Snehamayi Krishna: ನಟೇಶ್ ಆಡಿಯೋ ಸಾಕ್ಷಿ ಕೋರ್ಟ್ ಕೈಗೆ ತಲುಪದಂತೆ ತಡೆಯಲು ಸ್ನೇಹಮಯಿ ಕೃಷ್ಣ ಅರೆಸ್ಟ್?

Published : Feb 21, 2026, 08:01 AM IST
snehamayi krishna

ಸಾರಾಂಶ

ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಅಪಪ್ರಚಾರ ನಡೆಸಿದ ಆರೋಪದ ಮೇಲೆ  ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮಹತ್ವದ ಆಡಿಯೋ ಸಾಕ್ಷ್ಯವನ್ನು ಸಲ್ಲಿಸುವ ಮುನ್ನವೇ ಈ ಬಂಧನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಬೆಂಗಳೂರು (ಫೆ.21): ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ಅವರ ಫೋಟೋ ಮತ್ತು ಆಡಿಯೋ ಎಡಿಟ್ ಮಾಡಿ ಅಪಪ್ರಚಾರ ನಡೆಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ ಮಹತ್ವದ ಡಿಜಿಟಲ್ ಪುರಾವೆಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ಈ ಬಂಧನ ಕೇವಲ ಅಪಪ್ರಚಾರದ ಮಾಡಿದನೆಂಬ ಆರೋಪಕ್ಕಷ್ಟೇ ಸೀಮಿತವೇ ಅಥವಾ ಇದರ ಹಿಂದೆ ದೊಡ್ಡ ಮಟ್ಟದ ಹುನ್ನಾರವಿದೆಯೇ ಎಂಬ ಪ್ರಶ್ನೆ ಈಗ ಕಾಡತೊಡಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಿದ್ದ ಸಾಕ್ಷಿ!

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಡಿ.ಬಿ. ನಟೇಶ್ ಅವರು ವ್ಯಕ್ತಿಯೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆಯ ಆಡಿಯೋ ಮತ್ತು ಇತರ ಮಹತ್ವದ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಬೆಳಗ್ಗೆಯೇ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ಕೃಷ್ಣ, ಮಧ್ಯಾಹ್ನದ ವೇಳೆಗೆ ಕೋರ್ಟ್ ಆವರಣ ತಲುಪುವ ಮುನ್ನವೇ ಸಿಸಿಬಿ ಪೊಲೀಸರ ಕೈಗೆ ಸಿಲುಕಿದ್ದಾರೆ. ಇದು ಕಾಕತಾಳೀಯವೋ ಅಥವಾ ವ್ಯವಸ್ಥಿತ ಸಂಚೋ ಎಂಬ ಸಂಶಯ ದಟ್ಟವಾಗಿದೆ.

ಕೋರ್ಟ್ ನೀಡಿದ್ದ ಗಡುವು, ತನಿಖೆಯ ಆದೇಶದ ಭೀತಿ?

ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರಿಂದ (ಲೋಕಾಯುಕ್ತ ಪೊಲೀಸರಿಂದ) ಆಕ್ಷೇಪಣೆ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಇಂದು ಮಧ್ಯಾಹ್ನದವರೆಗೆ ಕಾಲಾವಕಾಶ ನೀಡಿತ್ತು. ಒಂದು ವೇಳೆ ಲೋಕಾಯುಕ್ತ ಪೊಲೀಸರು ಆಕ್ಷೇಪಣೆ ಸಲ್ಲಿಸದಿದ್ದರೆ, ದೂರುದಾರರಾದ ಸ್ನೇಹಮಯಿ ಕೃಷ್ಣ ಅವರ ಹೇಳಿಕೆಯನ್ನು ಪರಿಗಣಿಸಿ ತನಿಖೆಗೆ ಆದೇಶ ಮಾಡುವುದಾಗಿ ಕೋರ್ಟ್ ತಿಳಿಸಿತ್ತು. ಆದರೆ ಕೋರ್ಟ್‌ನಿಂದ ಆದೇಶ ಹೊರಬೀಳುವ ಮೊದಲೇ ಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಕುತೂಹಲ ಮೂಡಿಸಿದೆ.

ಆಡಿಯೋ ಸಾಕ್ಷಿ ತಡೆಯಲು ನಡೆದಿದೆಯೇ ಹುನ್ನಾರ?

ಡಿಬಿ ನಟೇಶ್ ವಿರುದ್ಧದ ಆಡಿಯೋ ಕೋರ್ಟ್ ಕೈ ಸೇರುವುದನ್ನು ತಡೆಯಲು ಈ ಬಂಧನ ನಡೆದಿದೆಯೇ? ಎಂಬ ಚರ್ಚೆ ಈಗ ಸಾರ್ವಜನಿಕ ವಲಯದಲ್ಲಿ ಶುರುವಾಗಿದೆ. ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸುವ ಮೂಲಕ ಅವರ ಬಳಿ ಇದ್ದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡ ಸಿಸಿಬಿ, ಆ ಆಡಿಯೋ ನ್ಯಾಯಾಲಯದ ಮುಂದೆ ಬರದಂತೆ ತಡೆಯುವ ಹುನ್ನಾರ ನಡೆಸಿದೆಯೇ ಎಂಬ ಆರೋಪಗಳು ಕೇಳಿಬರುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಡಾ ಹಗರಣದ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್ ಬೆನ್ನಲ್ಲೇ, ಮನೆ, ಕಚೇರಿ ಮೇಲೆ ಸತತ 4 ಗಂಟೆ ದಾಳಿ, ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದೇನು?
Comedy Kiladigalu ದೇವತೆಗಳ ಅವಹೇಳನ ಕೇಸ್: 'ಕಾಮಿಡಿ ಕಿಲಾಡಿ'ತೀರ್ಪುಗಾರರಿಗೂ ಪೊಲೀಸ್ ನೋಟಿಸ್, ಕೋರ್ಟ್ ಮೆಟ್ಟಿಲೇರಿದ ಝೀ!