* ಮಹಾರಾಷ್ಟ್ರ ನಂತರ ಇಷ್ಟು ಸಂಖ್ಯೆ ದಾಟಿದ 2ನೇ ರಾಜ್ಯ
* ಒಂದೇ ದಿನ 24214 ಕೇಸ್, 31,459 ಮಂದಿ ಗುಣಮುಖ, 476 ಸಾವು
* ಸಕ್ರಿಯ ಸೋಂಕಿತರ ಸಂಖ್ಯೆ 4 ಲಕ್ಷಕ್ಕೆ ಇಳಿಕೆ
ಬೆಂಗಳೂರು(ಮೇ.28): ರಾಜ್ಯದಲ್ಲಿ ಗುರುವಾರ 24,214 ಮಂದಿಯಲ್ಲಿ ಸೋಂಕು ಪತ್ತೆಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 25 ಲಕ್ಷ ಗಡಿ ದಾಟಿದೆ. ಮಹಾರಾಷ್ಟ್ರ ನಂತರ ಈ ಸಂಖ್ಯೆಯನ್ನು ದಾಟಿದ ದೇಶದ ಎರಡನೇ ರಾಜ್ಯ ಕರ್ನಾಟಕವಾಗಿದೆ.
ಇದೇ ವೇಳೆ ಗುರುವಾರ 24,214 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 31,459 ಮಂದಿ ಗುಣಮುಖರಾಗಿದ್ದಾರೆ. 476 ಮಂದಿ ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 25,23,998 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿರುವ ಎರಡನೇ ರಾಜ್ಯ ಕರ್ನಾಟಕ. ಮಹಾರಾಷ್ಟ್ರದಲ್ಲಿ 57 ಲಕ್ಷ ಸೋಂಕಿತರಿದ್ದು ಮೊದಲ ಸ್ಥಾನದಲ್ಲಿದೆ. ಬೆಂಗಳೂರು ನಗರದಲ್ಲಿ 5,949 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಉಳಿದ ಪ್ರಕರಣಗಳು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವರದಿಯಾಗಿವೆ.
ಪಾಸಿಟಿವಿಟಿ ಶೇ.17.5ಕ್ಕೆ ಇಳಿಕೆ:
ಒಟ್ಟು 1.37 ಲಕ್ಷ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ. 17.59ಕ್ಕೆ ಕುಸಿದಿದೆ. ಸತತ ಎರಡನೇ ದಿನ ಶೇ.20 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದೆ. ಮರಣ ದರ ಕೂಡ ಸತತ ಎರಡು ದಿನದಿಂದ ಶೇ.2ರೊಳಗೆ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 273 ಮಂದಿ ಮೃತರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೋವಿಡ್‌ಗೆ 27,405 ಮಂದಿ ಮೃತರಾಗಿದ್ದಾರೆ. ಇದೇ ವೇಳೆ ಹೊಸ ಸೋಂಕಿತರಿಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿರುವ ಪ್ರವೃತ್ತಿ ಮುಂದುವರಿದಿದ್ದು ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 4.02 ಲಕ್ಷಕ್ಕೆ ಇಳಿದಿದೆ. ರಾಜ್ಯದಲ್ಲಿ ಈವರೆಗೆ 20.94 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಅಂದರೆ ಸೋಂಕಿತರಲ್ಲಿ ಶೇ.83 ಮಂದಿ ಈಗಾಗಲೇ ಚೇತರಿಸಿಕೊಂಡಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಆನ್‌ಸೈಟ್ ರಿಜಿಸ್ಟ್ರೇಶನ್‌ಗೆ ಅವಕಾಶ ನೀಡಿದ ಕೇಂದ್ರ!
1 ಕೋಟಿ ದಾಟಿದ ಲಸಿಕೆ ಫಲಾನುಭವಿಗಳು
ರಾಜ್ಯದ ಒಟ್ಟು 7 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ ಮಂದಿ ಲಸಿಕೆ ಸ್ವೀಕರಿಸಿದ್ದಾರೆ. ಈ ಪೈಕಿ 26.65 ಲಕ್ಷ ಮಂದಿ ಎರಡನೇ ಡೋಸ್ ಕೂಡ ಸ್ವೀಕರಿಸಿದ್ದು ಇವರ ಲಸಿಕಾ ಕರಣ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಉಳಿದ 6 ಕೋಟಿ ಜನರಿಗೆ ನವೆಂಬರ್ ಒಳಗೆ ಲಸಿಕೆ ನೀಡುವ ಗುರಿ ಸರ್ಕಾರದ್ದು. ಇದರಿಂದಾಗಿ ರಾಜ್ಯದ ಪ್ರತಿ 7 ಜನರಲ್ಲಿ ಒಬ್ಬರು ಕನಿಷ್ಠ ಪಕ್ಷ ಕೋವಿಡ್ ಲಸಿಕೆಯ 1 ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
45 ವರ್ಷ ಮೇಲ್ಪಟ್ಟಒಟ್ಟು 82.28 ಲಕ್ಷ ಮಂದಿ ಲಸಿಕೆ ಪಡೆದಿದ್ದು ಇವರಲ್ಲಿ 19.91 ಲಕ್ಷ ಮಂದಿಯ ಎರಡನೇ ಡೋಸ್ ಕೂಡ ಪೂರ್ಣಗೊಂಡಿದೆ. ಉಳಿದಂತೆ ಆರೋಗ್ಯ ಕಾರ್ಯಕರ್ತರು 7.13 ಲಕ್ಷ, ಮುಂಚೂಣಿ ಕಾರ್ಯಕರ್ತರು 5.83 ಲಕ್ಷ, 18 ರಿಂದ 44 ವರ್ಷದೊಳಗಿನ 5.63 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರ ಸಮುದಾಯದಲ್ಲಿ 4.68 ಲಕ್ಷ, ಮುಂಚೂಣಿ ಕಾರ್ಯಕರ್ತರಲ್ಲಿ 2.05 ಲಕ್ಷ ಮಂದಿ ಮೊದಲ ಡೋಸ್ ಪಡೆದಿದ್ದಾರೆ.
ಗುರುವಾರ ಒಟ್ಟು 1.58 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. 18 ರಿಂದ 44 ವರ್ಷದೊಳಗಿನ 83,850 ಮಂದಿ, 45 ವರ್ಷ ಮೇಲ್ಪಟ್ಟಒಟ್ಟು 65 ಸಾವಿರ ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಒಟ್ಟು 9 ಸಾವಿರ ಮಂದಿ ಲಸಿಕೆ ಸ್ವೀಕರಿಸಿದ್ದಾರೆ.
ಬಳ್ಳಾರಿ 22, ಮೈಸೂರು 18, ಬೆಳಗಾವಿ ಮತ್ತು ಧಾರವಾಡ ತಲಾ 15, ತುಮಕೂರು 14, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ ತಲಾ 13, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 11 ಮಂದಿ ಮೃತರಾಗಿದ್ದಾರೆ. ಮೈಸೂರು 2,240, ಹಾಸನ 1,505, ತುಮಕೂರು 1,219, ಬೆಳಗಾವಿ 1,147 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ.
ರಾಜ್ಯದಲ್ಲಿ ಈವರೆಗೆ ಒಟ್ಟು 25 ಗಂಭೀರ ಅಡ್ಡ ಪರಿಣಾಮದ ಪ್ರಕರಣಗಳು ಕಾಣಿಸಿಕೊಂಡಿದೆ. ಗುರುವಾರ ಒಟ್ಟು 1.58 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. 18 ರಿಂದ 44 ವರ್ಷದೊಳಗಿನ 83,850 ಮಂದಿ, 45 ವರ್ಷ ಮೇಲ್ಪಟ್ಟ ಒಟ್ಟು 65 ಸಾವಿರ ಮಂದಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಒಟ್ಟು 9 ಸಾವಿರ ಮಂದಿ ಲಸಿಕೆ ಸ್ವೀಕರಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona