
ದಾವಣಗೆರೆ (ಜ.8): 'ನನಗೆ ನನ್ನ ಪತಿ ಬೇಕು, ಮಗಳಿಗೆ ತಂದೆ ಬೇಕು' ಎಂದು ಪಟ್ಟು ಹಿಡಿದು ಮಹಿಳೆಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳೊಂದಿಗೆ ಪತಿ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ದಾವಣಗೆರೆ ನಗರದ ಚರ್ಚ್ ರಸ್ತೆಯ ಪಿಜೆ ಬಡಾವಣೆಯಲ್ಲಿ ಈ ಹೈಡ್ರಾಮಾ ನಡೆದಿದೆ.
ವಿದ್ಯಾಶ್ರೀ ಎಂಬುವವರೇ ಪ್ರತಿಭಟನೆಗೆ ಕುಳಿತ ಮಹಿಳೆ. ಪಿಜೆ ಬಡಾವಣೆಯಲ್ಲಿರುವ ತಮ್ಮ ಮಾವ ವೆಂಕಟೇಶ ಮೂರ್ತಿ ಅವರ ಮನೆ ಮುಂದೆ ವಿದ್ಯಾಶ್ರೀ ಮಗಳೊಂದಿಗೆ ಕುಳಿತಿದ್ದಾರೆ. ಕಳೆದ 12 ವರ್ಷಗಳ ಹಿಂದೆ ವೆಂಕಟೇಶ ಮೂರ್ತಿ ಅವರ ಪುತ್ರ ಭಾರ್ಗವ್ ಎಂಬುವವರ ಜೊತೆ ವಿದ್ಯಾಶ್ರೀ ವಿವಾಹವಾಗಿತ್ತು. ಸುಖವಾಗಿದ್ದ ಸಂಸಾರದಲ್ಲಿ ಈಗ ಬಿರುಗಾಳಿ ಎದ್ದಿದ್ದು, ನ್ಯಾಯಕ್ಕಾಗಿ ಬೀದಿಗಿಳಿಯುವಂತಾಗಿದೆ.
ದಂಪತಿಗೆ ಹನ್ನೊಂದು ವರ್ಷದ ಹೆಣ್ಣು ಮಗು ಇದೆ. ಆದರೆ, ತನಗೆ ಹೆಣ್ಣು ಮಗು ಆಗಿದೆ ಎಂಬ ಕಾರಣಕ್ಕೆ ಕುಟುಂಬದಲ್ಲಿ ಕಲಹ ಶುರುವಾಗಿದೆ ಎಂದು ವಿದ್ಯಾಶ್ರೀ ಗಂಭೀರವಾಗಿ ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ದಂಪತಿ ಬೇರೆಯಾಗಿ ವಾಸಿಸುತ್ತಿದ್ದಾರೆ. 'ನನ್ನ ಮೇಲೆ ಇಲ್ಲದ ಸಲ್ಲದ ಆರೋಪಗಳನ್ನು ಹೊರಿಸಿ ಈಗ ವಿಚ್ಛೇದನಕ್ಕೆ (Divorce) ಅರ್ಜಿ ಹಾಕಿದ್ದಾರೆ. ಆದರೆ ನನಗೆ ಸಂಸಾರ ಮಾಡಬೇಕಿದೆ, ನನ್ನ ಗಂಡ ನನಗೆ ಬೇಕು' ಎಂದು ವಿದ್ಯಾಶ್ರೀ ಅಳಲು ತೋಡಿಕೊಂಡಿದ್ದಾರೆ.
ಆಕೆಯಿಂದ ನಮಗೆ ಭಯ ಎಂದ ಪತಿ ಕುಟುಂಬ
ಇನ್ನೊಂದೆಡೆ, ವಿದ್ಯಾಶ್ರೀ ಪ್ರತಿಭಟನೆಗೆ ಪತಿ ಭಾರ್ಗವ್ ಮನೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಆಕೆಯಿಂದ ನಮಗೆ ಭಯ ಇದೆ. ಒಂದು ವೇಳೆ ಆಕೆ ಅಲ್ಲಿ ಏನಾದರೂ ಮಾಡಿಕೊಂಡರೆ ಅದಕ್ಕೆ ಜವಾಬ್ದಾರಿ ಯಾರು? ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಕಾನೂನು ಮೂಲಕವೇ ಈ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳುವುದಾಗಿ ಪತಿ ಮನೆಯವರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಬಡಾವಣೆ ಪೊಲೀಸರು
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬಡಾವಣೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಧರಣಿ ಕುಳಿತಿದ್ದ ವಿದ್ಯಾಶ್ರೀ ಹಾಗೂ ಪತಿ ಕುಟುಂಬದವರನ್ನು ಮಾತುಕತೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎರಡು ಕುಟುಂಬಗಳ ನಡುವೆ ಸಂಧಾನ ಅಥವಾ ಕಾನೂನು ಪ್ರಕ್ರಿಯೆಯ ವಿಚಾರಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ