ಮುಂದಿನ ಕೆಂಪೇಗೌಡ ಜಯಂತಿಗೂ ಮುನ್ನ ವಿಧಾನಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ.
ಬೆಂಗಳೂರು (ಜೂ.28): ಮುಂದಿನ ಕೆಂಪೇಗೌಡ ಜಯಂತಿಗೂ ಮುನ್ನ ವಿಧಾನಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿ ಮತ್ತು ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಬದುಕಿನ ಆದರ್ಶಗಳಿಂದಾಗಿ ಕೆಂಪೇಗೌಡ ಅವರು ನಾಡಪ್ರಭು ಎಂಬ ಬಿರುದನ್ನು ಪಡೆದು, ನಾಡಿನ ಸಮಗ್ರ ಚಿಂತನೆ ಮಾಡುವ ಮೂಲಕ ಪ್ರತಿ ಜನರ ಬದುಕಿಗೂ ಕೊಡುಗೆ ನೀಡಿದ್ದಾರೆ. ಅಂತಹವರ ಪ್ರತಿಮೆ ಶಕ್ತಿಸೌಧದಲ್ಲಿ ಹಲವು ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಿತ್ತು. ಆದರೆ, ಯಾವ ಕಾರಣದಿಂದ ಆಗಿಲ್ಲವೋ ಗೊತ್ತಿಲ್ಲ. ಮುಂದಿನ ವರ್ಷದ ಜಯಂತಿ ವೇಳೆಗೆ ವಿಧಾನಸೌಧದ ಆವರಣದಲ್ಲಿ ಕೆಂಪೇಗೌಡ ಅವರ ಪ್ರತಿಮೆಯನ್ನು ನಿರ್ಮಿಸಲಾಗುವುದು. ಈ ಸಂಬಂಧ ಅಗತ್ಯ ಇರುವ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದರು.
ತುರ್ತು ಪರಿಸ್ಥಿತಿ ವಿರುದ್ಧ ಬೀದಿಗಿಳಿದು ಹೋರಾಡಿದ್ದೆ: ಸಿಎಂ ಬೊಮ್ಮಾಯಿ
ಮಾಗಡಿಯಲ್ಲಿ ಸುಮಾರು 50 ಕೋಟಿ ರು. ವೆಚ್ಚದಲ್ಲಿ ನಾಡಪ್ರಭುಗಳು ಇತಿಹಾಸ ಬಿಂಬಿಸುವ ಕೆಲಸವಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡ ಅವರ ಅಧ್ಯಯನ ಕೇಂದ್ರ ಸ್ಥಾಪಿಸಲು 50 ಕೋಟಿ ರು. ಅನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 100 ಕೋಟಿ ರು. ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣ ಮಾಡುತ್ತೇವೆ. ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರು. ಅನುದಾನ ನೀಡಲಾಗಿದೆ. ಸಮುದಾಯವನ್ನು ಕಟ್ಟಲೆಂದು ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ ನೀಡಲಾಗುತ್ತಿದೆ. ಇದರ ರೂಪುರೇಷೆಗಳನ್ನು ಸಿದ್ದಪಡಿಸಿ ಜುಲೈ ತಿಂಗಳಲ್ಲಿ ಅದಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಮೋದಿ ಅವರಿಂದ ವಿಮಾನ ನಿಲ್ದಾಣದ ಪ್ರತಿಮೆ ಅನಾವರಣ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಅವರ ಪ್ರತಿಮೆಯನ್ನು ಬಹುತೇಕ ಟರ್ಮಿನಲ್-2 ಉದ್ಘಾಟನೆ ವೇಳೆ ಅನಾವರಣ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಮಾಡಿಸುವ ಉದ್ದೇಶ ಇದೆ ಎಂದು ಇದೇ ವೇಳೆ ಬೊಮ್ಮಾಯಿ ಹೇಳಿದರು. ಪ್ರತಿಮೆ ಕಾರ್ಯಕ್ಕೆ ಈಗಾಗಲೇ ಸುಮಾರು 85 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇದೊಂದಿಗೆ 23 ಕೋಟಿ ರು. ಸೌಂದರ್ಯೀಕರಣಕ್ಕೆ ಬಿಡುಗಡೆ ಮಾಡಲಾಗಿದೆ. ಕೆಂಪೇಗೌಡ ಅವರ ಇತಿಹಾಸವನ್ನು ಬಿಂಬಿಸುವ ಕೆಲಸವನ್ನೂ ಇದು ಒಳಗೊಂಡಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಸಿದ್ಧವಾದಾಗ ದೇಶದಲ್ಲಿಯೇ ಅತ್ಯುತ್ತಮ ವಿಮಾನ ನಿಲ್ದಾಣವಾಗಲಿದೆ.
ಈ ವೇಳೆ ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸವಾಗಲಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಆದಿಚುಂಚುನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ್ ಸ್ವಾಮೀಜಿ, ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಆರ್.ಅಶೋಕ್, ಕೆ.ಗೋಪಾಲಯ್ಯ, ವಿ.ಸುನಿಲ್ ಕುಮಾರ್, ಪ್ರಶಸ್ತಿ ಪುರಸ್ಕೃತರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಇಸ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮೂವರಿಗೆ ಪ್ರಶಸ್ತಿ ಪ್ರದಾನ: ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಇಸ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾಪಟ ಪ್ರಕಾಶ್ ಪಡುಕೋಣೆ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರು. ನೀಡಿ ಗೌರವಿಸಲಾಯಿತು. ನಾರಾಯಣ ಮೂರ್ತಿ ಅವರ ಪರವಾಗಿ ಪತ್ನಿ ಸುಧಾಮೂರ್ತಿ ಅವರು ಮತ್ತು ಪ್ರಕಾಶ್ ಪಡುಕೋಣೆ ಪರವಾಗಿ ಅವರ ಆತ್ಮೀಯ ಒಡನಾಡಿಯಾದ ವಿಪುಲ್ ಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಿದರು. ಬೆಂಗಳೂರು ನಾಲ್ಕು ದಿಕ್ಕುಗಳಿಂದಲೂ ಬೆಳೆಯಬೇಕು ಎಂಬ ನಾಡಪ್ರಭು ಕೆಂಪೇಗೌಡ ಅವರ ಉದ್ದೇಶವಾಗಿತ್ತು.
ಅಂಜನಾದ್ರಿ ಸಮಗ್ರ ಅಭಿವೃದ್ಧಿ: ಭೂಸ್ವಾಧೀನಕ್ಕೆ ಸಿಎಂ ಬೊಮ್ಮಾಯಿ 1 ತಿಂಗಳ ಗಡುವು
ಅದೇ ರೀತಿ ಎಲ್ಲ ಸವಲತ್ತುಗಳಿರುವ ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಚಿಂತನೆಗೆ ಕೆಂಪೇಗೌಡ ಅವರೇ ಪ್ರೇರಣೆಯಾಗಿದ್ದಾರೆ. ಅವರು ಹಾಕಿರುವ ಯೋಜನೆಗಳು, ಕನಸುಗಳು, ಅವರು ಕಟ್ಟಿರುವ ನಾಡನ್ನು ನಾವು ಬೆಳೆಸಿರುವ ಬಗ್ಗೆ ಸಿಂಹಾವಲೋಕನ ಮಾಡುವ ಸಂದರ್ಭವಿದು ಎಂದರು. ಕೆರೆ-ಕಟ್ಟೆಗಳನ್ನು, ಗ್ರಾಮಗಳನ್ನು ಕಟ್ಟಿದ್ದಾರೆ. ಸಮುದಾಯಗಳಿಗೆ ಮತ್ತು ವ್ಯಾಪಾರಿಗಳಿಗೆ ಅವಕಾಶಗಳನ್ನು ಪೂರೈಸಿದ ದೂರದೃಷ್ಟಿಯ ನಾಯಕರಾಗಿದ್ದರು ಎಂದು ಹೇಳಿದ ಅವರು, ಬೆಂಗಳೂರಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಿವೆ. 40ಕ್ಕೂ ಹೆಚ್ಚು ಫಾರ್ಚೂನ್ ಕಂಪನಿಗಳಿವೆ. ಶೇ.43ರಷ್ಟುಎಫ್‌ಡಿಐ ರಾಜ್ಯದಲ್ಲಿ ಆಗುತ್ತಿದೆ. ಇವುಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡುವ ಮೂಲಕ ಆಧುನಿಕ ಬೆಂಗಳೂರನ್ನು ನಿರ್ಮಿಸಲು ಸಾಧ್ಯ. ಬೆಂಗಳೂರಿನ ನಮ್ಮತನವನ್ನು ಉಳಿಸಿಕೊಂಡು ನಗರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.