ರಾಜ್ಯದಲ್ಲಿ ಸಿನಿಮಾ ಹೌಸ್‌ಫುಲ್ ಸದ್ಯಕ್ಕಿಲ್ಲ| ಫೆ.28ರವರೆಗೆ ಅರ್ಧದಷ್ಟುಮಾತ್ರ ಭರ್ತಿಗೆ ಅವಕಾಶ| ಫೆ.19ಕ್ಕೆ ಬಿಡುಗಡೆ ಸಜ್ಜಾಗಿರುವ ಪೊಗರು ಚಿತ್ರಕ್ಕೆ ನಿರಾಶೆ| ಹೌಸ್‌ಫುಲ್‌ಗೆ ಕೇಂದ್ರ ಓಕೆ ಆದರೆ ರಾಜ್ಯದಲ್ಲಿ ಇಲ್ಲ| 2ನೇ ಅಲೆ ಭೀತಿ: 50% ಮಿತಿ ನಿಗದಿಗೊಳಿಸಿದ ರಾಜ್ಯ| - ತುಂಬಿದ ಗೃಹಗಳ ಪ್ರದರ್ಶನಕ್ಕೆ ಚಿತ್ರೋದ್ಯಮ ಒತ್ತಾಯ
ಬೆಂಗಳೂರು(ಫೆ.03): ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ, ಸಿನಿಮಾ ವೀಕ್ಷಣೆಗೆ ಥಿಯೇಟರ್ ಸಾಮರ್ಥ್ಯದ ಶೇ. 50ರಷ್ಟುಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ಎಂದು ರಾಜ್ಯ ಸರ್ಕಾರ ಮಂಗಳವಾರ ಸುತ್ತೋಲೆ ಹೊರಡಿಸಿದೆ.
undefined
ಈ ನಿಯಮ ಫೆ.19ರಂದು ಬಿಡುಗಡೆ ಸಿದ್ಧವಾಗಿರುವ ಧ್ರುವಸರ್ಜಾ ಅಭಿನಯದ ಪೊಗರು ಚಿತ್ರ ತಂಡಕ್ಕೆ ಶಾಕ್ ನೀಡಿದೆ. ಕೋವಿಡ್ ನಂತರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಬಿಗ್ ಬಜೆಟ್ ಸಿನಿಮಾ ಎಂಬ ಖ್ಯಾತಿ ಪೊಗರು ಸಿನಿಮಾಗೆ ಇದ್ದು ಅಭಿಮಾನಿಗಳಲ್ಲಿ ಸಾಕಷ್ಟುಕುತೂಹಲ ಮೂಡಿಸಿತ್ತು. ಕನ್ನಡ ಸಿನಿಮೋದ್ಯಮ ಕೂಡ ಸರ್ಕಾರದ ಈ ನಿಲುವಿನಿಂದ ಬೇಸರಗೊಂಡಿದ್ದು, ನಿಲುವು ಬದಲಿಸಿ ಹೌಸ್‌ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಮಂಗಳವಾರ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರ, ಕೋವಿಡ್ ಎರಡನೇ ಅಲೆ ಕಾರಣ ಮುಂದೊಡ್ಡಿ ಈ ತಿಂಗಳಾಂತ್ಯದವರೆಗೆ ಶೇ. 50 ರಷ್ಟುಪ್ರೇಕ್ಷಕರಿಗೆ ಮಾತ್ರ ಚಿತ್ರಮಂದಿರಗಳಲ್ಲಿ ಅವಕಾಶ ನೀಡುವಂತೆ ಸೂಚಿಸಿದೆ. ಜನವರಿ 30ರಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ, ಸಿನಿಮಾ ಹಾಲ್‌ಗಳಲ್ಲಿ ಶೇ. 100ರಷ್ಟುಹಾಜರಾತಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಪ್ರಸ್ತುತ ಪರಿಸ್ಥಿತಿ ಹಾಗೂ ಎರಡನೇ ಅಲೆ ಬರುವ ಸಾಧ್ಯತೆಯನ್ನು ಪರಿಗಣಿಸಿ ಫೆಬ್ರವರಿ 28ರವರೆಗೆ ಶೇ.50ರಷ್ಟುಮಾತ್ರ ಸೀಟ್ ಭರ್ತಿಗೆ ಅವಕಾಶ ಕಲ್ಪಿಸಿದೆ.
ರಾಜ್ಯದಲ್ಲಿ ಫೆಬ್ರವರಿ ಅಥವಾ ಮಾಚ್‌ರ್‍ನಲ್ಲಿ ಕೊರೋನಾ ಎರಡನೇ ಅಲೆ ಬರುವ ಸಾಧ್ಯತೆಯಿದೆ ಎಂದು ರಾಜ್ಯದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಈಗಾಗಲೇ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಸಿನಿಮಾ ಹಾಲ್‌ಗಳನ್ನು ಪೂರ್ಣವಾಗಿ ತೆರೆಯಲು ಹಿಂದೇಟು ಹಾಕಿದೆ.
ಕೇಂದ್ರ ಸರ್ಕಾರ ಕಳೆದ ಅಕ್ಟೋಬರ್ 15ರಿಂದ ಶೇ.50ರಷ್ಟುಪ್ರೇಕ್ಷಕರೊಂದಿಗೆ ಚಿತ್ರಮಂದಿರಗಳ ಕಾರ್ಯನಿರ್ವಹಣೆಗೆ ಷರತ್ತುಬದ್ಧ ಅನುಮತಿ ನೀಡಿತ್ತು. ಆದರೆ, ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಾರದ ಕಾರಣ ದೊಡ್ಡ ಬಜೆಟ್ ಮತ್ತು ಸ್ಟಾರ್‌ಗಳ ಸಿನಿಮಾ ಬಿಡುಗಡೆ ಮಾಡಲು ಸಿನಿಮಾ ನಿರ್ಮಾಪಕರು ಹಿಂಜರಿದಿದ್ದರು. ಈಗ ದೇಶಾದ್ಯಂತ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸತತವಾಗಿ ಭಾರಿ ಕುಸಿತ ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೇ. 100ರಷ್ಟುಆಸನ ಭರ್ತಿಗೆ ಅವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದೊಡ್ಡ ಬಜೆಟ್‌ನ ಕೆಲ ಸಿನಿಮಾಗಳು ಶೀಘ್ರ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ ರಾಜ್ಯ ಸರ್ಕಾರದ ಈ ತೀರ್ಮಾನದಿಂದಾಗಿ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಯ ತೀರ್ಮಾನವನ್ನು ಮುಂದೂಡುವ ಸಾಧ್ಯತೆಯೇ ಹೆಚ್ಚಾಗಿದೆ.
ವರ್ಕ್ ಫ್ರಂ ಹೋಂ ರದ್ದು ಅಧಿಕಾರ ಕಂಪನಿಗಳಿಗೆ
ಸಭಾಂಗಣ, ಸಭಾಭವನ, ಹಾಲ್‌ಗಳ ಸ್ಥಳಾವಕಾಶವನ್ನು ಪರಿಗಣಿಸಿ ಅಂತಹ ತಾಣದಲ್ಲಿ ಎಷ್ಟುಮಂದಿ ಸೇರಬಹುದು ಎಂದು ನಿರ್ಧರಿಸುವ ನಿಯಮವನ್ನು ಸುತ್ತೋಲೆಯಲ್ಲಿ ನೀಡಲಾಗಿದೆ. ಯಾವುದೇ ಸಭಾಂಗಣದಲ್ಲಿ ಪ್ರತಿಯೊಬ್ಬರಿಗೂ 3.25 ಚದರ ಮೀಟರ್ ಸ್ಥಳಾವಕಾಶ ಲಭ್ಯವಿರುವಂತೆ ಜನರನ್ನು ಸೇರಿಸಲು ಅವಕಾಶವಿರುತ್ತದೆ. ಅಂದರೆ 1,000 ಚದರ ಮೀಟರ್ ಇರುವ ಹಾಲ್‌ನಲ್ಲಿ ಗರಿಷ್ಠ 376 ವ್ಯಕ್ತಿಗಳು, 500 ಚದರ ಮೀಟರ್ ಸ್ಥಳಾವಕಾಶವಿರುವ ಹಾಲ್‌ನಲ್ಲಿ ಗರಿಷ್ಠ 158 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮದುವೆ, ಜನ್ಮ ದಿನಾಚರಣೆ, ಮರಣ, ಶವಸಂಸ್ಕಾರ ಮುಂತಾದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುವ ಪ್ರತಿ ವ್ಯಕ್ತಿಗೂ 3.25 ಚದರ ಮೀಟರ್ ಸ್ಥಳಾವಕಾಶ ಇರಬೇಕು ಎಂದು ತಿಳಿಸಲಾಗಿದೆ. ಆದರೆ ಗರಿಷ್ಠ 500 ಜನರ ಮಿತಿಯನ್ನು ಹಾಕಲಾಗಿದೆ. ಈ ನಿಯಮ ಕಚೇರಿಗಳಿಗೂ ಅನ್ವಯಿಸುತ್ತದೆ. ಸಿಬ್ಬಂದಿ ಕಚೇರಿಗೆ ಬಂದೇ ಕೆಲಸ ಮಾಡಬೇಕು ಎಂಬ ಸೂಚನೆಯನ್ನು ನೀಡುವ ಅವಕಾಶವನ್ನು ಸಂಸ್ಥೆಗಳಿಗೆ ಬಿಡಲಾಗಿದೆ.