
ವರದಿ : ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ (ಏ.29): ಪಿಎಸ್ಐ ನೇಮಕಾತಿ ಅಕ್ರಮ (PSI recruitment Scam) ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ದಿವ್ಯಾ ಹಾಗರಗಿಯನ್ನು (Divya hagargi ) ಕಡೆಗೂ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ದಿವ್ಯಾಗೆ ಆಶ್ರಯ ನೀಡಿದ್ದ ಮಹಾರಾಷ್ಟ್ರದ ( Maharashtra) ಉದ್ಯಮಿಯನ್ನು ಕೂಡ ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ದಿವ್ಯಾ ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದರು.
18 ದಿನಗಳಿಂದ ನಾಪತ್ತೆ: ದಿವ್ಯಾ ಹಾಗರಗಿ, ಪಿ.ಎಸ್.ಐ ಪರೀಕ್ಷೆಯ ಅಕ್ರಮ ನಡೆದ ಜ್ಞಾನಜ್ಯೋತಿ ಶಾಲೆಯ ಕಾರ್ಯದರ್ಶಿ ಮಾತ್ರವಲ್ಲದೇ ಭಾರತೀಯ ಜನತಾ ಪಕ್ಷದ ಮಹಿಳಾ ಘಟಕದ ಕಲಬುರಗಿ ಜಿಲ್ಲೆಯ ಮಾಜಿ ಅಧ್ಯಕ್ಷರು. ಹಾಗಾಗಿ ದಿವ್ಯ ನಾಪತ್ತೆ ಪ್ರಕರಣ ಸಿಐಡಿ ಗೂ ಹಾಗೂ ರಾಜ್ಯ ಸರ್ಕಾರಕ್ಕೂ ತೀವ್ರ ಮುಜುಗರ ಸೃಷ್ಟಿಸಿತ್ತು. ದಿವ್ಯ ಹಾಗರಗಿ ಜೊತೆ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಪರೀಕ್ಷಾ ಮೇಲ್ವಿಚಾರಕರಾದ ಅರ್ಚನಾ ಮತ್ತು ಸುನಂದಾ ಅವರನ್ನೂ ಬಂಧಿಸಲಾಗಿದೆ.
ಇವರೆಲ್ಲ ಮಹಾರಾಷ್ಟ್ರದ ಪುಣೆ ಹೊರವಲಯದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ಕಳೆದ 18 ದಿನಗಳಿಂದ ದಿವ್ಯ ಬೇಟೆಗಾಗಿ ಶೋಧ ನಡೆಸುತ್ತಿದ್ದ ಸಿಐಡಿ, ಈ ಖಚಿತ ಮಾಹಿತಿ ಆಧರಿಸಿ ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಕಳೆದ ರಾತ್ರಿ ದಿವ್ಯ ಹಾಗರಗಿ ಮತ್ತು ಇತರ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
Breaking ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ
ಮಹಾ ಉದ್ಯಮಿ ಶ್ರೀರಕ್ಷೆಯಲ್ಲಿದ್ದ ದಿವ್ಯಾ: ದಿವ್ಯಾ ಹಗರಗಿ ಇದುವರೆಗೂ ಒಂದೇ ಕಡೆ ಇರದೇ ರಾಜ್ಯ ರಾಜ್ಯ ಸುತ್ತಿದ್ದರು ಎನ್ನಲಾಗಿದೆ. ಅದಾಗ್ಯೂ ಆಕೆಯ ರಕ್ಷಣೆಯ ಸಂಪೂರ್ಣ ಉಸ್ತುವಾರಿ ಮಹಾರಾಷ್ಟ್ರದ ಪ್ರಭಾವಿ ಉದ್ಯಮಿ ಸುರೇಶ್ ಕಾಟೆಗಾಂವ್ (Suresh Kategaon) ಎನ್ನುವಾತ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಕಾಟೆಗಾಂವ್ ಸಹ ಅರೆಸ್ಟ್: ದಿವ್ಯಾ ಹಾಗರಗಿ ಮತ್ತು ಟೀಮ್ ಕಳೆದ ರಾತ್ರಿ ಸುರೇಶ್ ಕಾಟೇಗಾಂವ್ ಅವರ ಒಡೆತನದ ಪುನಾ ಹೊರವಲಯದಲ್ಲಿರುವ ಮನೆಯಲ್ಲಿ ವಾಸವಿದ್ದಾಗಲೇ ಸಿಐಡಿ ಟೀಂ ಬಂಧಿಸಿದೆ. ಜೊತೆಗೆ ಇವರಿಗೆ ಇದುವರೆಗೂ ರಕ್ಷಣೆ ನೀಡಿದ ಮಹಾರಾಷ್ಟ್ರದ ಉದ್ಯಮಿ ಸುರೇಶ್ ಕಾಟೆಗಾಂವನನ್ನೂ ಸಿಐಡಿ ಪೊಲೀಸರು ಹೆಡೆಮುರಿ ಕಟ್ಟಿ ಕರೆತರುತ್ತಿದ್ದಾರೆ. ಸುರೇಶ್ ಕಾಟೆಗಾಂವ ಜೊತೆ ದಿವ್ಯಾಗೆ ರಕ್ಷಣೆ ಆರೋಪದ ಮೇಲೆ ಕಾಳಿದಾಸ ಎನ್ನುವ ಇನ್ನೊಬ್ಬ ವ್ಯಕ್ತಿಯನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 22ಕ್ಕೆ ಏರಿಕೆಯಾದಂತಾಗಿದೆ.
ಜ್ಯೋತಿ ಮೂಲಕ ಸುಳಿವು: ಇದೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನಿನ್ನೆ ಶಹಾಬಾದ್ ನಗರಸಭೆಯ SDA ಜ್ಯೋತಿ ಪಾಟೀಲ ಎನ್ನುವ ಮಹಿಳೆಯನ್ನ ಬಂಧಿಸಿದ್ದರು. ಈ ಜ್ಯೋತಿ ಪಾಟೀಲ್ ಬಂಧನದ ನಂತರವೇ, ದಿವ್ಯ ಹಾಗರಗಿ ಅಡಗುತಾಣದ ಬಗೆಗಿನ ಮಹತ್ವದ ಸುಳಿವು ಸಿಐಡಿ ಪೊಲೀಸರಿಗೆ ಲಾಭವಾಯಿತು ಎನ್ನಲಾಗಿದೆ. ಈ ಜೊತೆ ಪಾಟೀಲ್ ಶಾಂತಿಬಾಯಿ ಎನ್ನುವ ಅಭ್ಯರ್ಥಿ ಹಾಗೂ ಅಕ್ರಮದ ಕಿಂಗಪಿನ್ ಮಂಜುನಾಥ ನಡುವೆ ಅಕ್ರಮ ನೇಮಕಾತಿಯ ಡೀಲ್ ಕುದುರಿಸಲು ಮಧ್ಯವರ್ತಿಯಾಗಿದ್ದರು. ಅಲ್ಲದೆ ದಿವ್ಯ ಹಗರಗಿ ಜೊತೆಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದಳು.
ಹೊಸ ತಿರುವು: ದಿವ್ಯ ಹಾಗರಗಿ ಬಂಧನದ ನಂತರ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದೆ. ಅವರು ನೀಡುವ ಮಹತ್ವದ ಸಾಕ್ಷಿ ಹಾಗೂ ಸುಳಿವುಗಳು ಪ್ರಕರಣವನ್ನು ಎಲ್ಲಿಗೆ ಕರೆದೊಯ್ಯಲಿದೆ ಎನ್ನುವ ಕುತೂಹಲ ಮೂಡಿಸಿದೆ. ಆದಾಗ್ಯೂ ದಿವ್ಯ ಹಗರಗಿ ಟೀಮಿಂನ ಇನ್ನೋರ್ವ ಪ್ರಮುಖ ಆರೋಪಿ ಜ್ಞಾನಜ್ಯೋತಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಹಾಗೂ ಅಕ್ರಮದ ಮತ್ತೊಬ್ಬ ರುವಾರಿ ಇಂಜಿನಿಯರ ಮಂಜುನಾಥ್ ಮೇಳಕುಂದಾ ಇನ್ನೂ ಕೂಡ ಸಿಐಡಿಗೆ ಸಿಕ್ಕಿಲ್ಲ. ಇವರು ಸಹ ದಿವ್ಯ ಹಗರಗಿ ಜೊತೆಗೆ ಇದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಕಾಶಿನಾಥ್ ಮತ್ತು ಮಂಜುನಾಥ್ ಇವರ ಜೊತೆಗೆ ಇಲ್ಲ ಎನ್ನುವುದು ದಿವ್ಯ ಬಂಧನದ ನಂತರ ಖಚಿತಪಟ್ಟಿದೆ. ಅವರ ಬಂಧನಕ್ಕೂ ಸಿಐಡಿ ತೀವ್ರ ಶೋಧ ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ