
ಬೆಂಗಳೂರು (ಫೆ.03): ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾದ, ಮೃತಪಟ್ಟಕುರಿ-ಮೇಕೆಗಳಿಗೆ ಪರಿಹಾರ ಒದಗಿಸುವ ಅನುಗ್ರಹ ಯೋಜನೆ ಸ್ಥಗಿತಗೊಳಿಸಿರುವ ಬಗ್ಗೆ ಮೂರೂ ಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ಕೆ. ಪೂರ್ಣಿಮಾ ಶ್ರೀನಿವಾಸ್, 2013ರ ಜಾನುವಾರು ಗಣತಿ ಪ್ರಕಾರ ರಾಜ್ಯದಲ್ಲಿ 72 ಲಕ್ಷ ಜಾನುವಾರುಗಳಿವೆ. ಹಿಂದಿನ ಸರ್ಕಾರದಲ್ಲಿ ಕುರಿ ಅಥವಾ ಮೇಕೆ ಸತ್ತರೆ 5 ಸಾವಿರ ರು. ಪರಿಹಾರ ನೀಡುವ ‘ಅನುಗ್ರಹ’ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗಿತ್ತು. 2015ರಲ್ಲಿ ನಿಯಮ ಬದಲಿಸಿ 6 ತಿಂಗಳ ಮೇಲಿನ ಕುರಿಗಳಿಗೆ 5 ಸಾವಿರ ರು. ಹಾಗೂ ಅದಕ್ಕಿಂತ ಕಡಿಮೆ ತಿಂಗಳ ಕುರಿಗೆ 2,500 ರು. ಪರಿಹಾರ ನೀಡಲಾಗುತ್ತಿತ್ತು. ಈವರೆಗೆ 88 ಕೋಟಿ ರು. ಪರಿಹಾರ ನೀಡಿದ್ದು, 39.80 ಕೋಟಿ ರು. ಪಾವತಿ ಇನ್ನೂ ಬಾಕಿ ಉಳಿದಿದೆ. ಚಿತ್ರದುರ್ಗ ಜಿಲ್ಲೆ ಒಂದರಲ್ಲೇ 1.40 ಲಕ್ಷ ಫಲಾನುಭವಿಗಳಿಗೆ ಯೋಜನೆ ಹಣ ತಲುಪಿಲ್ಲ. ಇದರ ನಡುವೆ ಹೊಸ ಅರ್ಜಿಗಳನ್ನು ಪಡೆಯುತ್ತಿಲ್ಲ ಎಂದು ಹೇಳಿದರು.
ಪ್ರತಿ ತಾಲೂಕಿಗೆ 2 ಗೋಶಾಲೆ ಆರಂಭ: ಸಚಿವ ಪ್ರಭು ಚವ್ಹಾಣ ...
ಈ ವೇಳೆ ಮಾತನಾಡಿದ ಸಚಿವ ಪ್ರಭು ಚವ್ಹಾಣ್, 39.80 ಕೋಟಿ ರು. ಬಾಕಿ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಕಾಂಗ್ರೆಸ್ ಸದಸ್ಯ ಕೆ.ಆರ್. ರಮೇಶ್‌ಕುಮಾರ್, ಜೊತೆಗೆ ಮೃತಪಟ್ಟಕುರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕಳೆದ ಒಂದೂವರೆ ವರ್ಷದಿಂದ ಹೊಸ ಅರ್ಜಿ ಪಡೆಯುತ್ತಿಲ್ಲ. ಅಧಿಕಾರಿಗಳು ಯೋಜನೆ ಸ್ಥಗಿತಗೊಳಿಸಲಾಗಿದೆ ಎನ್ನುತ್ತಿದ್ದಾರೆ. ನಾನು ಕುರಿ ಸಾಕಿಯೇ ಜೀವನ ನಡೆಸುತ್ತಿರುವವನು. ಬಡ ರೈತರಿಗೆ ಇದರಿಂದ ಅನುಕೂಲ ಇದೆ. ಕಾರ್ಯಕ್ರಮ ಮುಂದುವರೆಸಿ ಎಂದು ಸಲಹೆ ನೀಡಿದರು.
ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ಒಕ್ಕಲಿಗನಾಗಿ ನಾನೇ 500 ಕುರಿಗಳನ್ನು ಸಾಕುತ್ತಿದ್ದೇನೆ. ಇದು ಒಂದು ಸಮುದಾಯಕ್ಕೆ ಸೀಮಿತವಾದ ಯೋಜನೆಯಲ್ಲ. ಎಲ್ಲಾ ಬಡ ಕುರಿ ಸಾಕಾಣೆದಾರರಿಗೂ ಅನುಕೂಲವಾಗಲಿದೆ. ಯೋಜನೆ ಮುಂದುವರೆಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭು ಚವ್ಹಾಣ್, ಕೊರೋನಾದಿಂದಾಗಿ ಸರ್ಕಾರ ಆರ್ಥಿಕ ಸಮಸ್ಯೆಯಲ್ಲಿದೆ. ಪರಿಹಾರಕ್ಕಾಗಿ ನನ್ನ ಕ್ಷೇತ್ರದ ಜನರೂ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಹೊಸದಾಗಿ ಅರ್ಜಿ ಸ್ವೀಕರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ