
ಕಿರಣ್.ಕೆ.ಎನ್, ಬೆಂಗಳೂರು
ಬೆಂಗಳೂರು (ಜೂ. 06): ಬೆಂಗಳೂರಿನಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಲೌಡ್ ಸ್ಪೀಕರ್ ಬಳಕೆ ವಿವಾದಕ್ಕೆ (Loudspeaker Row) ಸಂಬಂಧಿಸಿದಂತೆ ಅನುಮತಿ ಪಡೆಯುವಂತೆ ಸರ್ಕಾರ ಆದೇಶಿಸಿತ್ತು. ಅನುಮತಿಗೆ ಅರ್ಜಿ ಸಲ್ಲಿಸಲು 15 ದಿನ ಗಡುವು ನೀಡಲಾಗಿತ್ತು. ಸರ್ಕಾರದ ಆದೇಶದಂತೆ ಪೊಲೀಸ್ ಠಾಣೆ, ಎಸಿಪಿ ಕಚೇರಿಗಳಿಗೆ ಅರ್ಜಿಗಳು ಹರಿದು ಬರುತ್ತಿವೆ. ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ ಸಂಬಂಧ ಸರ್ಕಾರ ಮಾರ್ಗಸೂಚಿಸಿ ಹೊರಡಿಸಿತ್ತು. ಇದರಲ್ಲಿ ಧ್ವನಿವರ್ಧಕ ಬಳಕೆ ಮುನ್ನ ಹದಿನೈದು ದಿನದೊಳಗೆ ನಗರ ವ್ಯಾಪ್ತಿಯಲ್ಲಿ ಎಸಿಪಿ ಹಾಗೂ ಜಿಲ್ಲಾ ಮಟ್ಟದಲ್ಲಿ ಡಿವೈಎಸ್ಪಿಗಳಿಂದ ಅನುಮತಿ ಪಡೆಯುವಂತೆ ಸರ್ಕಾರ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಧ್ವನಿವರ್ಧಕ ಬಳಕೆಗೆ ಆಯಾ ವಿಭಾಗದ ಎಸಿಪಿ ಕಚೇರಿಗೆ ಅರ್ಜಿ ಸಲ್ಲಿಸಿ ಅನುಮತಿಪಡೆಯುವಂತೆ ಅರ್ಜಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದರು. ಹಾಗಾದ್ರೆ ಬೆಂಗಳೂರು ನಗರದಲ್ಲಿ ಈವರೆಗೆ ಎಷ್ಟು ಅರ್ಜಿ ಬಂದಿವೆ ಗೊತ್ತಾ?
ಲೌಡ್ ಸ್ಪೀಕರ್ ಬಳಕೆಗೆ ಅನುಮತಿ ಕೋರಿ ಈವರೆಗೆ 711 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. 711 ಅರ್ಜಿಯಲ್ಲಿ 62 ದೇವಾಲಯ, 611 ಮಸೀದಿ, 42 ಚರ್ಚ್, ಇತರೆ 2 ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: 'ಲೌಡ್ ಸ್ಪೀಕರ್ ಅಜಾನ್' ವಿರುದ್ಧ 2ನೇ ಹಂತದ ಹೋರಾಟಕ್ಕೆ ಸಿದ್ಧತೆ
ಲೌಡ್ ಸ್ಪೀಕರ್ ಬಳಕೆಗೆ ಒಟ್ಟು 711 ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆ ಮತ್ತು ಎಸಿಪಿ ಕಚೇರಿಗೆ ಅರ್ಜಿ ಸಲ್ಲಿಸಿ ಅನುಮತಿ ಕೋರಲಾಗಿದೆ. ಸದ್ಯ ಅರ್ಜಿಗಳನ್ನು ಎಸಿಪಿ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿ ಆ ಬಳಿಕ ಅನುಮತಿ ನೀಡುವ ಬಗ್ಗೆ ಸಮಿತಿ ನಿರ್ಧಾರ ಮಾಡುತ್ತದೆ.
ಲೌಡ್ ಸ್ಪೀಕರ್ ಬಳಕೆಗೆ ಎಸಿಪಿ ನೇತೃತ್ವದ ಸಮಿತಿ ಅನುಮತಿ ಕಡ್ಡಾಯವಾಗಿರುತ್ತದೆ. ಸಮಿತಿ ಅನುಮತಿ ಪಡೆಯುವ ಬಗ್ಗೆ ಸರ್ಕಾರ ಆದೇಶಿಸಿದೆ. ಎಸಿಪಿ, ಬಿಬಿಎಂಪಿ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯನ್ನೊಳಗೊಂಡ ಸಮಿತಿ ಇರುತ್ತೆ. ಸದ್ಯ ಇನ್ನೂ ಲೌಡ್ ಸ್ಪೀಕರ್ ಗೆ ಅನುಮತಿ ಕೋರಿ ಧಾರ್ಮಿಕ ಕೇಂದ್ರಗಳಿಂದ ಅರ್ಜಿಗಳು ಬರುತ್ತಿವೆ. ಅರ್ಜಿಗಳ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ ಮಸೀದಿಗಳಿಂದಲೇ ಹೆಚ್ಚಿನ ಅರ್ಜಿ ಸಲ್ಲಿಕೆಯಾಗುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಸೀದಿಯಿಂದ ತೆರವುಗೊಳಿಸಿದ ಲೌಡ್ ಸ್ಪೀಕರ್ ಶಾಲೆಗೆ ದಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ