರಣರು, ಜಾಮೀನಿನ ಮೇಲೆ ಹೊರಬರುವ ನಿಟ್ಟಿನಲ್ಲಿ ತೀವ್ರ ಪ್ರಯತ್ನ ಪಡುತ್ತಿದ್ದಾರೆ. ಬುಧವಾರ ಹೈಕೋರ್ಟ್‌ನಲ್ಲಿ ಆರೋಪಿ ಡಾ. ಶಿವಮೂರ್ತಿ ಮುರುಘಾ ಶರಣರ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ಮಠದ ಚೆಕ್‌ಗಳು ಹಾಗೂ ದಾಖಲೆಗಳಿಗೆ ಸಹಿ ಹಾಕಲು ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಮಠ, ಶಿಕ್ಷಣ ಸಂಸ್ಥೆಯ ಚೆಕ್ ಗಳಿಗೆ ಸಹಿ ಹಾಕಲು ಅನುಮತಿ ನೀಡುವಂತೆ ಅವರು ಹೈಕೋರ್ಟ್ ಬಳಿ ಕೇಳಿಕೊಂಡಿದ್ದಾರೆ. ಪ್ರತಿ ತಿಂಗಳು ಮಠದಲ್ಲಿ 200 ಕ್ಕೂ ಅಧಿಕ ಚೆಕ್‌ಗಳಿಗೆ ಸಹಿ ಹಾಕುತ್ತೇನೆ. ತಿಂಗಳ ಅಂತ್ಯ ಸಮೀಪವಾಗುತ್ತಿದ್ದು, ಕೆಲಸಗಾರರಿಗೆ ಸಂಬಳ ನೀಡಬೇಕಿದೆ. ಅದಕ್ಕಾಗಿ ಚೆಕ್‌ಗಳಿಗೆ ಸಹಿ ಹಾಕಬೇಕಿದೆ. ಇಲ್ಲದೇ ಇದ್ದಲ್ಲಿ ಅವರಿಗೆ ಸಂಬಳ ನೀಡಲು ಸಾಧ್ಯವಾಗುವುದಿಲ್ಲ ಎಂದು ಮುರುಘಾ ಶರಣರು ಕೋರ್ಟ್ ಬಳಿ ಕೇಳಿಕೊಂಡಿದ್ದಾರೆ. ಮುರುಘಾ ಶರಣರ ಪರ ವಕೀಲ ಸಂದೀಪ್ ಪಾಟೀಲ್ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಫೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಮಠದ ಶರಣರನ್ನು ಇತ್ತೀಚೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿತ್ತು. ಅಕ್ಟೋಬರ್ 10ರವರೆಗೆ ಅವರು ಇನ್ನು ಜೈಲಿನಲ್ಲೇ ಕಳೆಯಬೇಕಿದೆ.
ವಿಚಾರಣೆಯ ವೇಳೆ ಅಭಿಪ್ರಾಯ ತಿಳಿಸಿದ ಹೈಕೋರ್ಟ್, ನಿಮ್ಮ ಸಮಸ್ಯೆಯಿಂದ ಉದ್ಯೋಗಿಗಳನ್ನು ಉಪವಾಸಕ್ಕೆ ದೂಡಬಾರದು. ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಈ ಬಗ್ಗೆ ವಿವರವಾದ ಮಾಹಿತಿಯುಳ್ಳ ಮೆಮೋ ಸಲ್ಲಿಕೆ ಮಾಡಿ ಎಂದು ಮುರುಘಾ ಶರಣರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇದನ್ನು ಓದಿ: ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!
ಕೋರ್ಟಲ್ಲಿ ನಡೆದಿದ್ದು ಏನು?
ಚಿತ್ರದುರ್ಗದ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಮುನ್ನ ಮಠದ ವಿದ್ಯಾಸಂಸ್ಥೆಗಳ ಸಿಬ್ಬಂದಿಗೆ ಹೇಗೆ ವೇತನ ಪಾವತಿ ಮಾಡಲಾಗುತ್ತಿತ್ತು ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಶರಣರ ಪರ ವಕೀಲರಿಗೆ ಹೈಕೋರ್ಚ್ ಸೂಚಿಸಿದೆ. ಮಠ ಮತ್ತು ವಿದ್ಯಾಪೀಠಕ್ಕೆ ಸಂಬಂಧಿಸಿದ ಚೆಕ್ ಹಾಗೂ ಇತರೆ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸಂದೀಪ್ ಪಾಟೀಲ್ ವಾದ ಮಂಡಿಸಿ, ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರು ಬೃಹನ್ಮಠದ ಪೀಠಾಧಿಪತಿಯಾಗಿದ್ದಾರೆ. ಹಾಗೆಯೇ, ಮಠ ಮತ್ತು ವಿದ್ಯಾಪೀಠದ ಏಕೈಕ ಟ್ರಸ್ಟಿಯಾಗಿದ್ದು, ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಯಿದೆ. ಶರಣರು ಜೈಲಿನಲ್ಲಿರುವ ಕಾರಣ ಮಠದ ವಿದ್ಯಾಸಂಸ್ಥೆಗಳ ನೌಕರರಿಗೆ ಸಂಬಳ ನೀಡಲಾಗುತ್ತಿಲ್ಲ. ಆದ ಕಾರಣ ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.
ಈ ಮನವಿಯನ್ನು ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಕಿರಣ್ ಜವಳಿ, ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡು ತಮ್ಮ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ಇಲ್ಲ. ಅರ್ಜಿದಾರರ ಮನವಿ ಪರಿಗಣಿಸಿದರೆ ಅದು ಮತ್ತೊಬ್ಬರಿಗೂ ದಾರಿಯಾಗಬಲ್ಲದು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರ ಸಮಸ್ಯೆಯಿಂದ ನೌಕರರನ್ನು ಉಪವಾಸಕ್ಕೆ ದೂಡಬಾರದು. ಹಾಗಾಗಿ, ಅರ್ಜಿದಾರರ ಬಂಧನದ ಮುನ್ನ ನೌಕರರಿಗೆ ಹೇಗೆ ಸಂಬಳ ನೀಡಲಾಗುತ್ತಿತ್ತು ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಶರಣರ ಪರ ವಕೀಲರಿಗೆ ಸೂಚಿಸಿ ಗುರುವಾರಕ್ಕೆ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿದ ಕೋರ್ಟ್