
ಬೆಂಗಳೂರು (ಜ.8): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ (MUDA) ನಿವೇಶನ ಹಂಚಿಕೆ ಹಗರಣದ ತನಿಖಾ ವರದಿಯ ಕುರಿತು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ತನಿಖಾ ಸಂಸ್ಥೆ ಸಲ್ಲಿಸಿರುವ ವರದಿಯನ್ನು ಆಕ್ಷೇಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ತಮ್ಮ ವಾದ ಮಂಡಿಸಿದರು.
ವಿಚಾರಣೆ ವೇಳೆ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರು ವಾದ ಮಂಡಿಸಿ, ತನಿಖಾ ಸಂಸ್ಥೆ ಸಲ್ಲಿಸಿರುವ ಅಂತಿಮ ವರದಿಯಲ್ಲಿ ಒಟ್ಟು 132 ಪ್ರಕರಣಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಅವಕಾಶ ನೀಡಬೇಕು ಎಂದು ವರದಿಯಲ್ಲೇ ಹೇಳಲಾಗಿದೆ. ಆದರೆ, ಒಂದೇ ಪ್ರಕರಣದಲ್ಲಿ ಅರ್ಧ ಭಾಗಕ್ಕೆ 'ಬಿ-ರಿಪೋರ್ಟ್' (B-Report) ಸಲ್ಲಿಸಿ, ಇನ್ನರ್ಧ ಭಾಗಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಾದದ ಸಂದರ್ಭದಲ್ಲಿ ದೂರುದಾರರು ಹೈಕೋರ್ಟ್ ನೀಡಿದ್ದ ಹಿಂದಿನ ಆದೇಶವನ್ನು ಪ್ರಸ್ತಾಪಿಸಿದರು. ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಸಾಕಷ್ಟು ಸಾಕ್ಷ್ಯಗಳು ಇವೆ ಎಂದು ಹೈಕೋರ್ಟ್ ಹೇಳಿತ್ತು ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, 'ಹೈಕೋರ್ಟ್ ಅಂದು ಸಾಕ್ಷ್ಯಗಳಿವೆ ಎಂದು ಹೇಳಿದ್ದು ಕೇವಲ ಮೇಲ್ನೋಟಕ್ಕೆ ಕಂಡುಬಂದ ಅಂಶಗಳ ಆಧಾರದ ಮೇಲೆ ತನಿಖೆಗೆ ಆದೇಶಿಸುವಾಗ ಮಾತ್ರ. ಈಗ ನಡೆದಿರುವ ತನಿಖಾ ವರದಿಯ ಆಧಾರದ ಮೇಲೆ ವಾದ ಮಂಡಿಸಿ' ಎಂದು ಸೂಚಿಸಿದರು.
ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾದ ವರದಿ?
ದೂರುದಾರ ಸ್ನೇಹಮಯಿ ಕೃಷ್ಣ ಅವರು ತನಿಖಾ ಸಂಸ್ಥೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 'ನ್ಯಾಯಾಲಯವು ತನಿಖೆಗೆ ಆದೇಶ ನೀಡುವಾಗ ಕೆಲವು ಗಂಭೀರ ಅಂಶಗಳನ್ನು ಗಮನಿಸಿತ್ತು. ಆದರೆ ತನಿಖಾಧಿಕಾರಿಗಳು ನ್ಯಾಯಾಲಯದ ಆದೇಶದ ಆಶಯಕ್ಕೆ ವಿರುದ್ಧವಾಗಿ ಅಂತಿಮ ವರದಿಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಈ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಬೇಕು' ಎಂದು ಮನವಿ ಮಾಡಿದರು.
ವಿಚಾರಣೆ ಜನೆವರಿ 13ಕ್ಕೆ ಮುಂದೂಡಿಕೆ
ಉಭಯ ಕಡೆಯ ಪ್ರಾಥಮಿಕ ವಾದಗಳನ್ನು ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಿದೆ. ಅಂದು ಬಿ-ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಮೇಲೆ ಹೆಚ್ಚಿನ ವಾದ-ಪ್ರತಿವಾದಗಳು ನಡೆಯುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದಲ್ಲಿ ರಿಲೀಫ್ ಸಿಗುತ್ತದೆಯೇ ಅಥವಾ ಕಾನೂನು ಸಂಕಷ್ಟ ಹೆಚ್ಚಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ