
ಬೆಂಗಳೂರು(ನ.10): ‘ಭ್ರಷ್ಟಾಚಾರ ಮಾಡಿದ್ದು ನೀವು, ತಿಂದಿದ್ದು ನೀವು, ತೇಗಿದ್ದು ನೀವು... ರಾಜೀನಾಮೆ ಮಾತ್ರ ನಾನು ಕೊಡ್ಬೇಕಾ?’ ಪಿಎಸ್‌ಐ ಮತ್ತು ಕೆಇಎ ಪರೀಕ್ಷೆ ಹಗರಣಗಳಿಗೆ ಸಂಬಂಧಿಸಿದಂತೆ ತಮ್ಮ ರಾಜೀನಾಮೆಗೆ ಒತ್ತಾಯಿಸಿರುವ ಬಿಜೆಪಿ ಮುಖಂಡರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ ಪರಿ ಇದು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಈಗ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಮೊದಲೇ ಮಾತನಾಡಿದ್ದರೆ ಪ್ರತಿಪಕ್ಷ ನಾಯಕನಾದರೂ ಸಿಗುತ್ತಿದ್ದರು. ಹಲವು ನಾಯಕರು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದು, ಅವರ ಮಾತು ಕೇಳಿ ಸಂತೋಷವಾಗಿದೆ. ಅವರು ನನಗೆ ಖೆಡ್ಡಾ ತೋಡೋಕೆ ಹೊರಟಿದ್ದಾರೆ. ಆದರೆ ಅವರೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿಯ ₹500 ಕೋಟಿ ಅಕ್ರಮ ದಾಖಲೆ ಶೀಘ್ರ ಬಿಡುಗಡೆ: ಸಚಿವ ಪ್ರಿಯಾಂಕ್ ಖರ್ಗೆ
ಪಿಎಸ್‌ಐ ಮತ್ತು ಕೆಇಎ ಪರೀಕ್ಷೆ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್ ನಾಪತ್ತೆಗೆ ಸಂಬಂಧಿಸಿದಂತೆ ಅಧಿಕಾರಿಗಳ ತಪ್ಪಿದ್ದರೂ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ಮಫ್ತಿಯಲ್ಲಿ ಬಂಧಿಸಲು ಹೋಗಿದ್ದ ವೇಳೆ ಆರ್.ಡಿ.ಪಾಟೀಲ್ ನಾಪತ್ತೆಯಾಗಿದ್ದರು. ನಾನು ಯಾರನ್ನೂ ರಕ್ಷಣೆ ಮಾಡುತ್ತಿಲ್ಲ. ಬಿಜೆಪಿಗರು ಮಾಡುತ್ತಿರುವ ಆರೋಪವು ಸತ್ಯಕ್ಕೆ ದೂರವಾದುದು ಎಂದರು.
ಬಿಜೆಪಿಗರು ಪಿಎಸ್ಐ ಪ್ರಕರಣದಲ್ಲಿ ಏನು ಮಾಡಿದರು? ಅಕ್ರಮವೇ ಆಗಿಲ್ಲ ಎಂದರು. ಅಲ್ಲದೇ, ಸದನದಲ್ಲೇ ತಪ್ಪು ಉತ್ತರ ಕೊಟ್ಟರು. ಒಬ್ಬ ಆರೋಪಿಯನ್ನು ಒಬ್ಬರು ಬಿಡಿಸಿದರಲ್ಲ? ಯಾರು ಬಿಡಿಸಿದ್ದು ಹೇಳಿ ಎಂದು ಪರೋಕ್ಷವಾಗಿ ಅಶ್ವತ್ಥ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇನ್ನೊಂದು ಆರು ತಿಂಗಳು ಕಾಯಿರಿ. ಯಾರು ಇದ್ದಾರೋ ಎಲ್ಲರ ಮೇಲೆ ಕ್ರಮ ಜರುಗಿಸುತ್ತೇವೆ. ನಾವು ಮೈಮೇಲೆ ಎಣ್ಣೆ ಹಾಕಿ ತಪ್ಪಿಸಿಕೊಳ್ಳುತ್ತಿಲ್ಲ. ಯಾವುದಕ್ಕೂ ನಾವು ಹೆದರುವುದಿಲ್ಲ. ಎಲ್ಲವನ್ನೂ ಹೊರಗೆಳೆಯುತ್ತೇವೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ