
ಬೆಂಗಳೂರು (ಫೆ.21): ಖಾಸಗಿ ವಾಹಿನಿಯಲ್ಲಿ ‘ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಸಂಚಿಕೆಯೊಂದರಲ್ಲಿ ಮಹಾಭಾರತದ ಪಾತ್ರಗಳು ಹಾಗೂ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿದ ಆರೋಪ ಸಂಬಂಧ ಕಾರ್ಯಕ್ರಮದ ತೀರ್ಪುಗಾರರನ್ನೂ ತನಿಖೆಗೆ ಒಳಪಡಿಸಲು ಪೊಲೀಸರು ಬಯಸುತ್ತಿದ್ದಾರೆ’ ಎಂದು ಝೀ ಎಂಟರ್‌ಪ್ರೈಸಸ್ ಹೈಕೋರ್ಟ್ ಮುಂದೆ ದೂರಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಕೋರಿ ಝೀ ಎಂಟರ್‌ಪ್ರೈಸಸ್‌ನ ಪ್ರತಿನಿಧಿ ದೀಪಕ್ ಶ್ರೀರಾಮುಲು ಹಾಗೂ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ.ಅನಿಲ್ ಕುಮಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಪ್ರಕರಣದ ತನಿಖೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರಾದ ತಾರಾ, ಜಗ್ಗೇಶ್ ಹಾಗೂ ಮತ್ತೊಬ್ಬ ಸೆಲೆಬ್ರಿಟಿಯನ್ನೂ ತನಿಖೆಗೆ ಹಾಜರಾಗಬೇಕೆಂದು ಬಯಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಸಿದ ನ್ಯಾಯಪೀಠ, ತೀರ್ಪುಗಾರರನ್ನು ಏಕೆ ಕರೆಸಬೇಕು? ಅವರಿಗೆ ಏಕೆ ತೊಂದರೆ ಕೊಡುತ್ತೀರಿ? ಎಂದು ಪ್ರಶ್ನಿಸಿತು. ಹಾಗೆಯೇ, ತೀರ್ಪುಗಾರರಿಗೆ ಪೊಲೀಸರು ನೀಡಿರುವ ಸಮನ್ಸ್ ಪ್ರತಿ ಎಲ್ಲಿ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು.
ಅರ್ಜಿದಾರರ ಪರ ವಕೀಲರು, ಪೊಲೀಸರು ಸಮನ್ಸ್ ನೀಡಿಲ್ಲ. ಅರ್ಜಿದಾರರು ತನಿಖೆಗೆ ಹಾಜರಾದ ಸಂದರ್ಭದಲ್ಲಿ ನಮ್ಮ ಮೂಲಕ ತೀರ್ಪುಗಾರರನ್ನು ಕರೆಸುವ ಯತ್ನ ಮಾಡುತ್ತಿದ್ದಾರೆ. ಅವರ ವಿಳಾಸ ಮತ್ತಿತರ ವಿವರಗಳನ್ನು ನೀಡುವಂತೆ ಹೇಳುತ್ತಿದ್ದಾರೆ ಎಂದರು.
ಸರ್ಕಾರದ ಪರ ವಕೀಲರು, ಈ ಕುರಿತು ತನಿಖಾಧಿಕಾರಿಯಿಂದಲೇ ತಿಳಿದುಕೊಳ್ಳಬಹುದು ಎಂದು ಹೇಳಿದರು.
ಅಂತಿಮವಾಗಿ ಅರ್ಜಿ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದ ಪೀಠ, ಪ್ರಕರಣ ಸಂಬಂಧ ಝೀ ವಾಹಿನಿ, ಕಾರ್ಯಕ್ರಮದ ಕಲಾವಿದರು, ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.
ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಪ್ರಸಾರವಾದ ಹಾಸ್ಯದ ಸ್ಕಿಟ್‌ನ ಪಾತ್ರಧಾರಿಗಳು, ಮಹಾಭಾರತದ ಶ್ರೀಕೃಷ್ಣ, ಪಾಂಡವರು, ಧೃತರಾಷ್ಟ್ರನ ಪಾತ್ರಧಾರಿಗಳನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಆ ಮೂಲಕ ಹಿಂದೂ ಧರ್ಮದ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್ ನರಗುಂದ ಕಳೆದ ನ.15ರಂದು ಹುಬ್ಬಳ್ಳಿಯ ಸಬ್ ಅರ್ಬನ್ ಠಾಣೆಗೆ ದೂರು ನೀಡಿದ್ದರು. ನಂತರ ದೂರನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ