ಅಸಾಧ್ಯವನ್ನು ಸಾಧ್ಯವಾಗಿಸಿದ ಮೋದಿ: ಸಿಎಂ ಬೊಮ್ಮಾಯಿ

Published : Jun 28, 2022, 05:00 AM IST
ಅಸಾಧ್ಯವನ್ನು ಸಾಧ್ಯವಾಗಿಸಿದ ಮೋದಿ: ಸಿಎಂ ಬೊಮ್ಮಾಯಿ

ಸಾರಾಂಶ

ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿ. ಅಧಿಕಾರ ಪೂರ್ವ ಮತ್ತು ನಂತರದ ದಿನಗಳಲ್ಲೂ ವಿಚಾರಧಾರೆಯಲ್ಲಿ ಬದಲಾವಣೆ ಕಾಣದ ಅಪರೂಪದ ವ್ಯಕ್ತಿ ಮೋದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು. 

ಬೆಂಗಳೂರು (ಜೂ.28): ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿ. ಅಧಿಕಾರ ಪೂರ್ವ ಮತ್ತು ನಂತರದ ದಿನಗಳಲ್ಲೂ ವಿಚಾರಧಾರೆಯಲ್ಲಿ ಬದಲಾವಣೆ ಕಾಣದ ಅಪರೂಪದ ವ್ಯಕ್ತಿ ಮೋದಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು. ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ 12 ವರ್ಷ ಮತ್ತು ಪ್ರಧಾನಿಯಾಗಿ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಇಲಾಖೆಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ರೂಪಾ ಪಬ್ಲಿಕೇಷನ್‌ ಹೊರತಂದಿರುವ ‘ಮೋದಿ @20 ಡ್ರೀಮ್ಸ್‌ ಮೀಟ್‌ ಡೆಲಿವರಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನೆ ಮನೆಗೆ ನೀರು ಕೊಡುತ್ತೇನೆ ಎಂದು ಹಿಂದಿನ ಯಾವ ಪ್ರಧಾನಿಯೂ ಹೇಳುವ ಧೈರ್ಯ ಮಾಡಿರಲಿಲ್ಲ. ಏಕೆಂದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಭಗೀರಥ ಪ್ರಯತ್ನ ಬೇಕು. ಆದರೆ ಮೋದಿಯವರು ಆ ಬದ್ಧತೆ ಪ್ರದರ್ಶಿಸಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಅಧಿಕಾರ ಇಲ್ಲದಿದ್ದಾಗಲೂ ಮತ್ತು ಅಧಿಕಾರ ಬಂದ ಬಳಿಕವೂ ಮೋದಿಯವರ ವಿಚಾರಧಾರೆಯಲ್ಲಿ ಬದಲಾವಣೆಯಾಗಿಲ್ಲ. ಆದರ್ಶ, ಬದುಕುವ ಶೈಲಿ, ಸಹಾಯ ಮಾಡುವ ಗುಣದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅರಣ್ಯಾಧಿಕಾರಿಗಳೇ 15 ದಿನ ಕಾಡಲ್ಲಿರಿ: ಸಿಎಂ ಬೊಮ್ಮಾಯಿ

ತಾವು ಅನುಭವಿಸಿದ ಕಷ್ಟಗಳನ್ನು ಬೇರೆಯವರು ಅನುಭವಿಸಬಾರದು ಎಂಬ ಅತ್ಯಂತ ಮಾನವೀಯ ಗುಣವುಳ್ಳ ವ್ಯಕ್ತಿ ಮೋದಿ. ಬಹಳಷ್ಟುಮಂದಿ ಅಧಿಕಾರ ಪಡೆಯಲು, ಪಡೆದ ಅಧಿಕಾರ ಉಳಿಸಿಕೊಳ್ಳಲು ಬಹಳಷ್ಟುಹೋರಾಟ ನಡೆಸುತ್ತಾರೆ. ಆದರೆ ಅಧಿಕಾರದ ರಾಜಕಾರಣ ಮಾಡದೇ ಜನರ ರಾಜಕಾರಣ ಮಾಡಿದ್ದರಿಂದ ಮೋದಿಯವರು ದೇಶದ ಇತಿಹಾಸ, ಚರಿತ್ರೆ, ಭವಿಷ್ಯದಲ್ಲಿ ಸದಾಕಾಲ ಚಿರಸ್ಮರಣೀಯರಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸ್ವಚ್ಛತೆ ಕಲ್ಪನೆ ನೀಡಿದ್ದು ಮೋದಿ: ಸ್ವಚ್ಛ ಭಾರತ ಸಣ್ಣ ವಿಷಯ ಎಂದು ಭಾರತದ ಯಾವ ಪ್ರಧಾನಿಯೂ ಇದರ ಬಗ್ಗೆ ಮಾತನಾಡಿರಲಿಲ್ಲ. ಆದರೆ ಮೋದಿಯವರು ಪ್ರಧಾನಿಯಾದ ಬಳಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಿದ ನಂತರ ಮೊದಲು ಮಾತನಾಡಿದ್ದು ಸ್ವಚ್ಛ ಭಾರತದ ಬಗ್ಗೆ. ಇದು ದೇಶದಲ್ಲಿ ಬಹುದೊಡ್ಡ ಬದಲಾವಣೆಗೆ ನಾಂದಿ ಹಾಡಿತು. ಸ್ವಚ್ಛತೆಯ ಕಲ್ಪನೆಯನ್ನು ನೀಡಲು ಮೋದಿಯೇ ಬರಬೇಕಾಯಿತು ಎಂದು ಹೇಳಿದರು.

ಮೋದಿಯವರ ಬಾಲ್ಯ ಕಷ್ಟಕಾರ್ಪಣ್ಯದಿಂದ ಕೂಡಿತ್ತು. ಗುಜರಾತ್‌ನಲ್ಲಿ ಚಿಕ್ಕಪುಟ್ಟಕೆಲಸ ಮಾಡಿದರು. ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದರು. ಬಡತನ, ನೋವು, ಹಸಿವು, ಅಪಮಾನವನ್ನು ಅನುಭವಿಸಿದರು. ಇದೆಲ್ಲದರ ನಡುವೆಯೂ ತತ್ತ್ವ , ಆದರ್ಶ ಬೆಳೆಸಿಕೊಂಡರು. ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿ ರಾಮಕೃಷ್ಣ ಪರಮಹಂಸರು. ವಿವೇಕಾನಂದರ ವಿಚಾರಗಳನ್ನು ಸ್ಪಷ್ಟವಾಗಿ ತಿಳಿದುಕೊಂಡು, ಜೀವನದಲ್ಲಿ ಅಳವಡಿಸಿಕೊಂಡರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಪ್ರಚಾರಕರು ಎಂದು ಬಣ್ಣಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಲೋಗನಾಥನ್‌ ಮುರುಗನ್‌, ಸಚಿವರಾದ ವಿ.ಸೋಮಣ್ಣ, ಬಿ.ಸಿ.ಪಾಟೀಲ್‌, ಅಶ್ವಥ ನಾರಾಯಣ, ಸುನೀಲ್‌ಕುಮಾರ್‌, ಶಾಸಕ ಉದಯ್‌ ಗರುಡಾಚಾರ್‌, ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ಇಸ್ಫೋಸಿಸ್‌ ಪ್ರತಿಷ್ಠಾನದ ಸುಧಾ ಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನೂರಾಧಾ ಮತ್ತಿತರರು ಉಪಸ್ಥಿತರಿದ್ದರು.

ಮೋದಿ ಕೈಗೊಂಡ ಐತಿಹಾಸಿಕ ನಿರ್ಧಾರ: ಮೋದಿಯವರು ಪ್ರಧಾನಿಯಾದ ನಂತರ ತ್ರಿವಳಿ ತಲಾಖ್‌, ಆರ್ಟಿಕಲ್‌ 370 ರದ್ದು, ಜಿಎಸ್‌ಟಿ ಕಾನೂನು ಜಾರಿ, ನೋಟ್‌ ಬ್ಯಾನ್‌ ಸೇರಿದಂತೆ ಹಲವು ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್‌ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು, ಉಚಿತ ಲಸಿಕೆ ನೀಡಿಕೆ ವಿಶ್ವದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು. ಮೋದಿಯವರ ಬಾಲ್ಯ ಮತ್ತು ಪ್ರಧಾನಿ ಆಗುವವರೆಗಿನ ಹಾದಿ ಕಠಿಣ ಪರಿಶ್ರಮದಿಂದ ಕೂಡಿದೆ. ಪ್ರತಿಯೊಬ್ಬ ವ್ಯಕ್ತಿಯೂ ಮೋದಿಯವರ ವ್ಯಕ್ತಿತ್ವ ಮತ್ತು ಜೀವನದಿಂದ ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದರು.

ತುರ್ತು ಪರಿಸ್ಥಿತಿ ವಿರುದ್ಧ ಬೀದಿಗಿಳಿದು ಹೋರಾಡಿದ್ದೆ: ಸಿಎಂ ಬೊಮ್ಮಾಯಿ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ಜಿ-20 ಶೃಂಗಸಭೆಯನ್ನು 2023ರಲ್ಲಿ ಆಯೋಜಿಸಲಾಗುವುದು. ವಿಶ್ವದ 20 ಪ್ರಮುಖ ದೇಶಗಳ ಸಮ್ಮೇಳನ ಈ ಭಾರಿ ದೇಶದಲ್ಲಿ ನಡೆಯಲಿದೆ. ಬೆಂಗಳೂರಿನಲ್ಲೂ 9 ಸಭೆಗಳನ್ನು ಆಯೋಜಿಸಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ