ಕರಾವಳಿಗರಿಗೆ ಮರೆತು ಹೋದರಾ ಕೊಂಕಣ್ ರೈಲ್ವೆಯ ಹರಿಕಾರ ಜಾರ್ಜ್ ಫೆರ್ನಾಂಡಿಸ್!

Published : Jun 06, 2022, 01:21 PM ISTUpdated : Jun 03, 2024, 10:18 AM IST
ಕರಾವಳಿಗರಿಗೆ ಮರೆತು ಹೋದರಾ ಕೊಂಕಣ್ ರೈಲ್ವೆಯ ಹರಿಕಾರ ಜಾರ್ಜ್ ಫೆರ್ನಾಂಡಿಸ್!

ಸಾರಾಂಶ

ದೇಶ ಜಾರ್ಜ್‌ ಫರ್ನಾಂಡಿಸ್‌ (George Fernandes) ಅವರ ಸೇವೆಗಳನ್ನು ನೆನಪಿಸಿಕೊಳ್ಳದೇ ಇರುವುದರಲ್ಲಿ ನಾನಾ ಕಾರಣಗಳಿರಬಹುದು. ಆದರೆ, ಭಾರತದ ಪಶ್ಚಿಮ ಕರಾವಳಿಯ (Karavali) ಮಹಾರಾಷ್ಟ್ರ, ಕರ್ನಾಟಕ, ಗೋವಾ ಜನತೆ ಇವರನ್ನು ಯಾವ ಕಾಲಕ್ಕೂ ಮರೆಯಬಾರದು. ಯಾಕೆಂದರೆ, ಅವರಿಲ್ಲದೆ ಇದ್ದಿದ್ದರೆ ಇಂದು ಕರಾವಳಿಗರ ನರನಾಡಿಯಾಗಿರುವ ಕೊಂಕಣ್ ರೈಲ್ವೇ (Konkan Railway) ಆಗುತ್ತಿರಲಿಲ್ಲ..

ಬೆಂಗಳೂರು (ಜೂನ್ 6): ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ (George Fernandes) 1998ರಲ್ಲಿ ರಾಜಸ್ಥಾನದ ಪೋಖ್ರಾಣ್ ನಲ್ಲಿ ಯಶಸ್ವಿಯಾಗಿ ಅಣುಬಾಂಬ್ ಪರೀಕ್ಷೆ ನಡೆಸಿದ ಸಂಭ್ರಮದಲ್ಲಿದ್ದರು. ಆದರೆ, ಅದೇ ಸಮಯದಲ್ಲಿ ಅವರ ಸಮಾಧಾನಕ್ಕೆ ಇನ್ನೊಂದು ಕಾರಣವೂ ಇತ್ತು. ಬರೋಬ್ಬರಿ ದಶಕಗಳ ಕಾಲ ಹೋರಾಟ ನಡೆಸಿದ್ದ ಕೊಂಕಣ್ ರೈಲ್ವೇ (Konkan Railway) ಕನಸು ಸಾಕಾರಗೊಂಡ ಖುಷಿ ಅವರ ಮುಖದಲ್ಲಿತ್ತು. ಮಂಗಳೂರನ್ನು (mangalore) ಮುಂಬೈಗೆ (mumbai) ಬೆಸೆಯುವ ನರನಾಡಿಯಾಗಿರುವ ಇಡೀ ಕೊಂಕಣ್ ರೈಲ್ವೇ ಶ್ರೇಯ ಸಲ್ಲಬೇಕಾಗಿರುವುದು ಮಂಗಳೂರು ಮೂಲದ ಜಾರ್ಜ್ ಫೆರ್ನಾಂಡಿಸ್ ಅವರಿಗೆ.

ಪೋಖ್ರಾಣ್ ನಲ್ಲಿ ಅಣುಬಾಂಬ್ ಪರೀಕ್ಷೆಯ ಯಶಸ್ಸನ್ನು ಶ್ರೇಯವನ್ನು ಜಾರ್ಜ್ ಫರ್ನಾಂಡಿಸ್ ಹಂಚಿಕೊಂಡರೆ, ಕೊಂಕಣ್ ರೈಲ್ವೇಯ ಇಡೀ ಶ್ರೇಯ ಸಲ್ಲಬೇಕಾಗಿರುವುದು ಅವರೊಬ್ಬರಿಗೆ ಮಾತ್ರ. 1989ರಲ್ಲಿ ವಿಪಿ ಸಿಂಗ್  (V P Singh) ನೇತೃತ್ವದ ಜನತಾದಳ ಸರ್ಕಾರದಲ್ಲಿ ಜಾರ್ಜ್ ಫೆರ್ನಾಂಡಿಸ್ ರೈಲ್ವೇ ಸಚಿವರಾಗಿ (Railway Minister) ಅಧಿಕಾರ ಸ್ವೀಕಾರ ಮಾಡಿದ್ದರು. ಅಧಿಕಾರ ವಹಿಸಿಕೊಂಡ ಮೊದಲ ವಾರದಲ್ಲಿಯೇ, ರೈಲ್ವೇ ಮಂಡಳಿಯ ಸಭೆ ಕರೆದಿದ್ದ ಫೆರ್ನಾಂಡಿಸ್, ಅವರ ಮುಂದೆ ತಮ್ಮ ದೊಡ್ಡ ಕನಸನ್ನು ಬಿಚ್ಚಿಟ್ಟಿದ್ದರು.

" ಅಂದು ನಾನು ಇಂಜಿನಿಯರಿಂಗ್ ರೈಲ್ವೇ ಬೋರ್ಡ್ ನ ಸದಸ್ಯನಾಗಿದ್ದೆ. ರಜೆಗಾಗಿ ಕೇರಳದಲ್ಲಿದ್ದೆ. ಅಂದಿನ ಸಭೆಯಲ್ಲಿ ಜಾರ್ಜ್ ಫೆರ್ನಾಂಡಿಸ್ ಮಾತಿನಲ್ಲಿ ನಿಖರ ಆದೇಶವಿತ್ತು. ಅದನ್ನು ಬೇಡಿಕೆಯ ರೂಪದಲ್ಲಿ ಹೇಳಿದ್ದರು. ಬಿಹಾರದ ಗಂಡಗ್ ನದಿಯ ಬಾಘಾದಿಂದ ಚಿಟ್ಟೋನಿಗೆ ಸಂಪರ್ಕ ಕಲ್ಪಿಸುವ ರೈಲ್ವೇ ಸೇತುವೆಯ ನಿರ್ಮಾಣ ಮಾಡಬೇಕು ಎನ್ನುವುದು. ಈ ಪ್ರದೇಶದಿಂದಲೇ ಅವರು ಸಂಸದದರಾಗಿ ಆಯ್ಕೆಯಾಗಿದ್ದರು. ಇನ್ನೊಂದು, ಪಶ್ಚಿಮ ಕರಾವಳಿಯಲ್ಲಿ ಬಾಂಬೆಯಲ್ಲಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೇ ಲೈನ್. ಇಡೀ ಭಾರತದ ರೈಲ್ವೇ ನಕಾಶೆಯಲ್ಲಿ ಮಿಸ್ಸಿಂಗ್ ಲಿಂಗ್ ಆಗಿದ್ದ ಅತ್ಯಂತ ಪ್ರಮುಖ ಟ್ರ್ಯಾಕ್ ಇದಾಗಿತ್ತು' ಎಂದು ಕೊಂಕಣ್ ರೈಲ್ವೆ ಕಾರ್ಪೋರೇಷನ್ ನ ಮೊದಲ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಈ.ಶ್ರೀಧರನ್ ಮಾತು.


ಹೊಸ ಟ್ರ್ಯಾಕ್ ಗೆ ಬಜೆಟ್ ಇದ್ದಿದ್ದೇ 300 ಕೋಟಿ!: ಮೂರು ರಾಜ್ಯಗಳ ನಡುವೆ ಹಂಚಿಹೋಗಿರುವ ಅಂದಾಜು 756 ಕಿಲೋಮೀಟರ್ ಹೊಸ ರೈಲ್ವೇ ಟ್ರ್ಯಾಕ್ ನಿರ್ಮಾಣಕ್ಕೆ ಇದ್ದ ಸವಾಲುಗಳು ಅಷ್ಟಿಷ್ಟಲ್ಲ. ಇಂಜಿನಿಯರಿಂಗ್ ಸವಾಲುಗಳೊಂದಿಗೆ ಹಣಕಾಸಿನ ಸಮಸ್ಯೆಯೂ ಉದ್ಭವಿಸಿತ್ತು. ಕೇಂದ್ರ ಸರ್ಕಾರದ ನೆರವಿಲ್ಲದೆ ಏನೂ ಮಾಡುವಂತಿರಲಿಲ್ಲ. ಅಂದು, ಪ್ರಾಜೆಕ್ಟ್ ಸಿದ್ಧವಾದ ವೇಳೆ 840 ಕಿಲೋಮೀಟರ್ ಗಳ ರೈಲ್ವೇ ಲೈನ್ ಗೆ 1600 ಕೋಟಿ ರೂಪಾಯಿ ಬೇಕಿತ್ತು. ಆದರೆ, ಹೊಸ ರೈಲ್ವೇ ಟ್ರ್ಯಾಕ್ ಗೆ ಬಜೆಟ್ ನಲ್ಲಿ ಮೀಸಲಾಗಿರುತ್ತಿದ್ದ ಹಣವೇ ಬರೀ 300 ಕೋಟಿ ಆಗಿರುತ್ತಿತ್ತು. ಆ ವೇಳೆಗಾಗಲೇ ದೇಶದ ಇತರ ಪ್ರಮುಖ ನಗರಗಳಲ್ಲೂ ಹೊಸ ರೈಲ್ವೇ ಟ್ರ್ಯಾಕ್ ಗಳು ನಿರ್ಮಾಣವಾಗುತ್ತಿದ್ದ ಕಾರಣಕ್ಕೆ ಯಾವುದೇ ಹೊಸ ಯೋಜನೆಗೆ 25 ಕೋಟಿ ಎನ್ನುವುದೇ ಗರಿಷ್ಠ. ಈ ಬಜೆಟ್ ಅನ್ನು ನೋಡಿದ ಕೂಡಲೇ, ರೈಲ್ವೆ ಮಂಡಳಿಯ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ಇದು ಮುಗಿಯಲು ಕನಿಷ್ಠ 20 ರಿಂದ 25 ವರ್ಷಗಳು ಬೇಕು ಎಂದಿದ್ದರು. ಈ ಮಾತನ್ನು ಶ್ರೀಧರನ್ ಕೂಡ ಅಲ್ಲಗಳೆದಿರಲಿಲ್ಲ.

ಆದರೆ, ಜಾರ್ಜ್ ಫೆರ್ನಾಂಡಿಸ್ ಸುಮ್ಮನಿರುವ ವ್ಯಕ್ತಿಯಲ್ಲ. ಹಣವನ್ನು ಕ್ರೋಢಿಕರಣ ಮಾಡುವ ಶ್ರೀಧರನ್ ( E Sreedharan) ನೀಡಿದ ಹೊಸ ಪ್ಲ್ಯಾನ್ ಗೆ ತಕ್ಷಣವೇ ಒಪ್ಪಿಗೆ ನೀಡಿದ್ದರು. ಇದರಲ್ಲಿ ದಕ್ಷಿಣ ಕೇರಳ ರಾಜ್ಯವನ್ನೂ ಸೇರಿಸಿಕೊಂಡರು.  ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳ ರಾಜ್ಯ ಸರ್ಕಾರಗಳು, ಈ ಪ್ರಾಜೆಕ್ಟ್ ನ ಮೂರನೇ ಒಂದರಷ್ಟು ಹಣವನ್ನು ನೀಡಬೇಕು, ಇನ್ನು ಮೂರನೇ ಎರಡರಷ್ಟು ಹಣವನ್ನು ಸಾರ್ವಜನಿಕ ವಲಯದಿಂದ ತೆಗೆದುಕೊಳ್ಳುವ ತೀರ್ಮಾನ ಮಾಡಿದ್ದರು. 1990ರ ಜನವರಿ 2 ರಂದು ಶ್ರೀಧರನ್ ಈ ವರದಿ ನೀಡುತ್ತಿದ್ದಂತೆ ಕೇವ ಎರಡೇ ದಿನದಲ್ಲಿ ಜಾರ್ಜ್ ಫೆರ್ನಾಂಡಿಸ್ ಒಪ್ಪಿಗೆ ನೀಡಿದ್ದರು.

ಕೊಂಕಣ್ ಮೂಲದವರೇ ಆದ ಕೇಂದ್ರ ಹಣಕಾಸು ಸಚಿವ ಮಧು ದಂಡಾವತೆ ಹಾಗೂ ಯೋಜನಾ ಆಯೋಗದ ಉಪ ಚೇರ್ಮನ್ ಆಗಿದ್ದ ರಾಮಕೃಷ್ಣ ಹೆಗ್ದೆ ಅವರ ಮನವೊಲಿಸಿದ ಜಾರ್ಜ್ ಫೆರ್ನಾಂಡಿಸ್ ಕೊನೆಗೆ ಪ್ರಧಾನಿ ವಿಪಿ ಸಿಂಗ್ ಅವರ ಬಳಿ ನೇರವಾಗಿ ತರಳಿ ಈ ಯೋಜನೆಗೆ ಕ್ಲಿಯರೆನ್ಸ್ ನೀಡುವಂತೆ ಹಠ ಹಿಡಿದು ಕುಳಿತುಬಿಟ್ಟಿದ್ದರು.

1990-91ರ ರೈಲ್ವೇ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಪ್ರಸ್ತಾವನೆಯನ್ನು ಸೇರಿಸಲಾಯಿತು ಬಳಿಕ ಕೊಂಕಣ ರೈಲ್ವೇ ನಿಗಮವನ್ನು ರಚಿಸಲಾಯಿತು ಮತ್ತು ಭಾರತದಲ್ಲಿ ರೈಲ್ವೆ ನಿರ್ಮಾಣದ ಇತಿಹಾಸದಲ್ಲಿ ಇದುವರೆಗೆ ಎದುರಿಸದ ಅತ್ಯಂತ ಕಷ್ಟಕರವಾದ ಭೂಪ್ರದೇಶಗಳ ಮೂಲಕ ಹಾದುಹೋಗುವ ಹೊಸ ರೈಲ್ವೆ ಮಾರ್ಗವು ದಾಖಲೆಯ 7 ವರ್ಷಗಳ ಅಲ್ಪಾವಧಿಯಲ್ಲಿ ಪೂರ್ಣಗೊಂಡಿತ್ತು. ಜಾರ್ಜ್ ಫೆರ್ನಾಂಡಿಸ್ ರಂಥ ಅಗಾಧ ಇಚ್ಛಾಶಕ್ತಿಯ ವ್ಯಕ್ತಿ, ಇಡೀ ದೇಶದಲ್ಲಿ ನೀಡಿದ ಅತ್ಯಂತ ದೊಡ್ಡ ಸಾಧನೆಯಾಗೊ ಇಂದಿಗೂ ಕೊಂಕಣ್ ರೈಲ್ವೇ ಉಳಿದುಕೊಂಡಿದೆ. ಆದರೆ, ಕರಾವಳಿಗರಲ್ಲಿ ಮಾತ್ರ ಅವರು ದಿನೇ ದಿನೇ ನೆನಪಿನಿಂದ ಅಳಿಸಿಹೋಗುತ್ತಿದ್ದಾರೆ ಎನ್ನುವುದು ಬೇಸರದ ಸಂಗತಿ.

1998ರ ಜಾರ್ಜ್ ಭಾಷಣ 2014ರ ಫಲಿತಾಂಶಕ್ಕೆ ಭೂಷಣ: ಸಿಪಿಎಂ, ಕಾಂಗ್ರೆಸ್ ಚಿಂದಿ ಚಿತ್ರಾನ್ನ!

ಅಗಾಧ ಬದಲಾವಣೆ ತಂದಿದ್ದ ಕೊಂಕಣ್ ರೈಲ್ವೇ: ಈ ಯೋಜನೆಯನ್ನು ಪರ್ವತ ಭೂಪ್ರದೇಶದಲ್ಲಿ ಸುಮಾರು 2,000 ಸೇತುವೆಗಳು ಮತ್ತು 92 ಸುರಂಗಗಳೊಂದಿಗೆ ಸಾಧನೆ ಮಾಡಲಾಗಿದೆ. ಇದು ಶತಮಾನದ ಅತ್ಯಂತ ಕಷ್ಟಕರವಾದ ರೈಲ್ವೇ ಕೆಲಸವೆಂದೂ ಗುರುತಿಸಲ್ಪಟ್ಟಿದೆ, ಕೊಂಕಣ್ ಮಾರ್ಗದ ಮೊದಲ ರೈಲು ಜನವರಿ 26, 1998 ರಂದು ಕಾರ್ಯನಿರ್ವಹಿಸಿತು. ಮಂಗಳೂರು ಹಾಗೂ ಬಾಂಬೆಯ ಸಂಪರ್ಕ ನಿಕಟವಾಗಿರುವಂಥದ್ದು. ಆದರೆ, ಈ ಎರಡೂ ನಗರಗಳ ಸಂಪರ್ಕ ಸುಲಭವಾಗಿರಲಿಲ್ಲ. 1980ರವರೆಗೂ ಮಂಗಳೂರಿಗರು ಚಿಕ್ಕಮಗಳೂರಿನ ಕಡೂರಿನವರೆಗೂ ಕೆಎಸ್ಆರ್ ಟಿಸಿ ಬಸ್ ನಲ್ಲಿ ತೆರಳಿ, ಅಲ್ಲಿಂದ ಮುಂಬೈಗೆ ರೈಲಿನ ಮೂಲಕ ಹೋಗಬೇಕಿತ್ತು. ಅಂದಾಜು 48 ಗಂಟೆಗಳ ಪ್ರಯಾಣ ಇದಾಗಿರುತ್ತಿತ್ತು. ಆದರೆ, 1980ರ ಬಳಿಕ ಮಂಗಳೂರು ಹಾಗೂ ಬಾಂಬೆ ನಡುವೆ ನೇರ ಬಸ್ ಸೇವೆ ಆರಂಭವಾದಾಗ, ಪ್ರಯಾಣ ಸಾವಿರ ಕಿಲೋಮೀಟರ್ ಗೆ ಇಳಿದಿದ್ದರೆ,24-28 ಗಂಟೆಗಳ ಕಾಲ ಬಸ್ ನಲ್ಲಿ ಕೂರಬೇಕಿತ್ತು.

ಸಾಮಾನ್ಯರಂತಿದ್ದ ಅಸಾಮಾನ್ಯ ಮೋಡಿಗಾರ ಜಾರ್ಜ್!: ಇದು ಆಪ್ತ ಗೆಳೆಯನ ಮಾತು

ಖಂಡಲಾ ಘಾಟ್ ಅಗಲೀಕರಣ ಮಾಡಿದ ಬಳಿಕ ಪ್ರಯಾಣದ ಸಮಯ 18 ಗಂಟೆಗೆ ಇಳಿದಿತ್ತು. ಆದರೆ, 1998ರಲ್ಲಿ ಕೊಂಕಣ್ ರೈಲ್ವೇ ಸೇವೆ ಆರಂಭವಾದಾಗ, 18 ಗಂಟೆಗೂ ಕಡಿಮೆ ಸಮಯದಲ್ಲಿ ಮಂಗಳೂರಿಗರು ಬಾಂಬೆ ತಲುಪುವುದು ಮಾತ್ರವಲ್ಲ, ಪ್ರಯಾಣದ ವೆಚ್ಚ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಕೊಂಕಣ್ ಮಾರ್ಗದಲ್ಲಿ ಫೆರ್ನಾಂಡಿಸ್ ಅವರ ಸೇವೆಯನ್ನು ಗುರುತಿಸುವ ಸಲುವಾಗಿ ಗೋವಾದ ಮಡಗಾಂವ್ ನಲ್ಲಿ ಜಾರ್ಜ್ ಫೆರ್ನಾಂಡಿಸ್ ಇನ್ಸ್ ಟಿಟ್ಯೂಟ್ ಆಫ್ ಟನಲ್ ಟೆಕ್ನಾಲಜಿಯನ್ನು ಕೆಆರ್ ಸಿಎಲ್ ಆರಂಭಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ