ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ

Kannadaprabha News   | Kannada Prabha
Published : Apr 09, 2026, 05:29 AM IST
Eshwar Khandre on human-wildlife conflict

ಸಾರಾಂಶ

ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು, ಆಯ್ದ ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಪ್ರಸ್ತಾವನೆಯನ್ನು ಸರ್ಕಾರ ಚಿಂತಿಸುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇದು ಸದ್ಯಕ್ಕೆ ಪ್ರಸ್ತಾವನೆಯ ಹಂತದಲ್ಲಿದೆ.

ಬೆಂಗಳೂರು (ಏ.9): ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಮಾಡುವ ಅಥವಾ ಅವುಗಳಿಗೆ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್‌ ಖಂಡ್ರೆ, ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ, ಕೆಲ ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಾಗುತ್ತಿದೆ. ಅವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯ ಕಂಡು ಬರುತ್ತಿದೆ ಮತ್ತು ಆ ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕಿದೆ. ಇನ್ನು, ಜನರ ಜೀವಹಾನಿಯೂ ತಪ್ಪಬೇಕು. ಅದಕ್ಕಾಗಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದು ಪ್ರಸ್ತಾವ ಮಾತ್ರ, ನಿರ್ಧಾರ ಆಗಿಲ್ಲ ಎಂದರು.

ವನ್ಯಜೀವಿಗಳಿಗೆ ಕಡಿವಾಣ ಹಾಕುವ ಸಂಬಂಧದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಅದಕ್ಕಾಗಿ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ವಿಚಾರವಾಗಿ ತಜ್ಞರು ಮತ್ತು ಕಾನೂನು ಪಂಡಿತರೊಂದಿಗೆ ಚರ್ಚಿಸಿ ನಿರ್ಧರಿಸಬೇಕು. ನಂತರ ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುವುದು ಎಂದು ಹೇಳಿದರು.

ಯಾವ ಭಾಗದಲ್ಲಿ ಯಾವ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆಯೋ ಅಲ್ಲಿ ಒಂದೆರಡು ವರ್ಷ ವನ್ಯಜೀವಿಗಳನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲೂ ಈ ರೀತಿಯ ಆಲೋಚನೆಗಳಿವೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆದು ತೀರ್ಮಾನಿಸಬೇಕಿದೆ. ಇನ್ನು, ಸ್ವ-ಇಚ್ಛೆಯಿಂದ ಅರಣ್ಯದಿಂದ ಹೊರಬರಲು ಮುಂದಾದರೆ ಅಂತಹ ಅರಣ್ಯವಾಸಿಗಳ ಸ್ಥಳಾಂತರದ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಬರಲು ಇಚ್ಛಿಸುವವರ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಿದ್ದು, ಪಟ್ಟಿ ಸಿದ್ಧವಾದ ಬಳಿಕ ಎಷ್ಟು ಅನುದಾನದ ಅಗತ್ಯವಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಆನೆ ದಾಳಿ ಸಮಸ್ಯೆ ಪರಿಹರಿಸಲು ಆನೆ ವಿಹಾರ ಧಾಮ ಮಾಡುವ ಕುರಿತು ಸರ್ಕಾರ ಯೋಜನೆ ರೂಪಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವಲ್ಲಿ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಿ ಆನೆಧಾಮ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಠ್ಯದಲ್ಲಿ ಹಿಂದಿ ಕಲಿಕೆ ಕನ್ನಡಿಗರಿಗಿಂತ ವಲಸಿಗರಿಗೇ ಲಾಭ! ಉದ್ಯೋಗ ನೀಡದ ಭಾಷೆ ನಮಗೆ ಬೇಕೆ?
Assembly Bypolls 2026 Live: ದಾವಣಗೆರೆ ಉಪಚುನಾವಣೆ - ಹಿರಿಯ ಮತದಾರರಿಂದ ಉತ್ಸಾಹದ ಮತದಾನ