
ಬೆಂಗಳೂರು(ಮೇ.28): ಮುಂಗಾರು ಮಳೆ ಸುರಿಸುವ ನೈಋುತ್ಯ ಮಾನ್ಸೂನ್ ಮಾರುತಗಳು ಮೇ 31ರಂದು ಕೇರಳ ಪ್ರವೇಶಿಸಲಿದ್ದು, ಜೂನ್ ಮೊದಲ ವಾರದ ಕೊನೆಗೆ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆಯಿದೆ. ಅಂದರೆ 1 ವಾರ ತಡವಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತೀಚೆಗೆ ಸೃಷ್ಟಿಯಾದ 2 ಚಂಡಮಾರುತಗಳೇ ವಿಳಂಬಕ್ಕೆ ಕಾರಣ.
ಮುಂಗಾರು ಜೂನ್ ಮೊದಲ ವಾರದಲ್ಲಿ ರಾಜ್ಯ ಪ್ರವೇಶ ಮಾಡುವ ಸಾಧ್ಯತೆಯಿದ್ದರೂ ಹಾಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ (ಅಡ್ಡಮಳೆ) ಮೇ 30ರವರೆಗೂ ತನ್ನ ಪ್ರತಾಪ ತೋರಲಿದ್ದು, ರಾಜ್ಯಾದ್ಯಂತ ಗುಡುಗು ಮಿಂಚಿನಿಂದ ಕೂಡಿದ ಮಳೆ ಮಾಸಾಂತ್ಯದ ವರೆಗೂ ಸುರಿಯಲಿದೆ.
ವಾಡಿಕೆಯಂತೆ ಪ್ರತಿ ವರ್ಷ ಜೂನ್ 1ರಿಂದ ಮುಂಗಾರು ಆರಂಭ ಎನ್ನಲಾದರೂ ಮಾನ್ಸೂನ್ ಮಾರುತಗಳ ಪ್ರವೇಶದಲ್ಲಿನ ವಿಳಂಬ ಇನ್ನಿತರ ಕಾರಣಗಳಿಂದ ಒಂದು ವಾರ ತಡವಾಗಿ ಮುಂಗಾರು ಆರಂಭವಾಗಬಹದು. ಅಂದರೆ, ಮೇ 31ಕ್ಕೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಿ ಅದಾದ ಒಂದು ವಾರದಲ್ಲಿ ರಾಜ್ಯ ಪ್ರವೇಶ ಮಾಡಲಿದೆ.
3 ರಾಜ್ಯಗಳಲ್ಲಿ ಯಾಸ್ ಭಾರೀ ಅನಾಹುತ : ಮುಂದುವರೆದ ಭಾರೀ ಮಳೆ
ಇಂದಿನಿಂದ ಉತ್ತಮ ಮಳೆ ಸಾಧ್ಯತೆ:
ನೈಋುತ್ಯ ಮಾನ್ಸೂನ್ ಮಾರುತಗಳು ಹಾಗೂ ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ತೀವ್ರಗೊಂಡ ಲಕ್ಷಣಗಳು ಕಂಡು ಬಂದಿವೆ. ಈ ಕಾರಣದಿಂದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರದಿಂದ 3 ದಿನ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ. ಇದೇ ವೇಳೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ಬೀಳುವ ಸಂಭವವಿದ್ದು, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಲಿದೆ.
ಹೀಗೆ ಮುಂಗಾರು ಒಂದು ವಾರ ತಡವಾಗಲು ಅರಬ್ಬಿ ಸಮುದ್ರದಲ್ಲಿ ‘ತೌಕ್ಟೆ’ ಹಾಗೂ ಬಂಗಾಳಕೊಲ್ಲಿಯಲ್ಲಿ ’ಯಾಸ್’ ಚಂಡಮಾರುತ ಕಾಣಿಸಿಕೊಂಡಿದ್ದು ಕಾರಣ. ಈ ಚಂಡಮಾರುತಗಳಿಂದ ಮೋಡಗಳಲ್ಲಿನ ತೇವಾಂಶ ಪ್ರಮಾಣ ತುಸು ಕಡಿಮೆಯಾಗಿರುತ್ತದೆ. ಹೀಗಾಗಿ ತಡವಾಗಿದೆ. ಜತೆಗೆ, ಮೊದಲ ಎರಡು ವಾರ ಅಷ್ಟಾಗಿ ಮಳೆ ಬರುವುದಿಲ್ಲವೆಂದು ಕೂಡ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೇ 27ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ (5 ಸೆಂ.ಮೀ), ಪಣಂಬೂರು (4 ಸೆಂ.ಮೀ), ದಕ್ಷಿಣ ಕನ್ನಡದ ಮೂಡುಬಿದಿರೆ, ಉಡುಪಿಯ ಕೋಟಾ, ರಾಮನಗರ, ಮಂಗಳೂರು, ವಿಟ್ಲ, ಧರ್ಮಸ್ಥಳ ಸುತ್ತಮುತ್ತಲಿನ ಊರುಗಳಲ್ಲಿ ತುಂತುರು ಮಳೆ ದಾಖಲಾಗಿದೆ.
ಬೀದರ್ (36.2ಡಿ.ಸೆ.), ಕಲಬುರಗಿ (38.9), ವಿಜಯಪುರ (38), ರಾಯಚೂರು (38.4), ಕಾರವಾರದಲ್ಲಿ (34.3ಡಿ.ಸೆ.) ರಾಜ್ಯದ ಗರಿಷ್ಠ ತಾಪಮಾನ ದಾಖಲಾಗಿದೆ. ಚಿಕ್ಕಮಗಳೂರಿನಲ್ಲಿ (18.6ಡಿ.ಸೆ.) ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ