
ಚಿತ್ರದುರ್ಗ (ಏ.08): ಕರ್ತವ್ಯ ನಿರ್ಲಕ್ಷ್ಯದ ನೆಪವೊಡ್ಡಿ ತನ್ನದೇ ಸಹೋದ್ಯೋಗಿಗಳಿಗೆ ಶಾಲಾ ಮಕ್ಕಳಂತೆ ರಣಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ ಪಿಎಸ್ಐ ನೇತ್ರಾವತಿ ವಿರುದ್ಧ ಕೊನೆಗೂ ಶಿಸ್ತು ಕ್ರಮ ಜರುಗಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್ಐ ನೇತ್ರಾವತಿ ಅವರನ್ನು ಕಂಟ್ರೋಲ್ ರೂಂಗೆ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಂಜಿತ್ ಕುಮಾರ್ ಬಂಡಾರು ಆದೇಶ ಹೊರಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಚಿಕ್ಕಜಾಜೂರು ಪೊಲೀಸ್ ಠಾಣೆಯ ಪಿಎಸ್ಐ ನೇತ್ರಾವತಿ ಅವರು ತಮ್ಮ ಠಾಣೆಯ ಸಿಬ್ಬಂದಿಗಳ ಮೇಲೆ ದರ್ಪ ತೋರಿದ್ದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಕಾರಣ ನೀಡಿ, ಒಬ್ಬ ಎಎಸ್ಐ (ASI) ಸೇರಿದಂತೆ ಒಟ್ಟು 12 ಜನ ಪೊಲೀಸ್ ಸಿಬ್ಬಂದಿಗೆ ಕಠಿಣ ಶಿಕ್ಷೆ ವಿಧಿಸಿದ್ದರು. ಅದು ಸಣ್ಣಪುಟ್ಟ ಶಿಕ್ಷೆಯಾಗಿರಲಿಲ್ಲ; ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ಸುಡುವ ರಣಬಿಸಿಲಿನಲ್ಲಿ ಬಂದೂಕು ಹಿಡಿದು ನಿಲ್ಲುವಂತೆ ಆದೇಶಿಸಿದ್ದರು.
ಏಪ್ರಿಲ್ ತಿಂಗಳ ಅತೀವ ಬಿಸಿಲಿನಲ್ಲಿ ಸತತ ಮೂರು ಗಂಟೆಗಳ ಕಾಲ ಭಾರವಾದ ಬಂದೂಕು ಹೊತ್ತು ನಿಂತಿದ್ದರಿಂದ ಹಲವು ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಬಿಸಿಲ ಧಗೆ ತಾಳಲಾರದೆ ಸುಸ್ತಾಗಿದ್ದ ಕೆಲವು ಪೊಲೀಸರು ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯಿಂದ ಮನನೊಂದ ಸಿಬ್ಬಂದಿಗಳು ಪಿಎಸ್ಐ ನೇತ್ರಾವತಿ ಅವರ ವರ್ತನೆಯ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಇಲಾಖೆಯ ಒಳಗಿನ ಶಿಸ್ತಿನ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಘಟನೆಯ ಗಾಂಭೀರ್ಯವನ್ನು ಅರಿತ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಕ್ಷಣವೇ ತನಿಖೆಗೆ ಆದೇಶಿಸಿದ್ದರು. ಡಿವೈಎಸ್ಪಿ ಅರುಣ್ ಗೌಡ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ವರದಿ ನೀಡುವಂತೆ ಸೂಚಿಸಿದ್ದರು. ಡಿವೈಎಸ್ಪಿ ಅವರು ನೀಡಿದ ಪ್ರಾಥಮಿಕ ತನಿಖಾ ವರದಿಯಲ್ಲಿ ಪಿಎಸ್ಐ ನೇತ್ರಾವತಿ ಅವರು ಸಿಬ್ಬಂದಿಗಳಿಗೆ ಶಿಕ್ಷೆ ನೀಡಿರುವುದು ಮತ್ತು ದರ್ಪ ತೋರಿರುವುದು ದೃಢಪಟ್ಟಿದೆ.
ತನಿಖಾ ವರದಿ ಕೈ ಸೇರಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎಸ್ಪಿ ರಂಜಿತ್ ಕುಮಾರ್ ಬಂಡಾರು, ಪಿಎಸ್ಐ ನೇತ್ರಾವತಿ ಅವರನ್ನು ಚಿಕ್ಕಜಾಜೂರು ಠಾಣೆಯಿಂದ ಚಿತ್ರದುರ್ಗದ ಪೊಲೀಸ್ ನಿಯಂತ್ರಣ ಕೊಠಡಿಗೆ (Control Room) ವರ್ಗಾವಣೆ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮುಖ್ಯವಾದರೂ, ಅಮಾನವೀಯವಾಗಿ ಶಿಕ್ಷೆ ನೀಡುವುದು ತಪ್ಪು ಎಂಬ ಸಂದೇಶವನ್ನು ಈ ಕ್ರಮದ ಮೂಲಕ ರವಾನಿಸಲಾಗಿದೆ. ಸದ್ಯ ಈ ಘಟನೆ ಇಡೀ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ