7 ಭ್ರಷ್ಟರಿಗೆ ಎಸಿಬಿ ಬಿಸಿ, ಕೇಜಿಗಟ್ಟಲೆ ಚಿನ್ನ ವಶ!

Published : Feb 03, 2021, 07:20 AM ISTUpdated : Feb 03, 2021, 10:14 AM IST
7 ಭ್ರಷ್ಟರಿಗೆ ಎಸಿಬಿ ಬಿಸಿ, ಕೇಜಿಗಟ್ಟಲೆ ಚಿನ್ನ ವಶ!

ಸಾರಾಂಶ

7 ಭ್ರಷ್ಟರಿಗೆ ಎಸಿಬಿ ಬಿಸಿ, ಕೇಜಿಗಟ್ಟಲೆ ಚಿನ್ನ ವಶ| ರಾಜ್ಯದ 36 ಕಡೆ ಏಕಕಾಲಕ್ಕೆ ದಾಳಿ| 80 ಲಕ್ಷ ನಗದು, ಖಾತೆಯಲ್ಲಿದ್ದ 1.75 ಕೋಟಿ ಜಪ್ತಿ| ಅಪಾರ ಜಮೀನು ವಶ| ಆಸ್ತಿ ದಾಖಲೆಗಳ ಮುಟ್ಟುಗೋಲು

 ಬೆಂಗಳೂರು(ಫೆ.03): ಭ್ರಷ್ಟಸರ್ಕಾರಿ ನೌಕರರ ವಿರುದ್ಧ ಸಮರ ಸಾರಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು, ವಿವಿಧ ಇಲಾಖೆಗಳ ಏಳು ಅಧಿಕಾರಿಗಳಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.

ಏಳು ಅಧಿಕಾರಿಗಳಿಗೆ ಸೇರಿದ ನಿವಾಸ, ಕಚೇರಿ ಸೇರಿದಂತೆ ರಾಜ್ಯದ 36 ಕಡೆಯಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಶೋಧ ನಡೆಸಿದಾಗ ಏಳು ಅಧಿಕಾರಿಗಳ ಬಳಿ ಒಟ್ಟು 80 ಲಕ್ಷ ರು.ಗಿಂತ ಹೆಚ್ಚು ನಗದು, ವಿವಿಧ ಖಾತೆಗಳಲ್ಲಿ 1.75 ಕೋಟಿ ರು.ಗಿಂತ ಹೆಚ್ಚು ಹಣ, ಕೇಜಿಗಟ್ಟಲೆ ಚಿನ್ನಾಭರಣ ಹಾಗೂ ಕೋಟ್ಯಂತರ ಮೌಲ್ಯದ ಆಸ್ತಿ ದಾಖಲೆ ಸಿಕ್ಕಿದ್ದು, ಜಪ್ತಿ ಮಾಡಲಾಗಿದೆ.

ಬೆಳಗ್ಗೆಯಿಂದ ತಡರಾತ್ರಿವರೆಗೆ ಶೋಧ ಕಾರ್ಯ ನಡೆಸಲಾಗಿದ್ದು, ಮತ್ತಷ್ಟುಆಸ್ತಿ ವಿವರ ಲಭ್ಯವಾಗುವ ಸಾಧ್ಯತೆ ಇದೆ. ತನಿಖೆ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಪಡೆದ ಬಳಿಕ ಪ್ರಕರಣ ದಾಖಲಿಸಿ ದಾಳಿ ನಡೆಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ನಗರ ಮತ್ತು ಗ್ರಾಮಾಂತರ ಯೋಜನೆ ಜಂಟಿ ನಿರ್ದೇಶಕ ಕೆ.ವಿ. ಜಯರಾಜ್‌, ಧಾರವಾಡ ವಿಭಾಗದ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಹಣಾ ಎಂಜಿನಿಯರ್‌ ದೇವರಾಜ ಕಲ್ಮೇಶ ಶಿಗ್ಗಾವಿ, ಕೋಲಾರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್‌.ಎನ್‌. ವಿಜಯಕುಮಾರ್‌, ಬೆಂಗಳೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ. ಪಾಂಡುರಂಗ ಗರಗ್‌, ಧಾರವಾಡ ಜಿಲ್ಲೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ, ರಾಮನಗರ ಜಿಲ್ಲೆ ಮಾಗಡಿಯ ಲೋಕೋಪಯೋಗಿ ಉಪವಿಭಾಗದ ಕಿರಿಯ ಎಂಜಿನಿಯರ್‌ ಚನ್ನಬಸಪ್ಪ ಮತ್ತು ಕೊಪ್ಪಳದ ಕಿಮ್ಸ್‌ನ ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್‌ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ದಾಳಿಗೊಳಗಾದ ಅಧಿಕಾರಿಗಳು, ಆಸ್ತಿ ವಿವರ:

1. ಕೆ.ವಿ.ಜಯರಾಜ್‌, ಜಂಟಿ ನಿರ್ದೇಶಕ, ನಗರ ಮತ್ತು ಗ್ರಾಮಾಂತರ ಯೋಜನೆ, ಮಂಗಳೂರು ಮಹಾನಗರ ಪಾಲಿಕೆ

2 ವಾಸದ ಮನೆ, 3 ನಿವೇಶನ, 11 ಲಕ್ಷ ರು. ನಗದು, 10 ಲಕ್ಷ ರು. ಮೊತ್ತದ ವಿಮಾ ಬಾಂಡ್‌ಗಳು, ವಿವಿಧ ಬ್ಯಾಂಕ್‌ ಖಾತೆಯಲ್ಲಿ 77 ಲಕ್ಷ ರು., ಪತ್ನಿಯ ಹೆಸರಲ್ಲಿ 20 ಲಕ್ಷ ರು. ಠೇವಣಿ, 191 ಗ್ರಾಂ ಚಿನ್ನದ ಒಡವೆಗಳು, 1 ಕೆಜಿ ಬೆಳ್ಳಿ ಸಾಮಾನುಗಳು ಲಭ್ಯವಾಗಿವೆ.

2. ದೇವರಾಜ ಕಲ್ಮೇಶ ಶಿಗ್ಗಾವಿ, ಕಾರ್ಯನಿರ್ವಹಣಾ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ, ಹುಬ್ಬಳ್ಳಿ

2 ವಾಸದ ಮನೆ, 2 ನಿವೇಶನಗಳು, 2 ಕಾರುಗಳು, 26 ಎಕರೆ ಕೃಷಿ ಜಮೀನು, 59.84 ಲಕ್ಷ ರು. ನಗದು, ವಿವಿಧ ಬ್ಯಾಂಕ್‌ ಖಾತೆಯಲ್ಲಿ 30 ಲಕ್ಷ ರು. ಠೇವಣಿ, 500 ಗ್ರಾಂ ಚಿನ್ನದ ಒಡವೆಗಳು, 4 ಕೆಜಿ ಬೆಳ್ಳಿ ಸಾಮಾನುಗಳು, ಸುಮಾರು 3 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ದೊರಕಿವೆ.

3. ಡಾ. ಎಸ್‌.ಎನ್‌. ವಿಜಯಕುಮಾರ್‌, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಕೋಲಾರ

3 ವಾಸದ ಮನೆಗಳು, 3 ಫ್ಲಾಟ್‌ಗಳು, 3 ನಿವೇಶನಗಳು, 1 ಖಾಸಗಿ ಆಸ್ಪತ್ರೆ, 2 ಕಾರ್‌ಗಳು, 1 ದ್ವಿಚಕ್ರ ವಾಹನ, ಬ್ಯಾಂಕ್‌ ಖಾತೆಯಲ್ಲಿ 61.21 ಲಕ್ಷ ರು. ಠೇವಣಿ, 1.13 ಎಕರೆ ಕೃಷಿ ಜಮೀನು ಪತ್ತೆಯಾಗಿದೆ.

4. ಡಿ.ಪಾಂಡುರಂಗ ಗರಗ್‌, ಸಹಕಾರ ಸಂಘಗಳ ಜಂಟಿ ನಿಬಂಧಕರು, ಸಹಕಾರ ಸೌಧ, ಮಲ್ಲೇಶ್ವರ, ಬೆಂಗಳೂರು

2 ವಾಸದ ಮನೆಗಳು, 1 ಫ್ಲಾಟ್‌, 3 ಕಾರ್‌ಗಳು, 1 ಟ್ರ್ಯಾಕ್ಟರ್‌, 3 ದ್ವಿಚಕ್ರ ವಾಹನಗಳು, 1.166 ಕೆಜಿ ಚಿನ್ನದ ಒಡವೆಗಳು, 20 ಲಕ್ಷ ರು. ಮೊತ್ತದ ವಿಮಾ ಪಾಲಿಸಿಗಳು, 31 ಕೆಜಿ ಬೆಳ್ಳಿ ಸಾಮಾನುಗಳು, 10 ಎಕರೆ ಕೃಷಿ ಜಮೀನು, 4.44 ಲಕ್ಷ ರು. ನಗದು, ಸುಮಾರು 20 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

5. ಶ್ರೀನಿವಾಸ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ, ಧಾರವಾಡ

2 ವಾಸದ ಮನೆಗಳು, 1 ಫಾಮ್‌ರ್‍ಹೌಸ್‌, 2 ನಿವೇಶನಗಳು, 2 ಕಾರುಗಳು, 1 ಟ್ರ್ಯಾಕ್ಟರ್‌, 1 ದ್ವಿಚಕ್ರವಾಹನ, 850 ಗ್ರಾಂ ಚಿನ್ನದ ಒಡವೆ, 3.5 ಕೆಜಿ ಬೆಳ್ಳಿ ಸಾಮಾನುಗಳು, 4.87 ಲಕ್ಷ ರು. ನಗದು, ಬ್ಯಾಂಕ್‌ ಖಾತೆಯಲ್ಲಿ 5 ಲಕ್ಷ ರು., 63 ಲಕ್ಷ ರು. ಮೌಲ್ಯದ ಗೃಹೋಪಯೋಗಿ ವಸ್ತುಗಳು ದೊರಕಿವೆ.

6. ಚನ್ನಬಸಪ್ಪ, ಕಿರಿಯ ಎಂಜಿನಿಯರ್‌, ಲೋಕೋಪಯೋಗಿ ಉಪವಿಭಾಗ, ಮಾಗಡಿ

8 ಫ್ಲಾಟ್‌ಗಳು, 1 ಸೂಪರ್‌ ಮಾರ್ಟ್‌, 1 ಫಾಮ್‌ರ್‍ ಹೌಸ್‌, 2 ಕಾರು, 2 ದ್ವಿಚಕ್ರ ವಾಹನಗಳು, 1.02 ಲಕ್ಷ ರು. ನಗದು, 125 ಗ್ರಾಂ ಚಿನ್ನದ ಒಡವೆ, 650 ಗ್ರಾಂ ಬೆಳ್ಳಿ ಸಾಮಾನುಗಳು ಪತ್ತೆಯಾಗಿವೆ.

7. ಡಾ.ಶ್ರೀನಿವಾಸ, ಕಿಮ್ಸ್‌ನ ಫಾರ್ಮಾಕಾಲಜಿ ವಿಭಾಗದ ಮುಖ್ಯಸ್ಥ, ಕೊಪ್ಪಳ

1 ವಾಸದ ಮನೆ, 4 ನಿವೇಶನ, 2 ಕಾರುಗಳು, 2 ದ್ವಿಚಕ್ರ ವಾಹನಗಳು, 800 ಗ್ರಾಂ ಚಿನ್ನದ ಒಡವೆಗಳು, 9.300 ಗ್ರಾಂ ಬೆಳ್ಳಿ ಸಾಮಾನುಗಳು, 1.94 ಲಕ್ಷ ರು. ನಗದು ಲಭ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ