
ವಿಧಾನಸಭೆ(ಜು.11): ಹಂಪಿ ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯ ಗಂಗಾವತಿ, ಆನೆಗೊಂದಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇರುವ 58 ಅನಧಿಕೃತ ಫಾರ್ಮ್ ಸ್ಟೇಗಳ ಅಕ್ರಮ ಸಕ್ರಮಕ್ಕೆ ಕಾನೂನಲ್ಲಿ ಅವಕಾಶವಿಲ್ಲ. ಹಾಗಾಗಿ ನಿಯಮಾನುಸಾರ ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸದನದಲ್ಲಿ ತಿಳಿಸಿದರು.
ಸೋಮವಾರ ಶೂನ್ಯವೇಳೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು, ಆನೆಗೊಂದಿ ಸೇರಿದಂತೆ ಸುತ್ತಮುತ್ತಲ ವಿವಿಧ ಪ್ರದೇಶಗಳಲ್ಲಿ ಸುಮಾರು 2000 ಕುಟುಂಬಗಳು ಹೋಂ ಸ್ಟೇ ಮಾದರಿಯಲ್ಲಿ ಫಾರ್ಮ್ ಸ್ಟೇ ನಡೆಸುತ್ತಿದ್ದು ಅದರಿಂದಲೇ ಜೀವನ ನಡೆಸುತ್ತಿವೆ. ಅಲ್ಲದೆ, ಇದರಿಂದ ವಿದೇಶಿ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ, ಸರ್ಕಾರ ಈ ಫಾರ್ಮ್ ಸ್ಟೇಗಳನ್ನು ತೆರವು ಮಾಡುತ್ತಿರುವುದರಿಂದ ಆ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗಾಗಿ ತೆರವು ಮಾಡಬಾರದು ಎಂದು ಮನವಿ ಮಾಡಿದರು.
ಕೊಪ್ಪಳದಲ್ಲಿ ವಿಂಡ್‌ಮಿಲ್ ಕಂಪೆನಿಗಳಿಂದ ರೈತರಿಗೆ ವಂಚನೆ ?
ಇದಕ್ಕೆ ಉತ್ತರಿಸಿದ ಸಚಿವರು, ಸರ್ಕಾರದ ನಿಯಮಾವಳಿಯಂತೆ ಹಂಪಿ ಪ್ರದೇಶಾಭಿವೃದ್ಧಿ ಮಹಾ ಯೋಜನೆ ಅಡಿ ಪ್ರಾಧಿಕಾರದ ವಲಯ ನಿಯಮಾವಳಿಗಳ ಪ್ರಕಾರ ಈ ಪ್ರಾಧಿಕಾರ ವ್ಯಾಪ್ತಿಗೆ ಒಳಪಡುವ 17 ಪ್ರದೇಶಗಳಲ್ಲಿ ಭೂ ಪರಿವರ್ತನೆ ಇಲ್ಲದೆ ಕೃಷಿ ಭೂಮಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮತ್ತಿತರೆ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ಹಾಗಾಗಿ ಆನೆಗೊಂದಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅನಧಿಕೃತವಾಗಿ 58 ಫಾಮ್‌ರ್ ಸ್ಟೇಗಳು ನಡೆಯುತ್ತಿರುವುದನ್ನು ಗುರುತಿಸಲಾಗಿದೆ. ಅಲ್ಲದೆ, ಈ ಅನಧಿಕೃತ ಫಾರ್ಮ್ ಸ್ಟೇಗಳ ತೆರವು ಸಂಬಂಧ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನಾ ಅರ್ಜಿ ಕೂಡ ದಾಖಲಾಗಿತ್ತು. ಹಾಗಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇವುಗಳನ್ನು ತೆರವು ಮಾಡಲಾಗುತ್ತಿದೆ. 58ರ ಪೈಕಿ 28 ಫಾರ್ಮ್ ಸ್ಟೇ ತೆರವು ಮಾಡಲಾಗಿದೆ. 31 ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿದ್ದೇವೆ. ಉಳಿದ 21 ಪ್ರಕರಣಗಳು ಇನ್ನೂ ನ್ಯಾಯಾಲಯದಲ್ಲಿವೆ. ಪ್ರಕರಣಗಳು ಇತ್ಯರ್ಥವಾದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಇವು ಪ್ರಮುಖ ಡ್ರಗ್ ತಾಣಗಳು:
ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ, ಈ ಫಾರ್ಮ್ ಸ್ಟೇಗಳು ರಾಜ್ಯ ಪ್ರಮುಖ ಡ್ರಗ್ ಕೇಂದ್ರಗಳಾಗಿವೆ. ಇಸ್ರೇಲಿಯನ್ನರು ಸೇರಿದಂತೆ ಬೇರೆ ಬೇರೆ ದೇಶದ ಡ್ರಗ್ ಪೆಡ್ಲರ್‌ಗಳು ಇಲ್ಲಿ ಸಿಕ್ಕಿಬಿದ್ದಿರುವ ಉದಾಹರಣೆಗಳಿವೆ. ಹಾಗಾಗಿ ಇದನ್ನು ಮಟ್ಟ ಹಾಕಲು ಕ್ರಮ ವಹಿಸಬೇಕು. ಅಗತ್ಯವಿದ್ದರೆ ಫಾಮ್‌ರ್ ಸ್ಟೇಗಳ ಸಕ್ರಮಕ್ಕೆ ಪರಿಶೀಲಿಸಬಹುದು ಎಂದರು. ಇದಕ್ಕೆ ಸಚಿವರು ಫಾರ್ಮ್ ಸ್ಟೇಗಳ ಅಕ್ರಮ ಸಕ್ರಮಕ್ಕೆ ಕಾನೂನಲ್ಲಿ ಅವಕಾಶವೇ ಇಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ